ಶಿವಮೊಗ್ಗ

ಕಸ್ತೂರಿ ರಂಗನ್ ವರದಿ: ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಜನರ ಹಾದಿ ತಪ್ಪಿಸುತ್ತಿದೆ – ಆರಗ ಜ್ಞಾನೇಂದ್ರ ಕಿಡಿ

ಕಸ್ತೂರಿ ರಂಗನ್ ವರದಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಶಾಸಕ ಹಾಗೂ ಮಾಜಿ ಸಚಿವ ಆರಗ ಜ್ಞಾನೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

InShot 20260910 161159911

ಶಿವಮೊಗ್ಗ : ಕಸ್ತೂರಿ ರಂಗನ್ ವರದಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಶಾಸಕ ಹಾಗೂ ಮಾಜಿ ಸಚಿವ ಆರಗ ಜ್ಞಾನೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

​ನಗರದಲ್ಲಿ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟದ ರಕ್ಷಣೆ ಹಾಗೂ ಅಲ್ಲಿನ ನಿವಾಸಿಗಳ ಹಿತದೃಷ್ಟಿ ಎರಡನ್ನೂ ಸರಿದೂಗಿಸಿಕೊಂಡು ಹೋಗುವ ಬಗ್ಗೆ ಪಕ್ಷಾತೀತ ಚರ್ಚೆಯ ಅಗತ್ಯವಿದೆ. ಕಾಡಿನ ಅಂಚಿನ ಜನರನ್ನು ಹೊರಹಾಕಿ ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಿಲ್ಲ. ಸ್ಥಳೀಯರಿಗೆ ಯಾವುದೇ ಹಾನಿಯಾಗದಂತೆ ಒಗ್ಗೂಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ವರದಿಯ ಮೂಲ ಯುಪಿಎ ಸರ್ಕಾರ:

ಗಾಡ್ಗಿಲ್ ಮತ್ತು ಕಸ್ತೂರಿ ರಂಗನ್ ವರದಿಗಳ ಜಾರಿಗೆ ಅಡಿಪಾಯ ಹಾಕಿದ್ದೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ. 2009-10ರಲ್ಲಿ ಜೈರಾಮ್ ರಮೇಶ್ ಅವರು ಪರಿಸರ ಸಚಿವರಾಗಿದ್ದಾಗಲೇ ಗಾಡ್ಗಿಲ್ ಸಮಿತಿ ರಚನೆಯಾಗಿತ್ತು. ಆನಂತರ ಕಸ್ತೂರಿ ರಂಗನ್ ಸಮಿತಿಯನ್ನು ತಂದಿದ್ದೂ ಹಾಗೂ ಮೊದಲ ಅಧಿಸೂಚನೆ ಹೊರಡಿಸಿದ್ದೂ ಇದೇ ಯುಪಿಎ ಆಡಳಿತಾವಧಿಯಲ್ಲಿ ಎಂಬುದನ್ನು ಅವರು ನೆನಪಿಸಿದರು.

ನಾಯಕರ ವಿರುದ್ಧ ವಾಗ್ದಾಳಿ:

2008 ರಿಂದ 2018ರವರೆಗೆ ಕಿಮ್ಮನೆ ರತ್ನಾಕರ್ ಶಾಸಕರಾಗಿದ್ದಾಗಲೇ ಈ ವರದಿಗಳು ಬಂದಿದ್ದವು. ಅಂದು ತುಟಿ ಬಿಚ್ಚದ ಅವರು, ಈಗ ಚುನಾವಣೆ ದೃಷ್ಟಿಯಿಂದ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ವರದಿಯ ಬಗ್ಗೆ ಸರಿಯಾಗಿ ಅಧ್ಯಯನ ನಡೆಸದೆ, ಮನಬಂದಂತೆ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ತಿರುಗೇಟು ನೀಡಿದರು.

ಕೇರಳ ಮಾದರಿ ಅನುಸರಿಸಲು ಸಲಹೆ:

ಕೇವಲ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಬದಲು, ರಾಜ್ಯ ಸರ್ಕಾರವು ಕೇರಳದ ಮಾದರಿಯನ್ನು ಅನುಸರಿಸಬೇಕು. ಪಶ್ಚಿಮ ಘಟ್ಟದ ಯಾವ ಭಾಗಗಳನ್ನು ಸೇರಿಸಬೇಕು ಮತ್ತು ಯಾವುದನ್ನು ಕೈಬಿಡಬೇಕು ಎಂಬುದರ ಕುರಿತು ಸ್ಪಷ್ಟವಾದ ಹಾಗೂ ಸಮಗ್ರವಾದ ವರದಿಯನ್ನು ಸಿದ್ಧಪಡಿಸಿ ಕೇಂದ್ರಕ್ಕೆ ರವಾನಿಸಬೇಕು. ಇದೇ ವಿಚಾರವಾಗಿ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದಿರುವುದು ಸ್ವಾಗತಾರ್ಹವಾಗಿದ್ದು, ಪಕ್ಷಭೇದ ಮರೆತು ನಾವೆಲ್ಲರೂ ಇದರಲ್ಲಿ ಪಾಲ್ಗೊಂಡು ಅಂತಿಮ ನಿರ್ಧಾರಕ್ಕೆ ಬರಲಿದ್ದೇವೆ ಎಂದರು.

ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ:

ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ ಅವರು, ನೂರು ದಿನಗಳ ಆಡಳಿತದಲ್ಲಿ ಸರ್ಕಾರ ಯಾವುದೇ ಸಾಧನೆ ಮಾಡಿಲ್ಲ. ಬದಲಾಗಿ ಲಂಚಗುಳಿತನ ಮತ್ತು ಭ್ರಷ್ಟಾಚಾರಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಜನಾದೇಶವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

​ಬರಗಾಲ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆದ ಬಳ್ಳಾರಿ ಪಾದಯಾತ್ರೆಯು ಸರ್ಕಾರದ ವಿರುದ್ಧದ ಜನಾಕ್ರೋಶಕ್ಕೆ ಕನ್ನಡಿ ಹಿಡಿದಿದೆ. ಇದಕ್ಕೆ ಜನರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದು ಹೇಳಿದರು.

​ಕಾಂಗ್ರೆಸ್ ನಾಯಕರಿಗೆ ಕಸ್ತೂರಿ ರಂಗನ್ ವರದಿ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ, ತಮ್ಮದೇ ಸರ್ಕಾರದ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮೊದಲು ಜನರಿಗೆ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಹಾಗೂ ಗ್ರಾಮಾಂತರ ಪ್ರಧಾನ‌ ಕಾರ್ಯದರ್ಶಿ ಗಣೇಶ್ ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]