ಹೊಸನಗರ

ಹೊಸನಗರ: ಗರ್ಭಿಣಿಯರ ಪರದಾಟಕ್ಕೆ ಬೀಳಲಿದೆಯೇ ಬ್ರೇಕ್? ಯುವ ಮುಖಂಡ ನಗರ ನಿತಿನ್ ನಿರಂತರ ಹೋರಾಟಕ್ಕೆ ಸಿಕ್ತು ದೊಡ್ಡ ಜಯ!

ವೈದ್ಯರ ಕೊರತೆ ಮತ್ತು ಹೆರಿಗೆ ಆಸ್ಪತ್ರೆಯಿಲ್ಲದೆ ನಲುಗುತ್ತಿದ್ದ ಹೊಸನಗರ ತಾಲ್ಲೂಕಿನ ಜನತೆಯ ಪರವಾಗಿ ಯುವ ಮುಖಂಡ ನಗರ ನಿತಿನ್ ನಡೆಸಿದ ಉಪವಾಸ ಸತ್ಯಾಗ್ರಹ ಹಾಗೂ ನಿರಂತರ ಒತ್ತಾಯಕ್ಕೆ ಜಯ ಸಿಕ್ಕಿದ್ದು, ತಕ್ಷಣವೇ ವೈದ್ಯರನ್ನು ನೇಮಿಸುವಂತೆ ಸಚಿವರು ಮತ್ತು ಶಾಸಕರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

Nagara Nithin

ಹೊಸನಗರ: ಭೌಗೋಳಿಕವಾಗಿ ರಾಜ್ಯದಲ್ಲೇ ಅತ್ಯಂತ ವಿಶಾಲವಾದ ಭೂವಿಸ್ತೀರ್ಣ ಹೊಂದಿರುವ ಹಾಗೂ ನಾಡಿಗೆ ಬೆಳಕು ನೀಡಲು ಸರ್ಕಾರಿ ಯೋಜನೆಗಳಿಗೆ ತನ್ನ ಫಲವತ್ತಾದ ಭೂಮಿಯನ್ನು ಕಳೆದುಕೊಂಡು ಸಂತ್ರಸ್ತವಾಗಿರುವ ಹೊಸನಗರ ತಾಲ್ಲೂಕು, ಆರೋಗ್ಯ ಸೇವೆಯಲ್ಲಿಯೂ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು.

WhatsApp Group Join Now
Telegram Group Join Now
Instagram Group Join Now

ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ಹಾಗೂ ತಜ್ಞ ವೈದ್ಯರಿಲ್ಲದ ಕಾರಣ ಪ್ರತಿ ವರ್ಷ ನೂರಾರು ಗರ್ಭಿಣಿಯರು ಚಿಕಿತ್ಸೆಗಾಗಿ ಸಾಗರ, ತೀರ್ಥಹಳ್ಳಿ ಹಾಗೂ ಶಿವಮೊಗ್ಗದಂತಹ ದೂರದ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಹಲವಾರು ಸಾವು-ನೋವುಗಳು ಸಂಭವಿಸುತ್ತಿದ್ದು, ಈ ಬಗ್ಗೆ ಸಾಮಾಜಿಕ ಹೋರಾಟಗಾರ ನಗರ ನಿತಿನ್ ನಡೆಸಿದ ನಿರಂತರ ಹೋರಾಟಕ್ಕೆ ಇದೀಗ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ.

ಹೋರಾಟದ ಹಿನ್ನೆಲೆ:

ಕಳೆದ ಜುಲೈ ತಿಂಗಳಿನಲ್ಲಿ ಹೊಸನಗರ ತಾಲ್ಲೂಕಿನ ಕೋಡೂರು ನಿವಾಸಿ ಬಾಣಂತಿ ಸುಮಾ ಎಂಬುವವರು ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ದುರ್ಮರಣಕ್ಕೀಡಾಗಿದ್ದರು. ಈ ಘಟನೆಯನ್ನು ಖಂಡಿಸಿ, ಮೃತ ಸುಮಾ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಹಾಗೂ ತಾಲ್ಲೂಕಿನಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ಸ್ಥಾಪಿಸಬೇಕೆಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ನಗರ ನಿತಿನ್ ಅವರು ದಿನಾಂಕ 2026ರ ಜು.18 ರಂದು ಹೊಸನಗರ ಸಾರ್ವಜನಿಕ ಆಸ್ಪತ್ರೆಯ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದರು.

ಅಂದು ತಾಲ್ಲೂಕಿನ ಶೇ. 80ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯಿರುವುದು, ನೆಟ್‌ವರ್ಕ್ ಹಾಗೂ ಸಾರಿಗೆ ಸಂಪರ್ಕವಿಲ್ಲದ ದುರ್ಗಮ ಹಳ್ಳಿಗಳಲ್ಲಿ ಹಾವು ಕಡಿತ, ಹೃದಯಾಘಾತ ಮತ್ತು ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಸಿಗದೆ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಜೊತೆಗೆ ಪ್ರವಾಸಿ ಕೇಂದ್ರವಾದ ಕೊಡಚಾದ್ರಿಗೆ ಬರುವ ಪ್ರವಾಸಿಗರು ಹಾಗೂ ಸ್ಥಳೀಯರ ಅನುಕೂಲಕ್ಕಾಗಿ ಕಟ್ಟಿನಹೊಳೆಯಲ್ಲಿ ತುರ್ತು ಚಿಕಿತ್ಸಾ ಆಂಬುಲೆನ್ಸ್ ಸೇವೆ ಒದಗಿಸುವಂತೆಯೂ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರೂ, ತಾಲ್ಲೂಕಿನಲ್ಲಿ ಸಮರ್ಪಕ ಹೆರಿಗೆ ಸಂಬಂಧಿತ ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗಿರಲಿಲ್ಲ.

ಸಚಿವರು ಹಾಗೂ ಶಾಸಕರಿಂದ ತಕ್ಷಣದ ಆದೇಶ:

ಆರೋಗ್ಯ ವ್ಯವಸ್ಥೆಯಲ್ಲಿ ಯಾವುದೇ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ, ನ.21 ರಂದು ತಾಲ್ಲೂಕು ಕೇಂದ್ರದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ನಡೆದ ‘ಪ್ರಜಾಸೇವೆ’ ಕಾರ್ಯಕ್ರಮದಲ್ಲಿ ನಗರ ನಿತಿನ್ ಅವರು ಮತ್ತೊಮ್ಮೆ ಸುಸಜ್ಜಿತ ಹೆರಿಗೆ ಆಸ್ಪತ್ರೆ ಸ್ಥಾಪನೆ ಹಾಗೂ ವೈದ್ಯರ ನೇಮಕಕ್ಕೆ ಆಗ್ರಹಿಸಿ ಅಧಿಕೃತ ಮನವಿ ಪತ್ರ ಸಲ್ಲಿಸಿದರು.

ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಹಾಗೂ ಸ್ಥಳದಲ್ಲಿದ್ದ ಶಾಸಕರಾದ ಆರಗ ಜ್ಞಾನೇಂದ್ರ ಮತ್ತು ಬೇಳೂರು ಗೋಪಾಲಕೃಷ್ಣ ತಕ್ಷಣವೇ ಸಂಬಂಧಪಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಈ ಕೂಡಲೇ ತಾಲ್ಲೂಕಿಗೆ ಅಗತ್ಯವಿರುವ ವೈದ್ಯರ ನೇಮಕ ಮಾಡುವಂತೆ ಸ್ಥಳದಲ್ಲೇ ಆದೇಶ ನೀಡಿದ್ದಾರೆ. ಯುವ ಮುಖಂಡ ನಗರ ನಿತಿನ್ ಅವರ ಈ ಜನಪರ ಕಾಳಜಿ ಹಾಗೂ ನಿರಂತರ ಹೋರಾಟಕ್ಕೆ ತಾಲ್ಲೂಕಿನ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]