ಸಾಗರ: ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಚರ್ಚೆಗೆ ಬಂದಿರುವ ಕಸ್ತೂರಿ ರಂಗನ್ ವರದಿಯನ್ನು ಈಗಿನ ರೂಪದಲ್ಲಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಸ್ಪಷ್ಟಪಡಿಸಿದ್ದಾರೆ. ಈ ವರದಿ ಕಾಂಗ್ರೆಸ್ ಅವಧಿಯಲ್ಲಿ ರೂಪುಗೊಂಡದ್ದು, ಆದರೆ ಇಂದು ವಾಸ್ತವ ತಿಳಿಯದೇ ಕೆಲವರು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಸಾಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಲೆನಾಡಿನ ರೈತರು, ಬಡವರು, ಕೂಲಿ ಕಾರ್ಮಿಕರು ಹಾಗೂ ಸಾಮಾನ್ಯ ಜನರ ಬದುಕಿಗೆ ದೊಡ್ಡ ಹೊಡೆತ ಬೀಳಲಿದೆ. ಪರಿಸರ ಸಂರಕ್ಷಣೆ ಅಗತ್ಯವಾದರೂ, ಅದರ ಹೆಸರಿನಲ್ಲಿ ತೋಟ, ಮನೆ, ರಸ್ತೆ, ಶಾಲೆ-ಕಾಲೇಜು, ಜನವಸತಿ ಪ್ರದೇಶಗಳನ್ನು ಸಂಕಷ್ಟಕ್ಕೆ ತಳ್ಳುವುದು ಸರಿಯಲ್ಲ ಎಂದು ಹೇಳಿದರು.
ಕೇಂದ್ರದಲ್ಲಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ಜೈರಾಮ್ ರಮೇಶ್ ಮತ್ತು ಜಯಂತಿ ನಟರಾಜನ್ ಅವರ ಅವಧಿಯಲ್ಲಿ ಮಾಧವ್ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ಸಮಿತಿಗಳನ್ನು ರಚಿಸಲಾಗಿತ್ತು. 2013ರ ಮಾರ್ಚ್‌ನಲ್ಲಿ ಕಸ್ತೂರಿ ರಂಗನ್ ವರದಿ ಸಲ್ಲಿಕೆಯಾಯಿತು. ಅದರ ನಂತರ 2014ರ ಮೇ ತಿಂಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೀಗಿರುವಾಗ ಈ ವರದಿಯ ಮೂಲದ ಬಗ್ಗೆ ತಪ್ಪು ಮಾಹಿತಿ ಹರಡುವುದು ಸರಿಯಲ್ಲ ಎಂದು ಹಾಲಪ್ಪ ಹೇಳಿದರು.
ಮಲೆನಾಡಿನ ರೈತರ ಹೊಟ್ಟೆಯ ಮೇಲೆ ಹೊಡೆಯುವ ಯಾವುದೇ ನಿರ್ಧಾರವನ್ನು ಸಹಿಸುವುದಿಲ್ಲ. ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಇಲ್ಲಿನ ಜನರ ಬದುಕನ್ನೇ ಅತಂತ್ರಗೊಳಿಸುವ ಪ್ರಯತ್ನ ನಡೆದರೆ ಅದಕ್ಕೆ ಪಕ್ಷಾತೀತವಾಗಿ ಪ್ರತಿರೋಧ ವ್ಯಕ್ತವಾಗಲಿದೆ ಎಂದು ಅವರು ಎಚ್ಚರಿಸಿದರು.
ಯುನೆಸ್ಕೋ ಪಶ್ಚಿಮ ಘಟ್ಟವನ್ನು ಪಾರಂಪರಿಕ ಪಟ್ಟಿಗೆ ಸೇರಿಸುವ ಪ್ರಸ್ತಾಪ ಬಂದಾಗಲೂ ತಾವು ವಿಧಾನಸಭೆಯಲ್ಲಿ ಖಾಸಗಿ ಮಸೂದೆ ಮಂಡಿಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದನ್ನು ಹಾಲಪ್ಪ ನೆನಪಿಸಿಕೊಂಡರು. ಮಲೆನಾಡಿನ ಪರಿಸರ ಉಳಿಯಬೇಕು, ಆದರೆ ಇಲ್ಲಿ ತಲೆಮಾರುಗಳಿಂದ ವಾಸಿಸುತ್ತಿರುವ ಜನರ ಬದುಕು ಕೂಡ ಉಳಿಯಬೇಕು ಎಂಬುದು ತಮ್ಮ ನಿಲುವು ಎಂದು ಹೇಳಿದರು.
ಪ್ರಸ್ತುತ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕು. ಮಲೆನಾಡಿನ ಕೃಷಿ ಭೂಮಿ, ತೋಟಗಳು, ಜನವಸತಿ ಪ್ರದೇಶಗಳು, ಶಾಲಾ-ಕಾಲೇಜುಗಳು, ರಸ್ತೆ, ನದಿ ಮತ್ತು ಹಳ್ಳಗಳನ್ನು ಪರಿಸರ ಸೂಕ್ಷ್ಮ ವಲಯದಿಂದ ಕೈಬಿಡಬೇಕು. ನಿಯಮಗಳನ್ನು ಕೋರ್ ಅರಣ್ಯ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯ ಸರ್ಕಾರ ಕರೆಯಲಿರುವ ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿಯ ಸಾಧಕ-ಬಾಧಕಗಳ ಬಗ್ಗೆ ಗಂಭೀರವಾಗಿ ಮತ್ತು ವ್ಯವಸ್ಥಿತವಾಗಿ ಚರ್ಚೆ ನಡೆಯಬೇಕು. ಕೇವಲ ರಾಜಕೀಯ ಹೇಳಿಕೆಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಮಲೆನಾಡಿನ ವಾಸ್ತವ ಸ್ಥಿತಿ, ರೈತರ ಭೂಮಿ, ಜನವಸತಿ ಮತ್ತು ಸ್ಥಳೀಯ ಜೀವನೋಪಾಯವನ್ನು ದಾಖಲೆಗಳೊಂದಿಗೆ ಕೇಂದ್ರದ ಮುಂದೆ ಮಂಡಿಸಬೇಕು ಎಂದು ಹೇಳಿದರು.
ಕೇರಳ ಸರ್ಕಾರ ಅನುಸರಿಸಿದ ಮಾದರಿಯನ್ನು ಕರ್ನಾಟಕ ಸರ್ಕಾರವೂ ಅಧ್ಯಯನ ಮಾಡಬೇಕು ಎಂದು ಹಾಲಪ್ಪ ಸಲಹೆ ನೀಡಿದರು. ಕೇರಳದಲ್ಲಿ ಅರಣ್ಯ, ಪಂಚಾಯತ್ ರಾಜ್ ಮತ್ತು ಕಂದಾಯ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ, ಜನವಸತಿ ಪ್ರದೇಶಗಳನ್ನು ವರದಿ ವ್ಯಾಪ್ತಿಯಿಂದ ಹೊರಗಿಟ್ಟಿವೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ನೈಜ ಭೌತಿಕ ಸರ್ವೇ ನಡೆಯಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಸೂಕ್ಷ್ಮ ವಲಯ ಎಂದು ಗುರುತಿಸಿರುವ 20,668 ಚದರ ಕಿಲೋಮೀಟರ್ ಪ್ರದೇಶದ ಪೈಕಿ ದೊಡ್ಡ ಪ್ರಮಾಣದ ಜನವಸತಿ ಮತ್ತು ಕೃಷಿ ಪ್ರದೇಶಗಳಿವೆ. ಕನಿಷ್ಠ 10,000 ಚದರ ಕಿ.ಮೀ. ಜನವಸತಿ ಪ್ರದೇಶವನ್ನು ವರದಿಯಿಂದ ಹೊರಗಿಡುವಂತೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು ಎಂದು ಹಾಲಪ್ಪ ಆಗ್ರಹಿಸಿದರು.
ಎನ್‌ಜಿಟಿ, ಸುಪ್ರೀಂ ಕೋರ್ಟ್ ಮತ್ತು ಅಂತಾರಾಷ್ಟ್ರೀಯ ಒತ್ತಡಗಳಿರುವುದು ನಿಜ. ಆದರೆ ಅದನ್ನು ನೆಪವನ್ನಾಗಿ ಮಾಡಿಕೊಂಡು ಮಲೆನಾಡಿನ ಜನರ ಬದುಕಿಗೆ ಧಕ್ಕೆ ತರುವ ನಿರ್ಧಾರ ಕೈಗೊಳ್ಳಬಾರದು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರ ಹಿತವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಮನವಿ ಮಾಡಿದರು.

