ಹುಂಚ ಸ.ಹಿ.ಪ್ರಾ.ಶಾಲೆಗೆ 50 ಸಹಸ್ರ ರೂ. ಮೌಲ್ಯದ ವಸ್ತುಗಳ ಕೊಡುಗೆ | ಕುಡಿಯುವ ನೀರಿಲ್ಲದೆ ಗವಟೂರು ಗ್ರಾಮಸ್ಥರ ಪರದಾಟ

Written by malnadtimes.com

Published on:

ರಿಪ್ಪನ್‌ಪೇಟೆ ; ತಂದೆ ದಿ.ವೆಂಕಟರಾವ್ ಮತ್ತು ತಾಯಿ ಪುಟ್ಟಮ್ಮ ಇವರ ಸ್ಮರಣಾರ್ಥ ಹುಂಚ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಸುಮಾರು 50 ಸಹಸ್ರ ರೂ. ಮೌಲ್ಯದ ಡೆಸ್ಕ್ ಮತ್ತು ಲೈಬ್ರರಿ ಅಲ್ಮೆರಾಗಳನ್ನು ಮಕ್ಕಳಾದ ಹೆಚ್.ವಿ.ಶ್ರೀಪತಿರಾವ್ ಮತ್ತು ಇಂದುಮತಿ ಮತ್ತು ಕುಟುಂಬದವರು ಕೊಡುಗೆಯಾಗಿ ನೀಡಿದರು.

WhatsApp Group Join Now
Telegram Group Join Now
Instagram Group Join Now

ಕೊಡುಗೆಯಾಗಿ ನೀಡಿ ಮಾತನಾಡಿದ ಹೆಚ್.ವಿ.ಶ್ರೀಪತಿರಾವ್, ನಮ್ಮ ತಂದೆ, ತಾಯಿಯವರು ಜೀವಿತಾವಧಿಯಲ್ಲಿ ಸಾಕಷ್ಟು ದಾನ-ಧರ್ಮಗಳನ್ನು ಮಾಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದಿಂದ ದೂರು ಉಳಿದ ಬಡ ಮಕ್ಕಳಿಗೆ ಶಾಲೆಗೆ ಸೇರಿಸುವ ಮೂಲಕ ಅವರನ್ನು ಶಿಕ್ಷಣದ ವೆಚ್ಚವನ್ನು ಕೊಡುವುದರೊಂದಿಗೆ ಪ್ರೋತ್ಸಾಹಿಸಿದರು. ಅವರ ಸೇವೆಯನ್ನು ಮಕ್ಕಳಾದ ನಾವು ಪೂರ್ಣ ಮಾಡಲಾಗದಿದ್ದರೂ ಸಾಸುವೆಯಷ್ಟಾದರೂ ಮಾಡಿ ಮಾತಾ-ಪಿತೃಗಳ ಪರಿಪಾಲಕರಾಗೋಣ ಎಂದರು.

ಇದೇ ಸಂದರ್ಭದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಅಶ್ವತ್‌ನಾರಾಯಣ, ಗ್ರಾಮ ಪಂಚಾಯಿತಿ ಸದಸ್ಯ ದೇವೇಂದ್ರಪ್ಪ, ಸಿಆರ್‌ಪಿ ದೀಪಾ ಪ್ರಕಾಶ್ ಹಾಗೂ ಗ್ರಾಮಸ್ಥರು ಮತ್ತು ಶಾಲಾ ಶಿಕ್ಷಕ ವೃಂದ ಹಾಜರಿದ್ದು ಕೊಡಗೈ ದಾನಿಗಳಾದ ಶ್ರೀಪತಿರಾವ್ ಮತ್ತು ಇಂದುಮತಿ, ಶರತ್, ಅಂಬಿಕಾ, ರಶ್ಮಿ, ಅನಿತಾ, ರಾಜೇಶ್ ಕುಟುಂಬಸ್ಥರನ್ನು ಸನ್ಮಾನಿಸಿ ಗೌರವಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಎಲ್.ಮಹಾಲಕ್ಷ್ಮಿ ವಹಿಸಿದ್ದರು.
ಹುಂಚ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಎಸ್.ಡಿ.ಎಂ.ಸಿ.ಸದಸ್ಯರು ಹಾಗೂ ಗ್ರಾಮಸ್ಥರಾದ ಕಿರಣಕುಮಾರ್, ಯಧುಕುಮಾರ್, ನಾಗೇಂದ್ರ, ಶಿಕ್ಷಕರಾದ ಹೆಚ್.ಆರ್.ಕುಮಾರಸ್ವಾಮಿ, ಕೆ.ಹೆಚ್.ಕುಮಾರಿ ಸಿಂಧು, ಅನುಷ ಇನ್ನಿತರರು ಹಾಜರಿದ್ದರು.


ಸುಟ್ಟು ಹೋದ ವಿದ್ಯುತ್ ಪರಿವರ್ತಕ 5 ದಿನಗಳಿಂದ ಕುಡಿಯುವ ನೀರಿಲ್ಲದೆ ಗವಟೂರು ಗ್ರಾಮಸ್ಥರ ಪರದಾಟ

ರಿಪ್ಪನ್‌ಪೇಟೆ ; ಇಲ್ಲಿನ ಗವಟೂರು ಗ್ರಾಮದಲ್ಲಿ ಕಳೆದ ಐದಾರು ದಿನಗಳ ಹಿಂದೆ ವಿದ್ಯುತ್ ಪರಿವರ್ತಕ (ಟಿ.ಸಿ.) ಸುಟ್ಟು ಹೋಗಿದ್ದು ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯ ಗ್ರಾಮ ಪಂಚಾಯಿತ್‌ನಿಂದ ಪೈಪ್ ಲೈನ್ ಮೂಲಕ ಸರಬರಾಜು ಮಾಡಲಾಗುವ ಕುಡಿಯುವ ನೀರಿನ ನಲ್ಲಿಯಲ್ಲಿ ನೀರು ಬಾರದೇ ಇದ್ದು ಈ ಕುರಿತು ಗ್ರಾಮಾಡಳಿತದ ಗಮನಕ್ಕೆ ತರಲಾದರೂ ಕೂಡಾ ಪ್ರಯೋಜನವಾಗಿಲ್ಲ ಮತ್ತು ಮೆಸ್ಕಾಂ ಇಲಾಖೆಯವರಿಗೆ ಸಾರ್ವಜನಿಕರು ಗವಟೂರು ಬಳಿಯಲ್ಲಿ 63 ಕೆ.ವಿ.ಲೈನ್ ಟಿಸಿ ಸುಟ್ಟು ಹೋಗಿದೆ ಎಂದು ದೂರು ಸಲ್ಲಿಸಲಾದರೂ ಕೂಡಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಸಾರ್ವಜನಿಕರು ಆರೋಪಿಸಿದರು.

ಬೇಸಿಗೆ ಕಾಲವಾಗಿರುವ ಕಾರಣ ಇಲ್ಲಿನ ತೆರೆದ ಬಾವಿಗಳಲ್ಲಿ ನೀರು ತಳಮಟ್ಟಕ್ಕೆ ಹೋಗಿವೆ ಇನ್ನೂ ಬೋರ್‌ವೆಲ್ ನೀರು ತರೋಣವೆಂದರೆ ಟಿಸಿ ಸುಟ್ಟು ಹೋಗಿದ್ದು ಮೋಟರ್ ಆನ್ ಮಾಡುವುದಾದರೂ ಹೇಗೆ? ಎಂದು ಪ್ರಶ್ನಿಸುತ್ತಾರೆ.

ಈ ಕೂಡಲೇ ಸಂಬಂಧಿಸಿದ ಮೆಸ್ಕಾಂ ಮತ್ತು ಸ್ಥಳೀಯ ಗ್ರಾಮಾಡಳಿತ ಗಮನಹರಿಸಿ ಟಿ.ಸಿ ಅಳವಡಿಸಿ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವಂತೆ ಗವಟೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Leave a Comment