ತೀರ್ಥಹಳ್ಳಿ: ತಾಲೂಕಿನ ಆಗುಂಬೆ ಸಮೀಪದ ಕೌರಿಹಕ್ಲು ಎಂಬಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮೆಡಿಕಲ್ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ರಾಯಚೂರು ಮೂಲದ ಚೇತನ್ (28) ಮೃತ ದುರ್ದೈವಿ.
ನಿದ್ದೆ ಮಂಪರು ಶಂಕೆ:
ಒಟ್ಟು ಐದು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಪ್ರವಾಸದ ಉದ್ದೇಶದಿಂದ ಆಗುಂಬೆಯತ್ತ ತೆರಳುತ್ತಿದ್ದರು. ಚಾಲಕನಿಗೆ ಆವರಿಸಿದ ನಿದ್ದೆ ಮಂಪರಿನ ಪರಿಣಾಮವಾಗಿ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಉಳಿದ ನಾಲ್ವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಆಗುಂಬೆ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

