ಹೊಸನಗರ

ಹುಲಿಕಲ್ ಘಾಟ್ ದುರಂತ ; ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಹೊಸನಗರ ; ತಾಲೂಕಿನ ಹುಲಿಕಲ್ ಘಾಟಿಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಸಂಭವಿಸಿದ ಮಣ್ಣು ಕುಸಿತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟ ಘಟನೆಗೆ ಮುಖ್ಯಮಂತ್ರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಘಟನೆಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚಿಸಿ ಮಾಹಿತಿ ಪಡೆದಿರುವ ಅವರು, ಕುಟುಂಬಕ್ಕೆ ಆಧಾರವಾಗಿದ್ದ ಜೀವಗಳನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಮಾನವೀಯ ನೆಲೆಯಲ್ಲಿ ತಲಾ ₹ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಮೃತರ ಆತ್ಮಕ್ಕೆ ಶಾಂತಿ ಕೋರಿರುವ ಅವರು, ಈ ಕಠಿಣ ಸಮಯದಲ್ಲಿ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

‘ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹುಲಿಕಲ್ ಘಾಟಿ ತಿರುವಿನಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿಯ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟ ಸುದ್ದಿ ಕೇಳಿ‌ ದುಃಖವಾಯಿತು. ಮೃತ ದುರ್ದೈವಿ ಕಾರ್ಮಿಕರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ಸದಸ್ಯರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರೊಂದಿಗೆ ಮಾತುಕತೆ ನಡೆಸಿ, ಮಾಹಿತಿ ಪಡೆದಿದ್ದೇನೆ. ಕುಟುಂಬಕ್ಕೆ ಆಧಾರವಾಗಿದ್ದ ದುಡಿಯುವ ಜೀವಗಳು ಈ ಘಟನೆಯಲ್ಲಿ ಬಲಿಯಾಗಿದ್ದು, ಮಾನವೀಯ ನೆಲೆಯಲ್ಲಿ ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು.’
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಏನಿದು ಘಟನೆ ?

ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಸಂಭವಿಸಿದ ಮಣ್ಣು ಕುಸಿತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಘಾಟ್ ರಸ್ತೆಯ ತಿರುವಿನಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಮಣ್ಣಿನ ರಾಶಿ ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಮೃತರನ್ನು ನಗರ ಸಮೀಪದ ಚಕ್ಕಾರು ಗ್ರಾಮದ ರಾಘವೇಂದ್ರ (37), ಹಾವೇರಿ ಜಿಲ್ಲೆಯ ನೆಲಗಲ್ಲು ಗ್ರಾಮದ ಶಬ್ಬೀರ್ (40) ಮತ್ತು ರಾಜು (30) ಎಂದು ಗುರುತಿಸಲಾಗಿದೆ.

ಹುಲಿಕಲ್ ಘಾಟಿಯ ರಸ್ತೆ ಸುಧಾರಣಾ ಯೋಜನೆಯಡಿ ತಡೆಗೋಡೆ ನಿರ್ಮಿಸುವ ಕೆಲಸ ನಡೆಯುತ್ತಿತ್ತು. ಈ ವೇಳೆ ಕಾರ್ಮಿಕರು ತಳಪಾಯದ ಬಳಿ ಕೆಲಸ ಮಾಡುತ್ತಿದ್ದಾಗ ಮೇಲ್ಭಾಗದಿಂದ ಭಾರಿ ಪ್ರಮಾಣದ ಮಣ್ಣು ಮತ್ತು ಕಲ್ಲುಗಳು ಕುಸಿದು ಬಿದ್ದಿವೆ. ಮಣ್ಣಿನಡಿ ಸಿಲುಕಿದ ಮೂವರು ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]