ಶಿವಮೊಗ್ಗ

ಅವಧಿ ಮುಗಿದು 8 ತಿಂಗಳು ಕಳೆದರು ಗ್ರಾ.ಪಂ. ಸದಸ್ಯರ ಕೈ ಸೇರದ ಗೌರವಧನ ; ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ

ಗ್ರಾಮ ಪಂಚಾಯಿತಿ ಸದಸ್ಯರಿಗೆ ಸರ್ಕಾರ ನೀಡಬೇಕಾದ ಗೌರವಧನವೇ ತಿಂಗಳುಗಟ್ಟಲೆ ಬಾಕಿ ಉಳಿದಿರುವುದು ಚರ್ಚೆಗೆ ಗ್ರಾಸವಾಗಿದೆ.

ಅವಧಿ ಮುಗಿದು 8 ತಿಂಗಳು ಕಳೆದರು ಗ್ರಾಪಂ ಸದಸ್ಯರ ಕೈ ಸೇರದ ಗೌರವಧನ GP

ಮ.ಟೈ. ವಿಶೇಷ ವರದಿ

WhatsApp Group Join Now
Telegram Group Join Now
Instagram Group Join Now

ಶಿವಮೊಗ್ಗ : ಗ್ರಾಮೀಣ ಮಟ್ಟದ ಆಡಳಿತ ವ್ಯವಸ್ಥೆಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಗ್ರಾಮ ಪಂಚಾಯಿತಿಗಳ ವಿವಿಧ ಸಭೆಗಳಲ್ಲಿ ಪಾಲ್ಗೊಂಡು ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸುವ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸರ್ಕಾರ ನೀಡಬೇಕಾದ ಗೌರವಧನವೇ ತಿಂಗಳುಗಟ್ಟಲೆ ಬಾಕಿ ಉಳಿದಿರುವುದು ಚರ್ಚೆಗೆ ಗ್ರಾಸವಾಗಿದೆ.

ಗ್ರಾಮ ಪಂಚಾಯಿತಿಗಳ ಸದಸ್ಯರ ಅವಧಿ ಮುಗಿದು ಸುಮಾರು ಎಂಟು ತಿಂಗಳು ಕಳೆದರೂ, ಹಲವು ಸದಸ್ಯರಿಗೆ ತಮ್ಮ ಕರ್ತವ್ಯದ ಅವಧಿಗೆ ಸಂಬಂಧಿಸಿದ ಗೌರವಧನ ಇನ್ನೂ ಕೈ ಸೇರಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಜನಪ್ರತಿನಿಧಿಗಳಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದ ಬಳಿಕವೂ ಅವರಿಗೆ ಸಿಗಬೇಕಾದ ಗೌರವಧನಕ್ಕಾಗಿ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಗೌರವಧನವೇ ಆದಾಯದ ಮೂಲವಲ್ಲ ;

ಗ್ರಾಪಂ ಸದಸ್ಯರಿಗೆ ನೀಡಲಾಗುವ ಗೌರವಧನ ದೊಡ್ಡ ಮೊತ್ತವಾಗಿರದೇ ಇರಬಹುದು. ಆದರೆ, ಗ್ರಾಮೀಣ ಭಾಗದ ಜನಪ್ರತಿನಿಧಿಗಳಿಗೆ ಇದು ಸರ್ಕಾರದಿಂದ ತಮ್ಮ ಸೇವೆಗೆ ದೊರೆಯುವ ಅಧಿಕೃತ ಗೌರವದ ಸಂಕೇತವಾಗಿದೆ. ಸಭೆಗಳಿಗೆ ಹಾಜರಾಗುವುದು, ಗ್ರಾಮಸ್ಥರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವುದು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸುವುದು ಸೇರಿದಂತೆ ಹಲವು ಕಾರ್ಯಗಳಲ್ಲಿ ಸದಸ್ಯರು ಭಾಗವಹಿಸುತ್ತಾರೆ. ಆದರೆ, ಅವಧಿ ಮುಗಿದ ಬಳಿಕವೂ ಗೌರವಧನ ಪಾವತಿಯಾಗದೆ ಇರುವುದು ಜನಪ್ರತಿನಿಧಿಗಳಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ.

ಯಾರ ಹೊಣೆ?

ಗೌರವಧನ ಪಾವತಿಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆಯಾಗದಿರುವುದೇ, ಇಲಾಖೆಗಳ ನಡುವಿನ ಸಮನ್ವಯದ ಕೊರತೆಯೇ ಅಥವಾ ಆಡಳಿತಾತ್ಮಕ ಪ್ರಕ್ರಿಯೆಯಲ್ಲಿನ ವಿಳಂಬವೇ? ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ಒಂದು ಕಡೆ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವುದು, ಗ್ರಾಮೀಣ ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಎಂದು ಸರ್ಕಾರ ಹೇಳುತ್ತಿದ್ದರೆ, ಮತ್ತೊಂದೆಡೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ಸಿಗಬೇಕಾದ ಗೌರವಧನವೇ ಸಮಯಕ್ಕೆ ಸರಿಯಾಗಿ ಪಾವತಿಯಾಗದಿರುವುದು ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಮೂಡಿಸಿದೆ.

ಕಚೇರಿಗಳ ಸುತ್ತ ಅಲೆದಾಡುವ ಸದಸ್ಯರು ;

ಗೌರವಧನದ ಬಗ್ಗೆ ಮಾಹಿತಿ ಪಡೆಯಲು ಸಂಬಂಧಪಟ್ಟ ಕಚೇರಿಗಳಿಗೆ ತೆರಳಿದಾಗ, “ಪ್ರಕ್ರಿಯೆಯಲ್ಲಿದೆ”, “ಅನುದಾನ ಬಂದಿಲ್ಲ”, “ಮೇಲಧಿಕಾರಿಗಳಿಂದ ಆದೇಶ ಬರಬೇಕು” ಎಂಬ ಉತ್ತರಗಳು ಸಿಗುತ್ತಿವೆ ಎನ್ನಲಾಗಿದೆ.

ತಮ್ಮ ಅಧಿಕಾರಾವಧಿಯಲ್ಲಿ ಗ್ರಾಮಗಳ ಅಭಿವೃದ್ಧಿಗಾಗಿ ಸಭೆಗಳಲ್ಲಿ ಭಾಗವಹಿಸಿ ಕೆಲಸ ಮಾಡಿದ ಸದಸ್ಯರು, ಅವಧಿ ಮುಗಿದ ನಂತರವೂ ತಮ್ಮ ಹಕ್ಕಿನ ಹಣಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಎದುರಿಸುತ್ತಿರುವುದು ವಿಪರ್ಯಾಸವಾಗಿದೆ.

ಸರ್ಕಾರ ಸ್ಪಷ್ಟನೆ ನೀಡಬೇಕಿದೆ ;

ಗೌರವಧನ ಬಾಕಿ ಉಳಿದಿರುವುದಕ್ಕೆ ನಿಖರ ಕಾರಣವೇನು? ಯಾವ ಹಂತದಲ್ಲಿ ಹಣ ಬಿಡುಗಡೆಯಾಗದೆ ಬಾಕಿಯಾಗಿದೆ? ರಾಜ್ಯದ ಎಷ್ಟು ಗ್ರಾಮ ಪಂಚಾಯಿತಿಗಳ ಎಷ್ಟು ಸದಸ್ಯರಿಗೆ ಗೌರವಧನ ಪಾವತಿಯಾಗಿಲ್ಲ? ಬಾಕಿ ಇರುವ ಮೊತ್ತ ಎಷ್ಟು? ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ ಇಲಾಖೆ ಸ್ಪಷ್ಟ ಮಾಹಿತಿ ನೀಡಬೇಕಿದೆ. ಅಲ್ಲದೆ, ಬಾಕಿ ಇರುವ ಗೌರವಧನವನ್ನು ಶೀಘ್ರವೇ ಬಿಡುಗಡೆ ಮಾಡಿ, ಇಂತಹ ವಿಳಂಬ ಮರುಕಳಿಸದಂತೆ ವ್ಯವಸ್ಥೆ ರೂಪಿಸಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.

ಗ್ರಾಮೀಣ ಆಡಳಿತದ ಮೊದಲ ಹಂತವಾಗಿರುವ ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳ ಸೇವೆಯನ್ನು ಸರ್ಕಾರ ಗುರುತಿಸುತ್ತಿದ್ದರೆ, ಅವರಿಗೆ ಸಲ್ಲಬೇಕಾದ ಗೌರವಧನವನ್ನೂ ಸಮಯಕ್ಕೆ ಸರಿಯಾಗಿ ಪಾವತಿಸುವುದು ಆಡಳಿತದ ಜವಾಬ್ದಾರಿಯಲ್ಲವೇ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಎಂಟು ತಿಂಗಳ ವಿಳಂಬಕ್ಕೆ ಕೊನೆ ಯಾವಾಗ? ಎಂಬುದು ಗೌರವಧನಕ್ಕಾಗಿ ಕಾಯುತ್ತಿರುವ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರ ಪ್ರಮುಖ ಪ್ರಶ್ನೆಯಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!