Categories: N.R pura

ರೈತ ದೇಶದ ಬೆನ್ನೆಲುಬು ; ಶ್ರೀ ರಂಭಾಪುರಿ ಜಗದ್ಗುರುಗಳು

ಎನ್‌.ಆರ್ ಪುರ: ಭಾರತ ದೇಶ ಹಳ್ಳಿಗಳ ದೇಶ. ಹಳ್ಳಿಗಳು ಉದ್ಧಾರವಾದರೆ ದೇಶ ಉದ್ಧಾರವಾಗುತ್ತದೆ. ಜನ ಸಮುದಾಯಕ್ಕೆ ಅನ್ನ ನೀಡುವ ನೇಗಿಲು ಯೋಗಿ ದೇಶದ ಬೆನ್ನೆಲುಬು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ನೇಗಿಲು ಯೋಗಿಯ ನೆನಹು ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.


ಔದ್ಯೋಗಿಕ ಕ್ಷೇತ್ರಕ್ಕಿರುವಷ್ಟು ಪ್ರೋತ್ಸಾಹ ರೈತ ಸಮುದಾಯಕ್ಕೆ ಇಲ್ಲ. ಕೆಲವು ಸಂದರ್ಭದಲ್ಲಿ ಅತಿವೃಷ್ಟಿಯಿಂದ ಇನ್ನು ಕೆಲವು ಸಂದರ್ಭದಲ್ಲಿ ಸಕಾಲಕ್ಕೆ ಮಳೆ ಬರದೇ ರೈತ ಸಂಕಷ್ಟ ಎದುರಿಸಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ಬೆಳೆದ ಬೆಳೆಗೆ ಯೋಗ್ಯ ಬೆಲೆ ದೊರಕದೇ ನಷ್ಟಕ್ಕೆ ಒಳಗಾಗಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತ ಕಾಪಾಡುವ ಕೆಲಸ ಮಾಡಬೇಕಾದುದು ಬಹಳಷ್ಟು ಅವಶ್ಯಕತೆ ಇದೆ. ರೈತರ ಕಲ್ಯಾಣ ಕಾರ್ಯದಲ್ಲಿ ಯಾವುದೇ ರಾಜಕೀಯ ನುಸುಳದೇ ಪ್ರಾಮಾಣಿಕವಾಗಿ ರೈತ ಸಮುದಾಯವನ್ನು ಮೇಲೆತ್ತುವ ಮಹತ್ಕಾರ್ಯ ಮಾಡಬೇಕಾಗಿದೆ. ಆರೋಗ್ಯ ಪೂರ್ಣ ಸದೃಢ ದೇಶ ನಿರ್ಮಾಣಕ್ಕೆ ಅಸಿ, ಮಸಿ ಮತ್ತು ಕೃಷಿಯ ಅಗತ್ಯವಿದೆ. ಇವುಗಳ ಬಗೆಗೆ ನಿರ್ಲಕ್ಷ್ಯ ಮನೋಭಾವ ಸಲ್ಲದು. ಹೆಚ್ಚು ಹೆಚ್ಚು ನೀರಾವರಿ ಸೌಲಭ್ಯ ಒದಗಿಸುವ ಉತ್ತಮವಾದ ಬೀಜ, ರಸಗೊಬ್ಬರ, ಕಡಿಮೆ ಬಡ್ಡಿ ದರದಲ್ಲಿ ಸಾಲ, ಉತ್ತಮವಾದ ಬೆಲೆ ದೊರಕಿಸಿಕೊಡುವುದರ ಮೂಲಕ ರೈತರ ಹಿತ ಕಾಪಾಡಬೇಕಾಗಿದೆ. ಹಳ್ಳಿಗಳಲ್ಲಿ ಔದ್ಯೋಗಿಕ ಘಟಕಗಳನ್ನು ಹುಟ್ಟು ಹಾಕುವುದರಿಂದ ನಗರ ಪ್ರದೇಶದ ಮೇಲಿರುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.


ಡಾ.ಗುರುದೇವ ಶಿವಾಚಾರ್ಯ ಜೀವನ ದರ್ಶನ ಕೃತಿಯನ್ನು ಲೋಕಾರ್ಪಣೆ ಮಾಡಿದ ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆ ಗೌರವಾಧ್ಯಕ್ಷ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಗುರುದೇವ ಶ್ರೀಗಳವರದು ದೂರದೃಷ್ಟಿ. ವೀರಶೈವ ಧರ್ಮ ಸಂಸ್ಕೃತಿ ಸಂವರ್ಧನೆಯಲ್ಲಿ ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ. ಆಯುರ್ವೇದ ಜ್ಞಾನ ಹೊಂದಿದ ಶ್ರೀಗಳವರು ಅನೇಕ ಬಡ ರೋಗಿಗಳ ಪಾಲಿಗೆ ದೇವರಾಗಿದ್ದರು. ಬಡವರ ನೊಂದ ಬೆಂದವರ ಪರವಾಗಿ ಸದಾ ಶ್ರಮಿಸಿದ ಶ್ರೇಯಸ್ಸು ಅವರದಾಗಿತ್ತೆಂದರು.


ಜಂಗಮ ವಾಹಿನಿ ನೂತನ ಪತ್ರಿಕೆಯನ್ನು ಅ.ಭಾ.ವೀ.ಮಹಾಸಭೆ ಜಿಲ್ಲಾಧ್ಯಕ್ಷ ಹೆಚ್.ಎಮ್.ಲೋಕೇಶ್ ಬಿಡುಗಡೆಗೊಳಿಸಿ ಮಾತನಾಡಿ, ರೈತರ ಬಾಳು ಬಲು ಕಷ್ಟ. ಶ್ರಮದ ಬದುಕು ನೆಮ್ಮದಿಗೆ ಮೂಲ. ಸಂಪ್ರದಾಯಕವಾದ ಕೃಷಿಯಿಂದ ರೈತರ ಜೀವನ ಉಜ್ವಲಗೊಳ್ಳಲು ಸಾಧ್ಯವಿಲ್ಲ. ಆಧುನಿಕ ವ್ಯವಸ್ಥೆಯಲ್ಲಿ ರೈತರು ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯ ಮಾಡಬೇಕಾಗುತ್ತದೆ. ಒಕ್ಕಲಿಗ ಒಕ್ಕಿದರೆ ಲೋಕವೆಲ್ಲ ಉಕ್ಕುವುದು. ಒಕ್ಕದಿದ್ದರೆ ದೇಶ ಬಿಕ್ಕುವುದು ಎಂದು ಸರ್ವಜ್ಞ ಕವಿ ಎಚ್ಚರಿಸಿದ್ದಾರೆ. ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಕಲ್ಯಾಣಕ್ಕಾಗಿ ಅನೇಕ ಕಾರ್ಯಗಳನ್ನು ಕೈಗೊಂಡಿವೆ. ಅದರ ಸದುಪಯೋಗವನ್ನು ರೈತರು ಪಡೆಯಲು ಮುಂದಾಗಬೇಕೆಂದರು.


ಮುಖ್ಯ ಅತಿಥಿಗಳಾಗಿ ವಿ.ಪ.ಸದಸ್ಯ ಎಸ್.ಎಲ್. ಭೋಜೇಗೌಡರು, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ವಿ.ಪ. ಸದಸ್ಯೆ ಗಾಯತ್ರಿ ಶಾಂತೇಗೌಡರು, ಬಿಲ್ರ‍್ಸ್ ವೀರೇಶ ಪಾಟೀಲ, ಶ್ರೀನಿವಾಸ ರೆಡ್ಡಿ ಭಾಗವಹಿಸಿದ್ದರು.
ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ ಹಸಿರು ಮಾನವ ಜೀವನದ ಉಸಿರು. ಹಸಿರು ಇಲ್ಲದಿದ್ದರೆ ಉಸಿರು ನಿಲ್ಲುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಹಸಿರು ಧ್ವಜ ಎತ್ತಿ ಶಾಂತಿ ಸಮೃದ್ಧಿ ಉಂಟು ಮಾಡಿದ್ದಾರೆ ಎಂದರು. ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ಮಾತನಾಡಿ, ರೈತರ ಶ್ರಮದ ಬೆವರಿನ ಫಲ ಶ್ರೇಷ್ಠವಾದುದು. ಅದಕ್ಕೆ ಬೆಲೆ ಕಟ್ಟಲಾಗದು. ದೇಹ ದುಡಿಮೆಗೆ ಮತ್ತು ಮನಸ್ಸನ್ನು ಭಗವಂತನಿಗೆ ಅರ್ಪಿಸಿಕೊಂಡು ನಡೆದಾಗ ಜೀವನ ಪಾವನವಾಗುವುತ್ತದೆ ಎಂದರು.


ಆನವಟ್ಟಿ ಹಿರೇಮಠದ ಗಂಗಾಧರಸ್ವಾಮಿ ಮಾತನಾಡಿ ರೈತ ಮಕ್ಕಳ ಬಾಳು ಉಜ್ವಲಗೊಳ್ಳುವುದರ ಬದಲಾಗಿ ಹಲವಾರು ಗೊಂದಲಗಳಿಂದ ನೊವು ಅನುಭವಿಸುವಂತಾಗಿದೆ. ನೌಕರಿ ಮಾಡುವವರನ್ನೇ ಎಲ್ಲ ಕನ್ಯೆಗಳು ಬಯಸುವ ಕಾರಣ ರೈತ ಮಕ್ಕಳಿಗೆ ಯಾರೂ ಹೆಣ್ಣು ಕೊಡಲು ಹಿಂಜರಿಯುತ್ತಾರೆ. ಹೀಗಾಗಿ ಜನಸಮುದಾಯದ ಏರು ಪೇರಿನಿಂದ ಅನ್ಯಾಯ ಅತ್ಯಾಚಾರಗಳು ಹೆಚ್ಚುತ್ತಿವೆ. ಇವುಗಳ ಬಗೆಗೆ ಗಂಭೀರ ಚಿಂತನೆಯನ್ನು ಎಲ್ಲರೂ ಮಾಡಿಕೊಳ್ಳಬೇಕಾಗಿದೆ ಎಂದರು.


ಮಾನ್ವಿಯ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು ಹಾಗೂ ನರಗುಂದದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಉಪದೇಶಾಮೃತ ನೀಡಿದರು. ಹಿರೂರು ಜಯಸಿದ್ಧೇಶ್ವರ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ದೇವಾಪುರ-ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯರು, ಅಚಲೇರಿಯ ಸೂತ್ರೇಶ್ವರ ಶಿವಾಚಾರ್ಯರು, ಬೇರುಗಂಡಿಮಠದ ರೇಣುಕ ಮಹಂತ ಶಿವಾಚಾರ್ಯರು, ಹರಪನಹಳ್ಳಿ ವರಸದ್ಯೋಜಾತ ಶಿವಾಚಾರ್ಯರು, ಚಳಗೇರಿ ವೀರಸಂಗಮೇಶ್ವರ ಶಿವಾಚಾರ್ಯರು, ಶಿರಸ್ಯಾಡ ಅಭಿನವ ಮುರುಗೇಂದ್ರ ಶಿವಾಚಾರ್ಯರು, ನವಿಲಕಲ್ಲು ಅಭಿನವ ಸೋಮನಾಥ ಶಿವಾಚಾರ್ಯರು, ಚಿಪ್ಪಲಕಟ್ಟಿ ಹಿರೇಮಠದ ಡಾ. ಕಲ್ಮೇಶ್ವರ ಸ್ವಾಮಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗೌರವ ಗುರುರಕ್ಷೆ ನೀಡಿ ಆಶೀರ್ವದಿಸಿದರು.


ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಆಲ್ದೂರಿನ ಬಿ.ಬಿ.ರೇಣುಕಾರ್ಯರಿಂದ ಸ್ವಾಗತ, ಕಾಳಂಗಿ ಶ್ರೀ ವೀರಗಲ್ಲೇಶ್ವರಿ ಭಜನಾ ಮಂಡಳಿಯವರಿಂದ ಸಂಗೀತ, ಕಲಬುರ್ಗಿಯ ಕುಮಾರ ಮಹದೇವ ಹಿರೇಮಠ ಇವರಿಂದ ಭರತ ನಾಟ್ಯ ಹಾಗೂ ಕನ್ನೂರು ಗುರುಮಠದ ಸೋಮನಾಥ ಶಿವಾಚಾರ್ಯರಿಂದ ನಿರೂಪಣೆ ನಡೆದವು.
ಬೆಳಿಗ್ಗೆ ಶಯನೋತ್ಸವ ಮಧ್ಯಾಹ್ನ ಶ್ರೀ ಜಗದ್ಗುರು ಶಿವಾನಂದ ಎಸ್ಟೇಟಿನಲ್ಲಿ ಪೂಜಾ-ಪ್ರಸಾದ ವಿನಿಯೋಗ ಜರುಗಿತು. ವನದುರ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ ಬಸವನಕೋವಿಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಕೆಂಡಾರ್ಚನೆ ನಡೆಯಿತು.

Malnad Times

Recent Posts

ದತ್ತಪೀಠದಲ್ಲಿ ಚಾಲಕನ ನಿಯಂತ್ರಣ ತಪ್ಪಿ 100 ಅಡಿ ಕಂದಕಕ್ಕೆ ಉರುಳಿದ ಪ್ರವಾಸಿ ಬಸ್ ! ಬಾಲಕ ಸಾವು

ಚಿಕ್ಕಮಗಳೂರು: ದತ್ತಪೀಠದಿಂದ ಮಾಣಿಕ್ಯಾಧಾರಕ್ಕೆ ತೆರಳುತ್ತಿದ ಪ್ರವಾಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ 100 ಅಡಿ ಕಂದಕಕ್ಕೆ ಉರುಳಿ ಬಿದ್ದು, ಆರು…

57 mins ago

ರಂಭಾಪುರಿ ಶ್ರೀಗಳ ಮೇ ತಿಂಗಳ ಪ್ರವಾಸ ಕಾರ್ಯಕ್ರಮ ವಿವರ

ಎನ್.ಆರ್.ಪುರ : ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಮೇ ತಿಂಗಳ ಪ್ರವಾಸ…

1 hour ago

Arecanut Today Price | ಏಪ್ರಿಲ್ 28ರ ಅಡಿಕೆ ರೇಟ್

ತೀರ್ಥಹಳ್ಳಿ : ಏ. 28 ಭಾನುವಾರ ಗುರುವಾರ ನಡೆದ ತೀರ್ಥಹಳ್ಳಿ ಮಾರುಕಟ್ಟೆಯ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

3 hours ago

ಮತದಾನ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ : ರಶ್ಮಿ

ಹೊಸನಗರ: ಭಾರತ ದೇಶದ ಪ್ರಜೆಗಳಾದ ನಾವು ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಿ ಮತದಾನ ಮಾಡಬೇಕು. ಮತದಾನ ಮಾಡುವುದು ಪ್ರತಿಯೊಬ್ಬ ದೇಶದ ಪ್ರಜೆಯ…

6 hours ago

Election Boycott |  ಲೋಕಸಭಾ ಚುನಾವಣಾ ಬಹಿಷ್ಕಾರಕ್ಕೆ ಮುಂದಾದ ಮಾಗಲು ಗ್ರಾಮಸ್ಥರು ! ಕಾರಣವೇನು ?

ಹೊಸನಗರ: ತಾಲ್ಲೂಕಿನ ನಗರ ಹೋಬಳಿಯ ಯಡೂರು ಗ್ರಾಪಂ ವ್ಯಾಪ್ತಿಯ ಕವರಿಯ ಮಾಗಲು ಗ್ರಾಮ ಮೂಲಭೂತ ಸೌಲಭ್ಯದಿಂಸಸಹ ದ ವಂಚಿತವಾಗಿದೆ ಎಂದು…

6 hours ago

ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ. 75.02 ರಷ್ಟು ಮತದಾನ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ.75.02 ರಷ್ಟು ಮತದಾನ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ…

13 hours ago