ರಿಪ್ಪನ್‌ಪೇಟೆ ; ಯುಗ ಯುಗಗಳಿಂದಲೂ ಆಚರಿಸಲ್ಪಡುವ ಹೊಸ ಸಂವತ್ಸರದ ಮೊದಲ ದಿನವೇ ಉಗಾದಿ-ಯುಗಾದಿ ಪರ್ವವಾಗಿದೆ. ಒಂದು ವರ್ಷ ಕಳೆದು ಹೊಸ ವರ್ಷಾಚರಣೆಯು ಪ್ರಕೃತಿಯ ಆರಾಧನೆಯ ಮರ್ಮವನ್ನು ತಿಳಿಹೇಳುವುದು ಎಂದು ಅತಿಶಯ ಶ್ರೀಕ್ಷೇತ್ರ ಹೊಂಬುಜದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಸ್ವಸ್ತಿಶ್ರೀ ವಿಶ್ವಾವಸು ಸಂವತ್ಸರದ ಸುದಿನದಂದು ಪ್ರವಚನದಲ್ಲಿ ತಿಳಿಸಿದರು.

ಪ್ರತಿಯೋರ್ವರು ಸದೃಢಚಿತ್ತರಾಗಿ ಆರೋಗ್ಯವಂತರಾಗಿ ಜ್ಞಾನ ಸಂಪಾದನೆಯೊಂದಿಗೆ ಸಮ್ಯಕ್ತ್ವ ಗುಣಗಳಿಂದ ಉತ್ತಮ ಸಂಸ್ಕೃತಿ-ಸಂಸ್ಕಾರದ ಜೀವನ ನಿರ್ವಹಣೆ ಮಾಡಬೇಕು. ವಿಘ್ನಗಳನ್ನು ನಿರಾತಂಕವಾಗಿ ಧೀ, ಧೃತಿ, ಸ್ಥೈರ್ಯಗಳಿಂದ ಎದುರಿಸುವಾಗ ಬೇಕು ಎನ್ನುತ್ತಾ ಪೂಜ್ಯಶ್ರೀಗಳವರು ಪಂಚಾಂಗ ಶ್ರವಣದ ಮಹತ್ವವನ್ನು ವಿವರಿಸುತ್ತಾ ಜೀವನದ ಮಾರ್ಗದರ್ಶಿಕೆಯಾಗಿ ಆಸ್ತಿಕರೆಲ್ಲರೂ ವೈಯುಕ್ತಿಕ ಜೀವನದಲ್ಲಿ ಯಶಸ್ಸು ಗಳಿಸುವಂತೆ ಹೇಳಿದರು.
ಸ್ವಗ್ರಾಮ, ರಾಜ್ಯ, ರಾಷ್ಟ್ರ ಅಭಿವೃದ್ಧಿಯಾಗಲು ಪಣ ತೊಡಲು ತಿಳಿಸಿ ಆದಾಯ-ವ್ಯಯಗಳು ಸಮತೋಲನದಲ್ಲಿರಲಿ ಎಂಬ ಧರ್ಮ ಸಂದೇಶ ಪ್ರಕಟಿಸಿದರು.

ಪರಮಪೂಜ್ಯ ಗಣಾಧಿಪತಿ ಗಣಧರಾಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರ ಸಾನಿಧ್ಯದಲ್ಲಿ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ವಿಶೇಷ ಪೂಜೆಗಳು ನೆರವೇರಿದವು.
ಮುನಿಶ್ರೀಗಳವರ ಸಸಂಘ, ಆರ್ಯಿಕೆಯರು ಉಪಸ್ಥಿತರಿದ್ದರು. ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀಕ್ಷೇತ್ರಪಾಲ, ಶ್ರೀ ನಾಗಸನ್ನಿಧಿಯಲ್ಲಿ ಆಗಮೋಕ್ತ ವಿಧಿಗಳು ಜರುಗಿದವು.

ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಮಂಡಳದ ಸದಸ್ಯರು, ಊರ-ಪರವೂರ ಭಕ್ತರು ಶ್ರದ್ಧಾ ಭಕ್ತಿಯ ಪೂಜೆ ಸಮರ್ಪಿಸಿ ಪೂಜ್ಯ ಮುನಿಶ್ರೀಗಳ, ಆರ್ಯಿಕೆಯರ, ಸ್ವಾಮಿಗಳವರ ಆಶೀರ್ವಾದ, ಶ್ರೀಫಲ ಮಂತ್ರಾಕ್ಷತೆ ಪಡೆದರು. ಪದ್ಮರಾಜ ಇಂದ್ರ, ಸಹಪುರೋಹಿತರು ಪೂಜಾ ವಿಧಿಗಳನ್ನು ನೆರವೇರಿಸಿದರು.
ಆಚಾರ್ಯ ಶ್ರೀಗಳವರ ವಿಹಾರ
ಪರಮಪೂಜ್ಯ ಗಣಾಧಿಪತಿ ಗಣಧರಾಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರು ಹಾಗೂ ಸಸಂಘದ ಮುನಿಶ್ರೀಗಳವರು ಸೋಂದಾ ಶ್ರೀಕ್ಷೇತ್ರದ ದರ್ಶನಾರ್ಥ ಇಂದು ವಿಹಾರ ಮುಂದುವರೆಸಿದರು.