ರಿಪ್ಪನ್‌ಪೇಟೆ ; ಜೈನ ಧರ್ಮದ ಗಣಾಧಿಪತಿ ಗಣಧರಾಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರು ಬ್ರಹ್ಮಚಾರಿ ಸೂರಜ್ ಅವರಿಗೆ ಆಗಮೋಕ್ತ ಶಾಸ್ತ್ರದನ್ವಯ ವಿಧಿ-ವಿಧಾನಗಳನ್ನು ನೆರವೇರಿಸಿ, ಮುನಿಶ್ರೀಗಳ, ಆರ್ಯಿಕೆಯರ, ಭಟ್ಟಾರಕರ ಸಮಸ್ತ ಜೈನ ಶ್ರಾವಕ-ಶಾವಿಕೆಯರ ಅನುಮೋದನೆಯೊಂದಿಗೆ ಮುನಿದೀಕ್ಷೆಯನ್ನು ನೀಡಿ ಆಶೀರ್ವದಿಸಿದರು.
ಜೈನ ಧರ್ಮದಲ್ಲಿ ದಿಗಂಬರ ಮುನಿವರ್ಯ ಪದವಿ ಪ್ರಾಪ್ತಿಯಾಗಲು ಜೈನ ಧರ್ಮದ ಮೂಲ ಸಿದ್ಧಾಂತ, ತತ್ವ, ತೀರ್ಥಂಕರ, ಯಕ್ಷ-ಯಕ್ಷಿಯರ ಆರಾಧನೆಗಳ ಮೂಲಕ ಅಸ್ಥೆ ತಳೆದು ಜೈನಾಚಾರ ಪ್ರಸಾರಕ್ಕಾಗಿ ಹಾಗೂ ತೀರ್ಥಕ್ಷೇತ್ರಗಳ ಸಂರಕ್ಷಣೆಗಾಗಿ ಸದಾ ಪ್ರೇರಣೆ ನೀಡುತ್ತಿರಬೇಕು ಎಂದು ಗುರುವರ್ಯ ಶ್ರೀ 108 ಕುಂಥುಸಾಗರ ಮಹಾರಾಜರು ತಮ್ಮ ಆಶೀರ್ವಾದದಲ್ಲಿ ತಿಳಿಸಿದರು.

ಮುನಿಶ್ರೀ 108 ಸಂಯಮನಂದಿ ಮಹಾರಾಜರೆಂದು ನಾಮಕರಣ ಮಾಡಿ, ದೀಕ್ಷಾರ್ಥಿಯವರ ಧರ್ಮಶ್ರದ್ಧೆ, ನಿಷ್ಠೆ ಸಮಾಜದಲ್ಲಿ ಉತ್ತಮ ಸಂಸ್ಕಾರಯುತ ಜೀವನ ನಿರ್ವಹಿಸಲು ಮಾರ್ಗದರ್ಶನ ನೀಡಲೆಂದು ಹರಸಿದರು. ಶ್ರೀ ಕುಂಥುಸಾಗರ ಮಹಾರಾಜರಿಗೆ ಹೊಂಬುಜದಲ್ಲಿ 1967ನೇ ಇಸವಿಯಲ್ಲಿ ಶ್ರೀ 1008 ಪಾರ್ಶ್ವನಾಥ ತೀರ್ಥಂಕರ ಮಂದಿರ ಸನ್ನಿಧಿಯಲ್ಲಿ ಮುನಿದೀಕ್ಷೆ ನೀಡಲಾಗಿತ್ತೆಂದು ಸ್ಮರಿಸಿಕೊಂಡರು. ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಕೃಪಾಶೀರ್ವಾದ ದೊರಕಿದ ಪುಣ್ಯ ಅತಿಶಯ ಶ್ರೀ ಕ್ಷೇತ್ರವಾಗಿರುವ ಹೊಂಬುಜದಲ್ಲಿ ಬ್ರ. ಸೂರಜ್‌ರವರಿಗೆ ಮುನಿದೀಕ್ಷೆ ನೀಡುತ್ತಿರುವುದು ಯೋಗಾಯೋಗ ಎಂದು ಹೇಳಿದರು.
ಮುನಿಶ್ರೀ ದೀಕ್ಷೆ ಮಹತ್ವ :
ಜೈನ ಶ್ರಾವಕರಿಗೆ ಧರ್ಮಾಸಕ್ತಿ, ಧ್ಯಾನ, ಸ್ವಾಧ್ಯಾಯಗಳ ಮೂಲಕ ಜೈನ ಸಾಧುವಾಗಬೇಕೆಂಬ ಈರ್ಷ್ಯೆ ಇರುವುದನ್ನು ಗುರುವರ್ಯರು ಗಮನಿಸಿಸುತ್ತಾರೆ. ಬ್ರಹ್ಮಚಾರಿ ದೀಕ್ಷೆ ನೀಡಿ, ಕ್ಷುಲ್ಲಕ ಪದವಿ ಬಳಿಕ ನಿಗ್ರಂಥ ಮುನಿ ದೀಕ್ಷೆ ನೀಡುವ ಪದ್ಧತಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಧರ್ಮಾಸಕ್ತಿಯು ಮುನಿಶ್ರೀಗಳಾಗಿ ದಿಗಂಬರ ಜೈನ ಪರಂಪರೆಯಲ್ಲಿ ಸಾಧನೆ ಮಾಡುವರು.

ಪ್ರಾತಃ ಕಾಲದ ಪೂಜೆಯ ಬಳಿಕ ಕೇಶಲೋಚನ, ಆಭರಣ ವಸ್ತ್ರ ತ್ಯಾಗದೊಂದಿಗೆ ಮುನಿದೀಕ್ಷೆಯ ಪ್ರಕ್ರಿಯೆಯನ್ನು ಆಚಾರ್ಯ 108 ಗುಣಭದ್ರನಂದಿ ಮಹಾರಾಜರು, ಬಾಲಾಚಾರ್ಯ ಶ್ರೀ 108 ಶಾಂತಿನಂದಿ ಮಹಾರಾಜರು, ಏಲಾಚಾರ್ಯ ಶ್ರೀ 108 ಸಮಂತಭದ್ರನಂದಿ ಮಹಾರಾಜರು, ಪರಮಪೂಜ್ಯ ಶ್ರೀ 108 ಪ್ರಭಾಚಂದ್ರನಂದಿ ಮಹಾರಾಜರು, ಪರಮಪೂಜ್ಯ ಶ್ರೀ 108 ಶ್ರಮಣನಂದಿ ಮಹಾರಾಜರು, ಗಣನಿ ಆರ್ಯಿಕಾ 105 ಗುರುವಾಣಿ ಮಾತಾಜಿ, ಗಣನಿ ಆರ್ಯಿಕಾ 105 ಸೌರಭಮತಿ ಮಾತಾಜಿ, ಗಣನಿ ಆರ್ಯಿಕಾ 105 ಚಿನ್ಮಯಶ್ರೀ ಮಾತಾಜಿ, ಗಣನಿ ಆರ್ಯಿಕಾ 105 ಕೀರ್ತಿವಾಣಿ ಮಾತಾಜಿ, ಗಣನಿ ಆರ್ಯಿಕಾ 105 ಆದಿತ್ಯಶ್ರೀ ಮಾತಾಜಿ ಸಸಂಘದ ಮಾತಾಜಿಯವರು, ಹೊಂಬುಜ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಮುನಿದೀಕ್ಷೆಯ ಪೂರ್ವಭಾವಿ ಆರಾಧನೆಗಳನ್ನು ಸಾಂಗವಾಗಿ ನೆರವೇರಿಸಿದರು. ಮುನಿದೀಕ್ಷೆ ಪಡೆಯುವುದು ಪುಣ್ಯ ಪ್ರಾಪ್ತಿಯಾದಂತೆಯೇ ಸರಿ. ಮುನಿಧರ್ಮವನ್ನು ಪರಿಪಾಲಿಸುತ್ತಾ ದಿಗಂಬರ ಜೈನ ಪರಂಪರೆಯನ್ನು ಬೆಳೆಸುವ ಕೈಂಕರ್ಯ ಶ್ಲಾಘನೀಯ, ಔಚಿತ್ಯಪೂರ್ಣವಾದುದೆಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೊಲ್ಹಾಪುರ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕ ಮಹಾಸ್ವಾಮೀಜಿಯವರು ಉಪಸ್ಥಿತರಿದ್ದರು.
ಮುನಿಶ್ರೀ 108 ಸಯಮನಂದಿಯವರ ಪರಿಚಯ :
1999ರ ಮೇ 13ರಲ್ಲಿ ಗೋಕಾಕ್ ತಾಲ್ಲೂಕಿನ ಕೊಣ್ಣೂರಿನಲ್ಲಿ ಜನಿಸಿದ ಸೂರಜ್‌ರವರು ಮೆಕ್ಯಾನಿಕಲ್ ತಾಂತ್ರಿಕ ಶಿಕ್ಷಣ (ಡಿಪ್ಲೋಮಾ) ಪೂರೈಸಿದ್ದಾರೆ. ಇವರ ತಂದೆ ಅನೀಲ ತಪಕೀರೆ, ತಾಯಿ ಸಂತೋಷಿ. 2023ರ ಮೇ 15ರಂದು ಬ್ರಹ್ಮಚರ್ಯವ್ರತ ಪಡೆದಿದ್ದರು. ರಾಜ್ಯದ ಸೇರಿದಂತೆ ಕೊಣ್ಣೂರು ಜೈನ ಸಮಾಜದವರು ದೀಕ್ಷಾ ಗ್ರಹಣದ ವೇಳೆ ಹೊಂಬುಜ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದರು.

ಮುನಿದೀಕ್ಷೆಯ ಮೊದಲು ಶ್ರೀಕ್ಷೇತ್ರದಲ್ಲಿ ಬ್ರ. ಸೂರಜ್‌ರವರ ಶ್ರೀ ವಿಹಾರದಲ್ಲಿ ಹೊಂಬುಜ ಶ್ರೀಗಳು, ವರೂರು ಪರಮಪೂಜ್ಯ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಮಹಾಸ್ವಾಮೀಜಿ ಸ್ವಾಮೀಜಿ ಉಪಸ್ಥಿತರಿದ್ದರು.