ಗುರಿ ಮುಟ್ಟುವ ತನಕ ನಿಲ್ಲದಿರಿ ; ರಂಭಾಪುರಿ ಜಗದ್ಗುರುಗಳು

Written by malnadtimes.com

Published on:

BALEHONNURU ; ಮಾನವ ಜೀವನಕ್ಕೆ ಗುರಿ ಮತ್ತು ಗುರು ಬಹಳ ಮುಖ್ಯ. ಜೀವನದಲ್ಲಿ ಹಣದ ಕೊರತೆಯಿದ್ದರೂ ಗುಣದ ಕೊರತೆಯಾಗಬಾರದು. ಮನುಷ್ಯ ನಿರಂತರ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು
ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಅವರು ಸೋಮವಾರ ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಗೆದ್ದ ವ್ಯಕ್ತಿಗೆ ಚಪ್ಪಾಳೆ ಹೊಡೆಯುವವರು ದೊಡ್ಡವರಾಗುವುದಿಲ್ಲ. ಬಿದ್ದ ವ್ಯಕ್ತಿಗಳನ್ನು ಕೈ ಹಿಡಿದು ಮೇಲೆತ್ತುವವರು ದೊಡ್ಡವರಾಗುತ್ತಾರೆ. ಹಾಲಿನ ಜೊತೆ ಸೇರಿದ ನೀರು ಸಹ ಹಾಲು ಆಗುತ್ತದೆ. ಅದೇ ರೀತಿ ಗುಣವಂತರ ಜೊತೆ ಆಶ್ರಯ ಪಡೆದ ಗುಣಹೀನನು ಸಹ ಗುಣವಂತನಾಗುತ್ತಾನೆ. ಜೀವನದಲ್ಲಿ ಹೊಂದಾಣಿಕೆ ಎಷ್ಟು ಮುಖ್ಯವೋ ಅರ್ಥ ಮಾಡಿಕೊಳ್ಳುವ ಮನಸ್ಸು ಅಷ್ಟೇ ಮುಖ್ಯ. ನಡೆಯುವ ದಾರಿಯಲ್ಲಿ ನಿಯತ್ತು ಇದ್ದರೆ ತಡೆಯೋ ತಾಕತ್ತು ಯಾರಿಗೂ ಇಲ್ಲವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ್ದಾರೆ. ಬೇಡ ಅಂದವರಿಗೆ ಭಾರ ಆಗುವುದರ ಬದಲು ಬೇಕು ಅನ್ನುವವರಿಗೆ ಬೆಳಕಾಗು ಸಾಕು ಎಂದು ಅನುಭಾವಿಗಳು ಹೇಳಿದ್ದುಂಟು ಎಂದರು. ಇದೇ ಸಂದರ್ಭದಲ್ಲಿ ಆಂಧ್ರ ರಾಜ್ಯದ ನಂದ್ಯಾಲ ವಿದ್ವಾನ್ ಎಸ್.ಎಂ.ರೇವಣಸಿದ್ಧಾಂತಿ ಇವರು ರಚಿಸಿದ ಚಂದ್ರ ಜ್ಞಾನಾಗಮದ ವ್ಯಾಖ್ಯಾನದ ತೆಲುಗು ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು.

ಈ ಪವಿತ್ರ ಸಮಾರಂಭದಲ್ಲಿ ಮಳಲಿ ಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ರಟ್ಟೀಹಳ್ಳಿ ವಿಶ್ವೇಶ್ವರ ದೇವರು ಮತ್ತು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಿದ್ಧಲಿಂಗಯ್ಯಸ್ವಾಮಿ ಹಿರೇಮಠ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಪ್ರಾತಃಕಾಲ ಕ್ಷೇತ್ರದ ಎಲ್ಲ ದೈವಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಿಪ್ಪನ್‌ಪೇಟೆ ಶಿವಮಂದಿರದ ಜಿ.ಎಮ್. ದುಂಡರಾಜಪ್ಪಗೌಡ ಮತ್ತು ಎಲ್ಲ ನಿರ್ದೇಶಕ ಮಂಡಳಿಯವರು, ಶ್ರೀ ಪೀಠದ ಸಂಪರ್ಕಾಧಿಕಾರಿ ಪ್ರಭುದೇವ ಕಲ್ಮಠ, ಲೆಕ್ಕಾಧಿಕಾರಿ ಸಂಕಪ್ಪನವರ, ಕನ್ನೂರು ನಾನಾಗೌಡ, ಹಳೇಬೀಡು ಚಂದ್ರಶೇಖರ ಇನ್ನಿತರ ಗಣ್ಯರು ಪಾಲ್ಗೊಂಡು ಗುರು ನಮನ ಸಲ್ಲಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

Leave a Comment