ಶಿವಮೊಗ್ಗ

ಜಪ್ತಿಯಾದ ಅಕ್ರಮ ಮರಳು ಶೀಘ್ರ ವಿಲೇವಾರಿಗೆ ಶಿವಮೊಗ್ಗ ಡಿಸಿ ಪ್ರಭುಲಿಂಗ ಕವಳಿಕಟ್ಟಿ ಖಡಕ್ ಸೂಚನೆ

InShot 20260902 183552551

ಶಿವಮೊಗ್ಗ : ಜಿಲ್ಲೆಯ ವಿವಿಧೆಡೆ ವಶಪಡಿಸಿಕೊಂಡು ಸಂಗ್ರಹಿಸಿಡಲಾಗಿರುವ ಅಕ್ರಮ ಮರಳನ್ನು ವಿಳಂಬ ಮಾಡದೆ ನಿಯಮಾನುಸಾರ ಹರಾಜು ಪ್ರಕ್ರಿಯೆ ಮೂಲಕ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್‌, ಮರಳು ಉಸ್ತುವಾರಿ ಹಾಗೂ ಕಲ್ಲುಪುಡಿ ಘಟಕಗಳ ನಿಯಂತ್ರಣ ಪ್ರಾಧಿಕಾರ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯ ಪ್ರಮುಖ ಮುಖ್ಯಾಂಶಗಳು :

ಮರಳು ವಿಲೇವಾರಿಗೆ ಸೂಚನೆ :

ಫ್ರೀಡಂ ಪಾರ್ಕ್, ಹೊಸನಗರ ಪೊಲೀಸ್‌ ಠಾಣೆ ಹಾಗೂ ಗಣಿ ಇಲಾಖೆ ಆವರಣ ಸೇರಿದಂತೆ ಜಪ್ತಿ ಮಾಡಿಡಲಾಗಿರುವ ಮರಳನ್ನು ಯಾವುದೇ ನಿಯಮಗಳ ಉಲ್ಲಂಘನೆ ಮತ್ತು ಆಕ್ಷೇಪಗಳಿಗೆ ಅವಕಾಶವಿಲ್ಲದಂತೆ ಹರಾಜು ಹಾಕುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಚಿದಂಬರ್ ಅವರಿಗೆ ಡಿಸಿ ಸೂಚಿಸಿದರು.

ಚೆಕ್‌ಪೋಸ್ಟ್ ಮತ್ತು ಗಸ್ತು ಹೆಚ್ಚಳ :

ಪ್ರಸ್ತುತ ಮಳೆಯ ಕೊರತೆಯಿಂದ ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಇದರಿಂದ ಅಕ್ರಮ ಮರಳುಗಾರಿಕೆ ಮತ್ತು ಸಾಗಾಣಿಕೆ ಹೆಚ್ಚುವ ಸಾಧ್ಯತೆ ಇರುವುದರಿಂದ, ತಾಲೂಕು ಮಟ್ಟದ ಗಸ್ತು ತಂಡಗಳನ್ನು ಮರು ಸಕ್ರಿಯಗೊಳಿಸಬೇಕು. ಅಗತ್ಯವಿರುವ ಕಡೆ ತಾತ್ಕಾಲಿಕ ಅಥವಾ ಶಾಶ್ವತ ಚೆಕ್‌ಪೋಸ್ಟ್‌ಗಳ ನಿರ್ಮಾಣಕ್ಕೆ, ಸಿಬ್ಬಂದಿ ಹಾಗೂ ಅನುದಾನ ಕೋರಿ ಇಲಾಖಾ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲು ನಿರ್ದೇಶನ ನೀಡಲಾಯಿತು.

ಕಠಿಣ ಕ್ರಮ:

ಗುತ್ತಿಗೆ ನಿಯಮಗಳನ್ನು ಉಲ್ಲಂಘಿಸಿರುವ ದಬ್ಬಣಗದ್ದೆ ಮರಳು ಬ್ಲಾಕ್ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಡಿಸಿ ಆದೇಶಿಸಿದರು. ಅಲ್ಲದೆ, ಹುಣಸವಳ್ಳಿಯ ಅರಣ್ಯ ಪ್ರದೇಶದಲ್ಲಿ ವಶಪಡಿಸಿಕೊಂಡಿರುವ ಮರಳನ್ನು ಕಾನೂನುಬದ್ಧವಾಗಿ ವಿಲೇವಾರಿ ಮಾಡುವವರೆಗೆ ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚಿಸಿದರು.

ಕ್ರಷರ್ ಮಾಲೀಕರಿಗೆ ನೋಟಿಸ್:

ಜಿಲ್ಲೆಯಲ್ಲಿ ಅಧಿಕೃತವಾಗಿ 93 ಕಲ್ಲುಪುಡಿ ಮಾಡುವ ಘಟಕಗಳಿಗೆ (ಕ್ರಷರ್) ಪರವಾನಗಿ ನೀಡಲಾಗಿದೆ. ಆದರೆ, ಈ ಪೈಕಿ 21 ಘಟಕಗಳ ಮಾಲೀಕರು ಇಲಾಖೆಯ ಗಮನಕ್ಕೆ ತರದೆ ಯಂತ್ರೋಪಕರಣಗಳನ್ನು ಸ್ಥಳಾಂತರಿಸಿ, ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ಇವರಿಗೆ ತಕ್ಷಣವೇ ಕಾರಣ ಕೇಳಿ ನೋಟಿಸ್ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ:

2021ರ ಸ್ಫೋಟದ ಘಟನೆಯ ಹಿನ್ನೆಲೆಯಲ್ಲಿ ಹುಣಸೋಡು, ಕಲ್ಲಗಂಗೂರು, ಗೆಜ್ಜೇನಹಳ್ಳಿ, ಬಸವನಗಂಗೂರು ವ್ಯಾಪ್ತಿಯ ಕ್ರಷರ್‌ಗಳ ವಿಸ್ತರಣೆಗೆ ತಡೆ ನೀಡಲಾಗಿದೆ. ಪ್ರಸ್ತುತ ಅಲ್ಲಿ ಯಥಾಸ್ಥಿತಿ ಕಾಪಾಡಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಲಾಗಿದ್ದು, ಸಮಿತಿಯ ಅಂತಿಮ ವರದಿ ಬಂದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಯಿತು.

ಇತರ ನಿರ್ಣಯಗಳು :

ತೀರ್ಥಹಳ್ಳಿಯ ಮೇಲಿನಕುರುವಳ್ಳಿಯಲ್ಲಿ ಕಲ್ಲುಗಣಿ ಗುತ್ತಿಗೆ ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದು, ಸರ್ಕಾರದ ಹೊಸ ಆದೇಶ ಜಾರಿಗೂ ಮುನ್ನ ಇಲಾಖಾ ಆಯುಕ್ತರ ಮಾರ್ಗದರ್ಶನ ಪಡೆಯಲು ನಿರ್ಣಯಿಸಲಾಯಿತು. ಹಾಗೆಯೇ, ಪಟ್ಟಾ ಜಮೀನುಗಳಲ್ಲಿ ಜಂಬಿಟ್ಟಿಗೆ ತೆಗೆಯುವಾಗ ಎಷ್ಟು ಆಳದವರೆಗೆ ತೆಗೆಯಬಹುದು ಎಂಬುದನ್ನು ನಿರ್ಧರಿಸಲು ಸರ್ಕಾರದ ಅಧಿಸೂಚನೆ ಅನ್ವಯ ತಜ್ಞರ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಜಿ.ಪಂ. ಸಿಇಒ ಎನ್. ಹೇಮಂತ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ. ನಿಖಿಲ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಉಪವಿಭಾಗಾಧಿಕಾರಿ ಡಾ. ಮೈತ್ರಿ, ಅರಣ್ಯಾಧಿಕಾರಿ ಅಜ್ಜಯ್ಯ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]