ಶಿವಮೊಗ್ಗ: “ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ವರಿಷ್ಠರು ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು, ಶಿವಮೊಗ್ಗ ಹಾಗೂ ಭದ್ರಾವತಿ ಅವಳಿನಗರಗಳ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ” ಎಂದು ಸೂಡಾದ ನೂತನ ಅಧ್ಯಕ್ಷರಾದ ಸಿ.ಜಿ. ಮಧುಸೂದನ್ ಭರವಸೆ ನೀಡಿದ್ದಾರೆ.
ನಗರದ ಸೂಡಾ ಕಚೇರಿಯಲ್ಲಿ ಎನ್‌ಎಸ್‌ಯುಐ, ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ಅವರು ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಅಧಿಕಾರ ಸ್ವೀಕರಿಸಿ ಮಧುಸೂದನ್ ಹೇಳಿದ್ದೇನು?
“ನಾನು ಸಣ್ಣ ವಯಸ್ಸಿನಲ್ಲೇ ಎನ್‌ಎಸ್‌ಯುಐ ಮೂಲಕ ಕಾಂಗ್ರೆಸ್ ಪ್ರವೇಶಿಸಿದೆ. ನಾನು ಸರ್ಕಾರಿ ಉದ್ಯೋಗಿಯಾಗಬೇಕು ಎಂಬುದು ನನ್ನ ಪೋಷಕರ ಆಸೆಯಾಗಿತ್ತು. ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಕೇಸುಗಳೆಲ್ಲಾ ಆದಾಗ ಅವರು ತುಂಬಾ ಬೇಸರಪಟ್ಟಿದ್ದರು. ಆದರೆ, ಇಂದು ನನಗೆ ಸಿಕ್ಕಿರುವ ಈ ಜವಾಬ್ದಾರಿ ನೋಡಿ ಅವರು ಪಡುತ್ತಿರುವ ಖುಷಿ ನನಗೆ ಅತ್ಯಂತ ತೃಪ್ತಿ ತಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ಕಷ್ಟಪಟ್ಟು ದುಡಿದ ನಿಷ್ಠಾವಂತರಿಗೆ ಯಾವತ್ತಿದ್ದರೂ ಪ್ರತಿಫಲ ಸಿಗುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ. ಈ ಸ್ಥಾನವನ್ನು ಜನಪರವಾಗಿ ಹಾಗೂ ಯುವಕರಿಗೆ ಸ್ಫೂರ್ತಿಯಾಗುವಂತೆ ಬಳಸಿಕೊಳ್ಳುತ್ತೇನೆ.
“ನಾನು ಸಾರ್ವಜನಿಕ ಕ್ಷೇತ್ರಕ್ಕೆ ಬರಲು ಮಧುಸೂದನ್ ಅವರೇ ಸ್ಪೂರ್ತಿ. ಪಕ್ಷಕ್ಕಾಗಿ ದುಡಿದ ಅವರಿಗೆ ಈ ಹುದ್ದೆ ಸಿಕ್ಕಿರುವುದು ನನಗೆ ಬಹಳ ಸಂತಸ ತಂದಿದೆ. ವರಿಷ್ಠರು ಶ್ರಮಜೀವಿಗಳನ್ನು ಗುರುತಿಸುತ್ತಾರೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ.”
– ಚೇತನ್ ಕೆ. ಗೌಡ, ಅಧ್ಯಕ್ಷರು, ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ
“ಯುವಕರಿಗೆ ಆದ್ಯತೆ ಮತ್ತು ಅಧಿಕಾರ ನೀಡಬೇಕು ಎಂಬುದು ರಾಹುಲ್ ಗಾಂಧಿಯವರ ಕನಸಾಗಿತ್ತು. ಅದು ಶಿವಮೊಗ್ಗದಿಂದಲೇ ಸಾಕಾರಗೊಳ್ಳುತ್ತಿದೆ. ಚೇತನ್ ಗೌಡ, ಹೆಚ್.ಸಿ. ಯೋಗೇಶ್ ಬಳಿಕ ಇದೀಗ ಮಧುಸೂದನ್ ಅವರಿಗೆ ಪ್ರಮುಖ ಜವಾಬ್ದಾರಿ ಸಿಕ್ಕಿದ್ದು, ಪಕ್ಷದ ಸಂಘಟನೆ ಇನ್ನಷ್ಟು ಗಟ್ಟಿಯಾಗಲಿದೆ.”
– ಆರ್. ಪ್ರಸನ್ನ ಕುಮಾರ್, ಮಾಜಿ ಎಂಎಲ್ಸಿ ಹಾಗೂ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ
“ಯುವಶಕ್ತಿಯೇ ಪಕ್ಷದ ಅತಿದೊಡ್ಡ ಆಸ್ತಿ. ಯುವಕರಿಗೆ ಸಿಗುವ ಇಂತಹ ಅವಕಾಶಗಳನ್ನು ಪಕ್ಷದ ಸಂಘಟನೆಗೆ ಮತ್ತು ಬಲವರ್ಧನೆಗೆ ಸದ್ಬಳಕೆ ಮಾಡಿಕೊಳ್ಳಬೇಕು.”
– ಇಸ್ಮಾಯಿಲ್ ಖಾನ್, ಮಾಜಿ ಜಿಲ್ಲಾಧ್ಯಕ್ಷ
“ಕಾಂಗ್ರೆಸ್ ಪಕ್ಷ ಎಂದಿಗೂ ತನ್ನ ಕಾರ್ಯಕರ್ತರನ್ನು ಕೈಬಿಡುವುದಿಲ್ಲ. ಈ ನೇಮಕದ ಹಿಂದೆ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಹಾಗೂ ಯುವ ನಾಯಕರಾದ ಬಸವೇಶ್, ಗಣೇಶ್ ಅವರ ಶ್ರಮವಿದೆ.”
– ಸಿ.ಎಂ. ಖಾದರ್, ಜಿ.ಪಂ. ಮಾಜಿ ಸದಸ್ಯ

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಮತ್ತು ಮುಖಂಡರಾದ ಎಸ್. ರವಿಕುಮಾರ್, ಬಿ.ಎಸ್. ಬಸವೇಶ್, ಧೀರರಾಜ್ ಹೊನ್ನವಿಲೆ, ಎಸ್.ಪಿ. ಶೇಷಾದ್ರಿ, ಎಂ.ಎಸ್. ಸಿದ್ದಪ್ಪ, ನೇತ್ರಾವತಿ ಗೌಡ, ತಂಗರಾಜ್, ಗಿರೀಶ್ ಬುಕ್ಲಾಪುರ, ವೈ. ತಿಮ್ಮರಾಜು, ವೀರೇಶ್, ಹಾಲೇಶ್, ಚರಣ್, ರವಿ ಮುಂತಾದವರು ಉಪಸ್ಥಿತರಿದ್ದರು.

