ಶಿವಮೊಗ್ಗ

‘ಸೂಡಾ’ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನಾಯಕ ಸಿ.ಜಿ. ಮಧುಸೂದನ್ ನೇಮಕ

ಸೂಡಾ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಮುಖಂಡ ಸಿ.ಜಿ. ಮಧುಸೂದನ್ ನೇಮಕಗೊಂಡಿದ್ದು, ಈ ಬರುವ ಶನಿವಾರದಂದು ಅವರು ಅಧಿಕೃತವಾಗಿ ತಮ್ಮ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

‘ಸೂಡಾ’ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನಾಯಕ ಸಿ.ಜಿ. ಮಧುಸೂದನ್ ಆಯ್ಕೆ SUDA

ಶಿವಮೊಗ್ಗ : ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಮುಖಂಡ ಸಿ.ಜಿ. ಮಧುಸೂದನ್ ನೇಮಕಗೊಂಡಿದ್ದು, ಈ ಬರುವ ಶನಿವಾರದಂದು ಅವರು ಅಧಿಕೃತವಾಗಿ ತಮ್ಮ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಸ್ಥಳೀಯವಾಗಿ ‘ಎನ್‌ಎಸ್‌ಯುಐ ಮಧು’ ಎಂದೇ ಚಿರಪರಿಚಿತರಾಗಿರುವ ಇವರು, ವಿದ್ಯಾರ್ಥಿ ದೆಸೆಯಿಂದಲೇ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟವರು. ಎನ್‌ಎಸ್‌ಯುಐ ಹಾಗೂ ಯುವ ಕಾಂಗ್ರೆಸ್‌ನ ವಿವಿಧ ಹಂತಗಳಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಅಪಾರ ಅನುಭವ ಅವರ ಬೆನ್ನಿಗಿದೆ.

ವಿದ್ಯಾರ್ಥಿ ನಾಯಕನಾಗಿ ಬೆಳೆದುಬಂದ ಹಾದಿ:

2002ರಲ್ಲಿ, ತಮ್ಮ ಎಸ್‌ಎಸ್‌ಎಲ್‌ಸಿ ವ್ಯಾಸಂಗದ ಹಂತದಲ್ಲಿಯೇ ದೇವೇಂದ್ರಪ್ಪನವರ ಪ್ರಭಾವದಿಂದ ಮಧುಸೂದನ್ ಅವರು ಎನ್‌ಎಸ್‌ಯುಐ (NSUI) ಸೇರ್ಪಡೆಗೊಂಡರು. ಆ ಕಾಲಘಟ್ಟದಲ್ಲಿ ಶಿವಮೊಗ್ಗದಲ್ಲಿ ಹಲವಾರು ವಿದ್ಯಾರ್ಥಿ ಸಂಘಟನೆಗಳು ಪ್ರಬಲವಾಗಿದ್ದರೂ, ಅವರು ಎನ್‌ಎಸ್‌ಯುಐ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡರು.

ಯುವ ಕಾಂಗ್ರೆಸ್ ಹಾಗೂ ಎನ್‌ಎಸ್‌ಯುಐನಲ್ಲಿ ಆಂತರಿಕ ಚುನಾವಣೆಗಳು ಆರಂಭವಾದ 2009-10ರ ಅವಧಿಯಲ್ಲಿ, ಕುವೆಂಪು ವಿವಿ ವ್ಯಾಪ್ತಿಯ ಶಿವಮೊಗ್ಗ-ಚಿಕ್ಕಮಗಳೂರು ಘಟಕಕ್ಕೆ ಪ್ರಪ್ರಥಮ ಚುನಾಯಿತ ಅಧ್ಯಕ್ಷರಾಗಿ ಇವರು ಆಯ್ಕೆಯಾದರು. 2010ರಲ್ಲಿ ಈ ಉಭಯ ಜಿಲ್ಲೆಗಳ ಪೂರ್ಣ ಅಧ್ಯಕ್ಷೀಯ ಜವಾಬ್ದಾರಿ ಅವರ ಹೆಗಲೇರಿತು. ತದನಂತರ 2011-12ರಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಭಡ್ತಿ ಪಡೆದು, ರಾಜ್ಯದಾದ್ಯಂತ ಯುವಕರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕೇಂದ್ರದಲ್ಲಿ ಮನಮೋಹನ್ ಸಿಂಗ್ ಹಾಗೂ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರವಿದ್ದಾಗ, ವಿದ್ಯಾರ್ಥಿ ವಲಯದಲ್ಲಿ ಎಬಿವಿಪಿಯ ತೀವ್ರ ಪೈಪೋಟಿಯ ನಡುವೆಯೂ ಶಿವಮೊಗ್ಗದಲ್ಲಿ ಎನ್‌‌ಎಸ್‌ಯುಐ ಸಂಘಟನೆಯನ್ನು ಬೇರೂರುವಂತೆ ಮಾಡುವಲ್ಲಿ ಮಧುಸೂದನ್ ಶ್ರಮಿಸಿದ್ದರು. ಇದರ ಫಲವಾಗಿ 2012-13ರಲ್ಲಿ ಶಿವಮೊಗ್ಗ ಜಿಲ್ಲಾ ಘಟಕವು ನವದೆಹಲಿಯಲ್ಲಿ ‘ಬೆಸ್ಟ್ ಡಿಸ್ಟ್ರಿಕ್ಟ್ ಪ್ರೆಸಿಡೆಂಟ್ ಆಫ್ ಇಂಡಿಯಾ’ ಪುರಸ್ಕಾರಕ್ಕೆ ಭಾಜನವಾಗಿತ್ತು. ಈ ಅವಧಿಯಲ್ಲಿ ಚೇತನ್ (ಪ್ರಶಸ್ತಿ ಸ್ವೀಕರಿಸಿದವರು), ಶ್ರೀಜಿತ್, ವಿಜಿ, ಹರ್ಷಿತ್ ಗೌಡ, ಬಾಲಾಜಿ ಸೇರಿದಂತೆ ಹಲವು ಯುವ ನಾಯಕರು ಸಂಘಟನೆಯನ್ನು ಬಲಪಡಿಸಿದ್ದರು.

ವಿದ್ಯಾರ್ಥಿಗಳ ಪರವಾದ ದನಿ:

ಶೈಕ್ಷಣಿಕ ಸಮಸ್ಯೆಗಳ ವಿರುದ್ಧದ ಹೋರಾಟಗಳಲ್ಲಿ ಮಧುಸೂದನ್ ಸದಾ ಮುಂಚೂಣಿಯಲ್ಲಿದ್ದರು. ಕುವೆಂಪು ವಿವಿಯಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆ, ಅಂಕಪಟ್ಟಿಗಳ ದೋಷ ಹಾಗೂ ಪರೀಕ್ಷಾ ಶುಲ್ಕ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆಗಳನ್ನು ರೂಪಿಸಿ ಶುಲ್ಕ ಕಡಿತಗೊಳಿಸುವಲ್ಲಿ ಯಶಸ್ವಿಯಾದರು. ಅಲ್ಲದೆ, ಶಾಲಾ-ಕಾಲೇಜುಗಳ ಡೊನೇಷನ್ ಹಾವಳಿ, ದೂರ ಶಿಕ್ಷಣದ ಅಕ್ರಮಗಳು ಹಾಗೂ ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿನ ಕಳಪೆ ಆಹಾರ ವ್ಯವಸ್ಥೆಯ ವಿರುದ್ಧ ದನಿ ಎತ್ತಿದ್ದರು. ಅವರು ಕೈಗೆತ್ತಿಕೊಂಡ ಶೇ. 80-90ರಷ್ಟು ವಿದ್ಯಾರ್ಥಿ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಟ್ಟಿರುವುದು ಅವರ ಸಂಘಟನಾ ಇತಿಹಾಸದಲ್ಲಿ ದಾಖಲಾಗಿದೆ.

ಯುವ ಕಾಂಗ್ರೆಸ್‌ನಲ್ಲಿನ ಮಹತ್ವದ ಜವಾಬ್ದಾರಿಗಳು:

ವಿದ್ಯಾರ್ಥಿ ರಾಜಕಾರಣದ ನಂತರ, 2017ರಲ್ಲಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡು ಸತತ ಐದಾರು ವರ್ಷಗಳ ಕಾಲ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧದ ಚಳುವಳಿಗಳನ್ನು ಮುನ್ನಡೆಸಿದರು.

ಇತ್ತೀಚೆಗೆ, ಅಂದರೆ 2026ರ ಆಗಸ್ಟ್‌ನಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯು ಇವರನ್ನು ರಾಜ್ಯ ಸಂಯೋಜಕರನ್ನಾಗಿ ನೇಮಿಸಿತು. ‘ಭಾರತ್ ಜೋಡೋ ಯುವ ಸಂಘ’ದ ಅಡಿಯಲ್ಲಿ ಯುವಕರ ಸೇರ್ಪಡೆಗಾಗಿ ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಹುಬ್ಬಳ್ಳಿ-ಧಾರವಾಡ, ಚಿಕ್ಕಮಗಳೂರು, ಹಾಸನ ಸೇರಿದಂತೆ ಬರೋಬ್ಬರಿ 11 ಜಿಲ್ಲೆಗಳ ಹೊಣೆಗಾರಿಕೆಯನ್ನು ಇವರಿಗೆ ನೀಡಲಾಗಿತ್ತು. ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ಹಾಗೂ ರಾಜ್ಯ ಉಸ್ತುವಾರಿ ನಿಗಮ್ ಭಂಡಾರಿ ಅವರ ನಿರ್ದೇಶನದ ಮೇರೆಗೆ ಆಗಸ್ಟ್ 25ರಂದು ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ಅವರು ಹೊರಡಿಸಿದ ಆದೇಶದಲ್ಲಿ ಮಧುಸೂದನ್, ನಾಗೇಶ್ ಕರಿಯಪ್ಪ ಹಾಗೂ ಸಿದ್ದು ಹಾಲೇಗೌಡ ಅವರಿಗೆ ಈ ರಾಜ್ಯ ಮಟ್ಟದ ಜವಾಬ್ದಾರಿ ನೀಡಲಾಗಿತ್ತು.

ಹೀಗೆ, ಸಾಮಾನ್ಯ ವಿದ್ಯಾರ್ಥಿಯಾಗಿ ಸಂಘಟನೆಗೆ ಕಾಲಿಟ್ಟು, ಎನ್‌ಎಸ್‌ಯುಐನ ರಾಜ್ಯ ಮಟ್ಟದ ನಾಯಕರಾಗಿ, ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಗೂ ರಾಜ್ಯ ಸಂಯೋಜಕರಾಗಿ ನಿರಂತರ ಸೇವೆ ಸಲ್ಲಿಸಿದ ಮಧುಸೂದನ್ ಅವರ ಸುದೀರ್ಘ ಪಯಣ ಇದೀಗ ‘ಸೂಡಾ’ ಅಧ್ಯಕ್ಷ ಗಾದಿಯ ಮೂಲಕ ಆಡಳಿತಾತ್ಮಕ ಜವಾಬ್ದಾರಿಯತ್ತ ಹೊರಳಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!