ಹೊಸನಗರ ; ಮಳೆ(ಲೆ)ನಾಡಿನ ತವರೂರು, ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಲ್ಲಿ ಮಂಗಳವಾರ ಮಧ್ಯಾಹ್ನ ವರ್ಷದ ಮೊದಲ ಮಳೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಗಾಳಿ, ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಗಾಳಿಯ ರಭಸಕ್ಕೆ ಹಲವಾರು ಮರಗಳು ಹಾಗು ಮರದ ಕೊಂಬೆಗಳು ಮುರಿದು ಬಿದ್ದು ಅಪಾರ ಆಸ್ತಿ-ಪಾಸ್ತಿಗೆ ಹಾನಿ ಉಂಟಾಗಿದೆ.

ನೂರಾರು ಅಡಿಕೆ ಹಾಗೂ ತೆಂಗಿನ ಮರಗಳು ಧರಾಶಾಹಿಯಾಗಿದ್ದು ಅನ್ನದಾತರ ಪರಿಸ್ಥಿತಿ ಅಯೋಮಯವಾಗಿದೆ. ಮಳೆಯ ರಭಸ ಅತಿ ಹೆಚ್ಚಾಗಿದ್ದು ಕೆಲವು ಕಡೆ ಆಲಿಕಲ್ಲು ಮಳೆ ಬಿದ್ದ ಬಗ್ಗೆ ವರದಿಯಾಗಿದೆ.


ಪಟ್ಟಣದ ಚರ್ಚ್ ರಸ್ತೆಯ ಹಿಂಭಾಗದ ರಸ್ತೆಯಲ್ಲಿ ಮಾವಿನ ಮರ ಮುರಿದುಬಿದ್ದ ಕಾರಣ ಆ ಕುಟುಂಬ ರಾತ್ರಿ ಬೇರೆಯವರ ಮನೆಯಲ್ಲಿ ವಾಸ ಮಾಡಬೇಕಾದ ಪ್ರಸಂಗ ಸೃಷ್ಟಿಯಾಯಿತು. ಆ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಇನ್ನೂ ರಭಸದ ಗಾಳಿಗೆ ಮರಗಳು ಬಿದ್ದ ಪರಿಣಾಮ ನೂರಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು ತಾಲೂಕಿನಾದ್ಯಂತ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಇನ್ನೂ ಹುಂಚ ಹೋಬಳಿ ಕರಿಗೆರಸು ಗ್ರಾಮದ ಹಿಂಡ್ಲೆಮನೆ ರೈತ ಶ್ರೀನಿವಾಸ ಎಂಬುವರಿಗೆ ಸೇರಿದ ನೂರಾರು ಅಡಿಕೆ ಮರಗಳು ಮತ್ತು ತೆಂಗಿನಮರ ಧರೆಗುರುಳಿದ್ದು, ಕಾಳುಮೆಣಸು ಸೇರಿದಂತೆ ಇನ್ನಿತರ ಬೆಳೆ ಹಾನಿಯಾಗಿದೆ. ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಬಿರುಗಾಳಿ ಹೊಡೆತಕ್ಕೆ ನೂರಾರು ಅಡಿಕೆ ಮರಗಳು ನೆಲಕ್ಕೆ ಬಿದ್ದಿವೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಕ್ಷಾಂತರ ರೂ. ಸಾಲ ಮಾಡಿ ಬೆಳೆದ ಬೆಳೆ ಬಿರುಗಾಳಿಗೆ ಸಿಲುಕಿದ್ದು, ಸಂಪೂರ್ಣ ತೋಟವೇ ನಾಶವಾಗಿದೆ ಎಂದು ರೈತ ಶ್ರೀನಿವಾಸ ಅಳಲನ್ನು ತೋಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಬುಧವಾರ ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಈ ಭಾಗದಲ್ಲಿ ಬೀಸಿದ ಬಿರುಗಾಳಿಗೆ ಅಡಕೆ, ತೆಂಗು ಬೆಳೆ ಹಾಳಾಗಿದ್ದು, ಸಂಬಂಧಿಸಿದ ಇಲಾಖೆ ಬೆಳೆ ನಷ್ಟವಾಗಿರುವ ರೈತರಿಗೆ ಹೆಚ್ಚಿನ ಪರಿಹಾರ ಧನ ವಿತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇನ್ನೂ ಇಂದು ಬೆಳಗ್ಗೆ 8;30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ 82 ಮಿ.ಮೀ. ಮಳೆಯಾದ ವರದಿಯಾಗಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಇಂದು ಸಹ ಮಲೆನಾಡು ಭಾಗದಲ್ಲಿ ಮಳೆಯಾಗುವ ಸಂಭವವಿದೆ.


