ಹೊಸನಗರ ; ತಾಲ್ಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಮುಂದಿನ ದಿನದಲ್ಲಿ ಇನ್ನೂ ಹೆಚ್ಚು ಮಳೆಯಾಗುವ ಸಂಭವವಿರುವುದರಿಂದ ಮಳೆಯಿಂದ ಬೆಳೆ ಹಾನಿಯಾಗುವ ಸಂಭವವಿರುವುದರಿಂದ ತಾಲ್ಲೂಕಿನ ರೈತರು ಜುಲೈ 31ರ ಒಳಗೆ ಹವಾಮಾನಾಧರಿತ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ಎ.ವಿ.ಮಲ್ಲಿಕಾರ್ಜುನ ಹೇಳಿದರು.
ಇಲ್ಲಿನ ಸಹಾಯಕ ಕೃಷಿ ಇಲಾಖೆಯ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಡಿಕೆ, ಶುಂಠಿ, ಹಾಗೂ ಕಾಳುಮೆಣಸು ಬೆಳೆಗಳನ್ನು ಬೆಳೆದಿರುವ ಎಲ್ಲಾ ರೈತರು ತಕ್ಷಣ ಬೆಳೆ ವಿಮೆ ಮಾಡಿಸಿಕೊಂಡರೆ ಒಳ್ಳೆಯದು. ಇಲ್ಲವಾದರೇ ಈಗ ತಾಲ್ಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಮುಂದೆ ರೈತರು ತೊಂದರೆಗೆ ಒಳ ಪಡಬೇಕಾಗುತ್ತದೆ ಎಂದರು.
ಭತ್ತ ಬೆಳೆಯುವ ರೈತರಿಗೆ ಬೆಳೆವಿಮೆ ಮಾಡಿಸಲು 16.08.2025ರವರೆಗೆ ಕಾಲವಕಾಶವಿರುತ್ತದೆ ಎಂದರು.
ಬೆಳೆಗಳನ್ನು ಪಹಣಿಯಲ್ಲಿ ದಾಖಲಿಸಿ :
ತಾವು ಬೆಳದಿರುವ ಬೆಳೆಗಳ ಬಗ್ಗೆ ಪಹಣಿಯಲ್ಲಿ ದಾಖಲಿಸುವುದು ಕಡ್ಡಾಯವಾಗಿರುತ್ತದೆ. ಹೊಸನಗರ ತಾಲ್ಲೂಕಿನ ಕೆಲವು ರೈತರ ಪಹಣಿಗಳಲ್ಲಿ ಬೆಳೆದ ಬೆಳೆಗಳೆ ನಮೂದಾಗಿಲ್ಲ. ತಕ್ಷಣ ತಾಲ್ಲೂಕು ಕಛೇರಿಯನ್ನು ಸಂಪರ್ಕಿಸಿ ಪಹಣಿಯಲ್ಲಿ ತಾವು ಬೆಳೆದ ಬೆಳೆಗಳ ಬಗ್ಗೆ ದೃಢೀಕರಿಸಿಕೊಂಡು ಪಹಣಿಯಲ್ಲಿ ದಾಖಲಿಸಿಕೊಳ್ಳಿ ಎಂದರು.
ಬೆಳೆ ವಿಮೆ ಬಗ್ಗೆ ಮಾತನಾಡಿ, 2022-23ನೇ ಸಾಲಿನಲ್ಲಿ ಸುಮಾರು 5807 ಜನ ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದು ಅದರಲ್ಲಿ 15.69 ಲಕ್ಷ ಹಣವನ್ನು ಪರಿಹಾರದ ರೂಪದಲ್ಲಿ ನೀಡಲಾಗಿದೆ. ಅದರಂತೆ 2023-24ನೇ ಸಾಲಿನಲ್ಲಿ 6878 ಜನ ರೈತರು ಬೆಳೆ ವಿಮೆ ಮಾಡಿಸಿದ್ದು 17.95 ಲಕ್ಷ ರೂ. ಬೆಳೆ ವಿಮೆ ನೀಡಲಾಗಿದ್ದು 2024-2025ನೇ ಸಾಲಿನಲ್ಲಿ ಈಗಾಗಲೇ 6970 ಜನರು ಬೆಳೆ ವಿಮೆ ಮಾಡಿಸಿದ್ದಾರೆ ಎಂದರು.
ಹೊಸನಗರ ತಾಲ್ಲೂಕಿನಲ್ಲಿ 36 ಸಾವಿರ ಎಕರೆ ರೈತರು ಫಸಲು ಬೆಳೆದಿದ್ದು ಅದರೆ ಇಲ್ಲಿಯವರೆಗೆ 200 ಎಕರೆಯಷ್ಡು ಮಾತ್ರ ಸರ್ವೆ ಸಮೀಕ್ಷೆಯಾಗಿದೆ ಉಳಿದವರು ಸಮೀಕ್ಷೆಯಾಗದೇ ಇರುವುದರಿಂದ ರೈತರಿಗೆ ಕಷ್ಟವಾಗಲಿದ್ದು ತಕ್ಷಣ ರೈತರು ತಮ್ಮ ಮೊಬೈಲ್‌ನಲ್ಲಿಯೇ ಬೆಳೆ ಸಮೀಕ್ಷೆ ಮಾಡಿ ವರದಿ ನೀಡಿ ಎಂದರು.
ಮಳೆ ಮಾಪನ ಕೊರತೆ :
ಹೊಸನಗರ ತಾಲ್ಲೂಕಿನಲ್ಲಿ 30 ಗ್ರಾಮ ಪಂಚಾಯತಿಗಳಲ್ಲಿ ಮಳೆ ಮಾಪನವನ್ನು ಅಳವಾಡಿಸಲಾಗಿದೆ. ಆದರೆ ಒಂದೆರಡು ಮಾಪನಗಳು ಕೆಲಸ ನಿರ್ವಹಿಸುತ್ತಿದ್ದು ಉಳಿದವು ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ರೈತರ ಬೆಳೆಗಳ ಹಾನಿಯಾದ ಬಗ್ಗೆ ಮಾಹಿತಿ ದೊರೆಯುವುದಿಲ್ಲ ಸರ್ಕಾರ ಮತ್ತು ತಾಲ್ಲೂಕು ಆಡಳಿತ ಸರಿಪಡಿಸಬೇಕೆಂದು ಆಗ್ರಹಿಸಿದರು.
ಉತ್ತಮ ಫಸಲು ಬರಲು ಸಹಕರಿಸಿ :
ಹೊಸನಗರ ತಾಲ್ಲೂಕಿನ ರೈತರು ಸಾಕಷ್ಟು ಶ್ರಮಜೀವಿಗಳು ಅವರು ತಮ್ಮ ತೋಟ, ಗದ್ದೆಗಳಿಗೆ ಸರ್ಕಾರದಿಂದ ಮಾನ್ಯತೆ ಪಡೆದ ಗೊಬ್ಬರಗಳನ್ನು ಹಾಕುತ್ತಿದ್ದರೂ ರೈತರು ಎಣಿಸಿದಷ್ಟು ಇಳುವರಿ ಬರುತ್ತಿಲ್ಲ ಎಂದು ಹೇಳುತ್ತಿದ್ದು ವಿಜ್ಞಾನಿಗಳು ಇನ್ನಷ್ಟು ಕೊಳೆರೋಗದ ಮತ್ತು ಇತರೆ ಬೆಳೆ ರೋಗಗಳ ಬಗ್ಗೆ ಅಧ್ಯಯನ ನಡೆಸಿ ಉತ್ತಮ ರೀತಿಯಲ್ಲಿ ಗೊಬ್ಬರ, ಔಷಧಿಗಳನ್ನು ತಯಾರಿಸಿ ರೈತರಿಗೆ ನೀಡಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯೂನಿಯನ್ ಬ್ಯಾಂಕ್ ಅಧ್ಯಕ್ಷ ವಾಟಗೋಡು ಸುರೇಶ್, ಸಹಾಯಕ ಕೃಷಿ ಅಧಿಕಾರಿ ಸಚಿನ್ ಹಗಡೆ ಹಾಗೂ ಕೃಷಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.