Udupi – Chikkamagaluru Loksabha Constituency | ನವ ವಧುವಿನಿಂದ ಮತದಾನ

0 249

ಚಿಕ್ಕಮಗಳೂರು : ಉಡುಪಿ – ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಮುಂಜಾನೆಯಿಂದ ಬಿರುಸು ಪಡೆದುಕೊಂಡಿದೆ.

ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಮಾದರಿಯಾಗುವ ಘಟನೆಗಳಿಗೂ ಕೂಡ ಮತದಾನ ಪ್ರಕ್ರಿಯೆ ಕಾರಣವಾಗಿದೆ.

ಒಂದೆಡೆ ಹಿರಿಯ ನಾಗರಿಕರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ರೆ ಮತ್ತೊಂದೆಡೆ ಹಸೆಮಣೆ ಏರುವ ಮುನ್ನ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ನವವಧುನಿಂದ ಮತದಾನ:
ಹಸೆಮಣೆ ಏರುವ ಮುನ್ನ ಮದುಮಗಳಾಗಿ ಅಲಂಕಾರಗೊಂಡು ಯುವತಿ ತನ್ನ ಬೂತ್ ನಲ್ಲಿ ಮೊದಲ ಮತದಾನ ಮಾಡಿ ಮದುವೆಗೆ ತೆರಳಿರುವ ಘಟನೆ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.

ಕುಂದೂರು ಸಮೀಪದ ತಳವಾರ ಗ್ರಾಮದ ಸೌಮ್ಯ ಎಂಬ ಯುವತಿಯ ಮದುವೆ ಕೊಪ್ಪ ಮೂಲದ ಸಂಜಯ್ ಎಂಬುವರೊಂದಿಗೆ ನಿಶ್ಚಯವಾಗಿತ್ತು. ಇಂದೇ ಮದುವೆ ನಿಗದಿಯಾಗಿದ್ದ ಕಾರಣ ಮದುವೆ ಮಂಟಪಕ್ಕೆ ತೆರಳವ ಮುನ್ನ ಮದುಮಗಳಾಗಿ ಅಲಂಕಾರಗೊಂಡ ಯುವತಿ ಮೊದಲ ಮತದಾನ ಮಾಡಿ ಮದುವೆ ಮಂಟಪಕ್ಕೆ ತೆರಳಿದ್ದಾರೆ.

ಮೂಡಿಗೆರೆ ಪಟ್ಟಣದ ಪ್ರೀತಂ ಹಾಲ್ ನಲ್ಲಿ ಮದುವೆ ನಡೆಯಲಿದೆ. ಮತದಾನದ ಬಳಿಕ ತಳವಾರ ಗ್ರಾಮದಿಂದ ಸುಮಾರು 20 ಕಿ.ಮೀ. ದೂರದ ಮೂಡಿಗೆರೆಗೆ ತೆರಳಿದ್ದಾರೆ.

ಕುಂದೂರು ಗ್ರಾಮದ ಬೂತ್ ನಂಬರ್ 86ರಲ್ಲಿ ಮತದಾನ ಮಾಡಿದ್ದಾರೆ. ಇದೇ ವೇಳೆ ದೇಶದ ಭದ್ರತೆಯ ರಕ್ಷಣೆಗಾಗಿ ಸುಭದ್ರತೆಯ ಸರ್ಕಾರ ನಿರ್ಮಾಣ ಮಾಡಲು ಮತದಾನ ಅತ್ಯಂತ ಮುಖ್ಯ ಎಂದು ಮದುಮಗಳ ಜೊತೆ ಆಕೆಯ 11 ಕುಟುಂಬಸ್ಥರು ಏಕಕಾಲದಲ್ಲಿ ಮತದಾನ ಮಾಡಿದ್ದಾರೆ.

ಮದುಮಗಳಾಗಿ ಮತದಾನಕ್ಕೆ ಬಂದ ಯುವತಿ ಸೌಮ್ಯಾಗೆ ಇತರೆ ಮತದಾರರು ಹಾಗೂ ಚುನಾವಣಾ ಸಿಬ್ಬಂದಿಗಳು ಕೂಡ ಶುಭ ಕೋರಿದ್ದಾರೆ.

ಹಿರಿಯ ನಾಗರೀಕರ ಉತ್ಸಾಹ:
ಮತದಾನದ ಪ್ರಕ್ರಿಯೆಯಲ್ಲಿ ಹಿರಿಯ ನಾಗರಿಕರು ಅತ್ಯಂತ ಉತ್ಸಾಹದಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಬೆಳಗ್ಗೆ ಏಳು ಗಂಟೆಗೆ ಮತಗಟ್ಟೆಗಳಿಗೆ ಆಗಮಿಸಿದ ಹಿರಿಯ ನಾಗರಿಕರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ನಗರದ ಬಸವನಹಳ್ಳಿಯ ಮತಗಟ್ಟೆಯಲ್ಲಿ ಮತದಾನ ಆರಂಭಕ್ಕೂ ಮುನ್ನವೇ ಆಗಮಿಸಿದ್ದ 80 ವರ್ಷದ ವೃದ್ದೆ ಕನ್ನಮ್ಮ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಸೊಪ್ಪು, ಹೂವಿನ ವ್ಯಾಪಾರಿಯಾಗಿರುವ ಕನ್ನಮ್ಮ ವ್ಯಾಪಾರಕ್ಕೆ ಹೋಗುವ ಹಿನ್ನೆಲೆಯಲ್ಲಿ ಮುಂಜಾನೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.

Leave A Reply

Your email address will not be published.

error: Content is protected !!