ಸಾಗರ: ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆ ಹೊರಬಿದ್ದಿರುವ ಬೆನ್ನಲ್ಲೇ, ಮಾಜಿ ಸಚಿವ ಹರತಾಳು ಹಾಲಪ್ಪ ಮಲೆನಾಡು ಮತ್ತು ಕರಾವಳಿ ಭಾಗದ ರೈತರ ಪರವಾಗಿ ರಾಜ್ಯ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದ್ದಾರೆ.
ಕಸ್ತೂರಿ ರಂಗನ್ ವರದಿಯನ್ನು ಕೇವಲ ವಿಧಾನಸಭೆಯಲ್ಲಿ ಏಕ ಸಾಲಿನ ನಿರ್ಣಯದ ಮೂಲಕ ತಿರಸ್ಕರಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಾಗಿ, ಕೇರಳ ಸರ್ಕಾರ ಅನುಸರಿಸಿದ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಸ್ಥಳಮಟ್ಟದ ಭೌತಿಕ ಸರ್ವೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಳೆಯ ಕರಡನ್ನೇ ಮತ್ತೆ ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ವರದಿ ಯಥಾವತ್ತಾಗಿ ಜಾರಿಯಾದರೆ ಪಶ್ಚಿಮ ಘಟ್ಟ ವ್ಯಾಪ್ತಿಯ ರೈತರು, ಕಾರ್ಮಿಕರು ಹಾಗೂ ಸ್ಥಳೀಯ ನಿವಾಸಿಗಳ ಬದುಕು ಅತಂತ್ರವಾಗುವ ಸಾಧ್ಯತೆ ಇದೆ ಎಂದು ಹಾಲಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಲೇಖನವನ್ನು ಮುಂದುವರಿಸಿ ಓದಿ
ಕೇಂದ್ರ ಸರ್ಕಾರದ ಮೇಲೆ ಅಂತಾರಾಷ್ಟ್ರೀಯ ಒತ್ತಡ, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹಾಗೂ ಸುಪ್ರೀಂ ಕೋರ್ಟ್‌ನ ಕಣ್ಗಾವಲು ಇರುವುದರಿಂದ, ಕೇವಲ ತಿರಸ್ಕಾರದ ನಿರ್ಣಯಗಳು ಕಾನೂನಾತ್ಮಕವಾಗಿ ಸಾಕಾಗುವುದಿಲ್ಲ. ವೈಜ್ಞಾನಿಕ ಆಧಾರದ ಮೇಲೆ ರಾಜ್ಯದ ನಿಲುವು ಮಂಡಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ಕೇರಳದಲ್ಲಿ ಉಪಗ್ರಹ ಸಮೀಕ್ಷೆಯ ಬದಲಾಗಿ ಸ್ಥಳಮಟ್ಟದ ಭೌತಿಕ ಸರ್ವೆ ನಡೆಸಲಾಗಿತ್ತು. ಅದರ ಮೂಲಕ ವಸತಿ ಪ್ರದೇಶಗಳು ಮತ್ತು ಕೃಷಿ ಭೂಮಿಯನ್ನು ಪರಿಸರ ಸೂಕ್ಷ್ಮ ವಲಯದಿಂದ ಕೈಬಿಟ್ಟು, ESA ವ್ಯಾಪ್ತಿಯನ್ನು ಗಣನೀಯವಾಗಿ ಕಡಿತಗೊಳಿಸಲಾಯಿತು. ಅದೇ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಬೇಕು ಎಂದು ಹಾಲಪ್ಪ ಸಲಹೆ ನೀಡಿದ್ದಾರೆ.
ಕರ್ನಾಟಕದಲ್ಲಿ ಕಂದಾಯ, ಅರಣ್ಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಜಂಟಿಯಾಗಿ ಗ್ರಾಮಮಟ್ಟದಲ್ಲಿ ಭೌತಿಕ ಸರ್ವೆ ನಡೆಸಬೇಕು. ಜನವಸತಿ ಪ್ರದೇಶ, ಕೃಷಿ ಭೂಮಿ, ತೋಟಗಾರಿಕೆ ಪ್ರದೇಶ ಹಾಗೂ ಸ್ಥಳೀಯರ ಜೀವನೋಪಾಯಕ್ಕೆ ಸಂಬಂಧಿಸಿದ ಅಂಶಗಳನ್ನು ಸ್ಪಷ್ಟವಾಗಿ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪರಿಸರವೂ ಉಳಿಯಬೇಕು, ಜನರ ಜೀವನವೂ ಉಳಿಯಬೇಕು. ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಹೊಸ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರೆ ಮಾತ್ರ ಮಲೆನಾಡು ಮತ್ತು ಕರಾವಳಿ ಭಾಗದ ಜನರಿಗೆ ಶಾಶ್ವತ ನ್ಯಾಯ ಸಿಗುತ್ತದೆ ಎಂದು ಹರತಾಳು ಹಾಲಪ್ಪ ಹೇಳಿದ್ದಾರೆ.

