ರಿಪ್ಪನ್‌ಪೇಟೆ ; ಇಲ್ಲಿನ ವಿನಾಯಕ ವೃತ್ತದ ಹೊಸನಗರ-ತೀರ್ಥಹಳ್ಳಿ ರಾಜ್ಯ ಹೆದ್ದಾರಿಯಂಚಿನಲ್ಲಿರುವ ಬಸ್ ತಂಗುದಾಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಗಬ್ಬೆದ್ದು ನಾರುವ ಚರಂಡಿಯಲ್ಲಿ ಕೊಳಚೆ ನೀರು ನಿಂತಿರುವುದು ಇಲ್ಲಿನ ಗ್ರಾಮಾಡಳಿತ ಸೇರಿದಂತೆ ಯಾವುದೇ ಅಧಿಕಾರಿ ವರ್ಗದವರ ಗಮನಕ್ಕೆ ಬಂದಂತೆ ತೋರುತ್ತಿಲ್ಲ.
ಬಸ್ ತಂಗುದಾಣದ ಕೂದಲಳತೆಯಲ್ಲಿಯೇ ಎರಡು ಬಾರ್ ಅಂಡ್ ರೆಸ್ಟೋರೆಂಟ್‌ಗಳು ಇದ್ದು ಅಲ್ಲಿ ಮದ್ಯದ ಪೌಚುಗಳನ್ನು ಖರೀದಿಸಿ ಪಕ್ಕದ ಬಸ್ ನಿಲ್ದಾಣದಲ್ಲಿ ಸೇವಿಸಿ ಪ್ಯಾಕ್‌ಗಳನ್ನು ಬಿಸಾಕುವುದು ಶ್ವಾನಗಳು ಸೇರಿದಂತೆ ಕೆಲವು ಕುಡುಕರು ಪಾನಮತ್ತರಾಗಿ ಬಸ್ ನಿಲ್ದಾಣದ ಕಟ್ಟೆಯ ಮೇಲೆ ಮಲಗಿ ಗಲೀಜು ಮಾಡುವುದು ಇದರಿಂದ ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು, ತಾಯಂದಿರು ಬಸ್ ನಿಲ್ದಾಣದೊಳಗೆ ಹೋಗದೆ ಬಿಸಿಲಲ್ಲಿ ನಿಂತು ಬಸ್ ಹತ್ತುವ ಸ್ಥಿತಿ ನಿರ್ಮಾಣವಾಗಿದೆ.
ಇಡೀ ಬಸ್ ನಿಲ್ದಾಣ ಬಾರ್ ಅಂಡ್ ರೆಸ್ಟೋರೆಂಟ್‌ಗಳು ಮತ್ತು ಸಾರ್ವಜನಿಕ ಶೌಚಾಲಯದ ಕಲುಷಿತ ನೀರು ಚರಂಡಿಯಲ್ಲಿ ಸಂಗ್ರಹಗೊಂಡು ಕೊಚ್ಚೆಗುಂಡಿ ಎಂಬಂತೆ ಪರಸ್ಥಳದಿಂದ ಬರುವವರೆಗೆ ಎದ್ದು ಕಾಣುವಂತಾಗಿದೆ.
ಇನ್ನೂ ಈ ದುರ್ನಾತ ಕಸದ ರಾಶಿ ಕುರಿತು ಎಷ್ಟು ಜನರು ಹಿಡಿ ಶಾಪ ಹಾಕುತ್ತಾ ಪಂಚಾಯಿತ್ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳು ಜೀವಂತ ಇದ್ದಾರಾ ಎಂಬ ಸಂಶಯ ವ್ಯಕ್ತಪಡಿಸುವಂತಾಗಿದ್ದಾರೆ.
ತೀರ್ಥಹಳ್ಳಿ-ಶಿವಮೊಗ್ಗ ಮುಖ್ಯ ರಸ್ತೆ ಮನೆಗಳಿಂದ ಬರುವ ಕೊಳಚೆ ನೀರು ಸರಾಗವಾಗಿ ಹರಿದು ಹೊಸನಗರ ರಸ್ತೆಯ ಚಿಕ್ಕಬೀರನ ಕೆರೆಯ ಚಾನಲ್ ಮೂಲಕ ಹೋಗಬೇಕಾಗಿದ್ದು ಚರಂಡಿಯಲ್ಲ ಮಣ್ಣು ತುಂಬಿಕೊಂಡು ಕೊಳಚೆ ನೀರು ಸರಾಗವಾಗಿ ಹರಿದು ಹೋಗದೆ ನಿಂತಿರುವುದರಿಂದ ಸೊಳ್ಳೆ ಉತ್ಪಾದಿಸುವ ಕೇಂದ್ರವಾಗಿ ಬಸ್ ನಿಲ್ದಾಣ ರೂಪಾಂತರಗೊಂಡಿದೆ. ಈ ಬಸ್ ನಿಲ್ದಾಣದ ಬಳಿ ನಿತ್ಯ ಶಿವಮೊಗ್ಗದಿಂದ ಹೊಸನಗರ, ರಿಪ್ಪನ್‌ಪೇಟೆ, ಅಮೃತ (ಗರ್ತಿಕೆರೆ), ಹುಂಚ, ಹೆದ್ದಾರಿಪುರ, ಕೋಡೂರು ತಾಲ್ಲೂಕು ಕಛೇರಿ ಸೇರಿದಂತೆ ಬ್ಯಾಂಕ್ ಗ್ರಾಮ ಪಂಚಾಯಿತ್ ಮತ್ತು ಬ್ಯಾಂಕ್ ಅಂಚೆ ಕಛೇರಿ ಮೆಸ್ಕಾಂ ಶಾಲಾ, ಕಾಲೇಜ್ ಹೋಗುವ ವಿದ್ಯಾರ್ಥಿಗಳು ಅಧಿಕಾರಿಗಳು ನೌಕರವರ್ಗ ಹೋಗಿ ಬರಲು ಬಸ್ ಹತ್ತಿ ಇಳಿಯಲು ಪ್ರಮುಖ ಕೇಂದ್ರ ಸ್ಥಳವಾಗಿದ್ದರೂ ಕೂಡಾ ರಸ್ತೆ ಅಂಚಿನಲ್ಲಿನ ಬಾಕ್ಸ್ ಚರಂಡಿ ಕಸದ ರಾಶಿ ಪ್ಲಾಸ್ಟಿಕ್ ಬಾಟಲಿ, ಹಳೆಯ ಹರಿದ ಬಟ್ಟೆ ಚೂರು ಕೊಳಚೆ ನೀರಿನಿಂದ ದುರ್ನಾತ ಬೀರುವಂತಾಗಿದ್ದರೂ ಕೂಡಾ ಮೂಗು ಬಾಯಿ ಮುಚ್ಚಿಕೊಂಡು ಪ್ರಯಾಣಿಸುತ್ತಾರೆ. ಯಾರು ಯಾರಿಗೆ ಹೇಳದ ಸ್ಥಿತಿಯಲ್ಲಿ ನಮಗೇಕೆ ಊರ ಉಸಾಬರಿ ಎನ್ನುವವರೇ ಹೆಚ್ಚಾಗಿ ಹೋಗಿದ್ದು ಇಷ್ಟೆಲ್ಲಾ ಘಟನೆಗೆ ಸಾಕ್ಷಿಯಾಗಿದೆ.
ಇನ್ನೂ ಸಾಗರ-ತೀರ್ಥಹಳ್ಳಿ ರಸ್ತೆ ಅಗಲೀಕರಣಕ್ಕಾಗಿ ಅಂಗಡಿ ಮುಂಗಟ್ಟುಗಳನ್ನು ಕಿತ್ತು ಮನೆ-ಅಂಗಡಿ ಮಳಿಗೆಗಳ ಗೋಡೆ ಒಡೆದು ಹಾಕಿರುವುದರಿಂದಾಗಿ ಮತ್ತು ರಸ್ತೆಯನ್ನು ಕಿತ್ತು ಮಣ್ಣು ತುಂಬಿಸುವ ಕಾರ್ಯದಿಂದಾಗಿ ರಸ್ತೆಯಲ್ಲಿ ಲೋಡ್ ಲಾರಿಗಳು ಮತ್ತು ವಾಹನಗಳ ವೇಗದಿಂದಾಗಿ ದೂಳಿನಿಂದ ರಸ್ತೆಯಲ್ಲಿ ಸಾರ್ವಜನಿಕರು ಓಡಾಡದ ಸ್ಥಿತಿ ನಿರ್ಮಾಣವಾಗಿದೆ.

ಹಗಲು-ರಾತ್ರಿ ಎನ್ನದೇ ಈ ಬಸ್ ನಿಲ್ದಾಣ ಕುಡುಕರ ಆಶ್ರಯ ತಾಣವಾಗಿ ಈಗ ವಿಶ್ರಾಂತಿಯ ಕೊಠಡಿಯಂತಾಗಿದ್ದರೆ ಶ್ವಾನಗಳಿಗೂ ವಾಸದ ಸ್ಥಳವಾಗಿ ಪರಿಣಮಿಸಿದೆ.
ದೂರದ ಬೆಂಗಳೂರು ಶಿವಮೊಗ್ಗ ಕುಂದಾಪುರ ಸಾಗರ ಕಡೆಯಿಂದ ಬರುವ ಪ್ರಯಾಣಿಕರು ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಂತೆ ಊರು ಕೇರಿಗೆ ತೆರಳಲು ಬಂದರೆ ಸರಿಯಾದ ಬಸ್ ನಿಲ್ದಾಣ ಇಲ್ಲದೆ ಅಂಗಡಿಯವರ ಕಟ್ಟೆಯ ಬಳಿ ಮಗು ಲಗೇಜ್ ಇನ್ನಿತರ ಅಗತ್ಯಗಳನ್ನು ಹಿಡಿದು ಕೊಂಡು ಉರಿ ಬಿಸಿಲಿನಲ್ಲಿ ಕೊಳಚೆ ನೀರಿನ ದುರ್ನಾತದಲ್ಲಿ ನಿಲ್ಲುವ ಪರಿಸ್ಥಿತಿ ಕೆಲವರು ಈ ದುರ್ನಾತ ತಾಳಲಾಗದೆ ತಲೆತಿರುಗಿ ಬಿದ್ದು ಹೋದ ಘಟನೆಗಳು ಸಹ ನಡೆದಿದ್ದರೂ ಕೂಡಾ ಇಲ್ಲಿನ ಗ್ರಾಮಾಡಳಿತವಾಗಲಿ, ಪೊಲೀಸ್ ಇಲಾಖೆಯವರಾಗಲಿ, ಜನಪ್ರತಿನಿಧಿಗಳಾಗಲಿ ಗಮನಹರಿಸದೆ ಇರುವುದು ಸಾರ್ವಜನಿಕರು ಹಿಡಿಶಾಪ ಹಾಕಲು ಕಾರಣವಾಗಿದೆ.
ಇದರೊಂದಿಗೆ ಬಿಡಾಡಿ ಜಾನುವಾರುಗಳು ಬಸ್ ನಿಲ್ದಾಣದೊಳಗೆ ನಿಂತು ಮೂತ್ರ ಮಾಡುವುದು ಸಗಣಿ ಹಾಕುವುದರಿಂದಾಗಿ ಮತ್ತು ಕುಡುಕರು ಕಳಿತಲ್ಲೆ ಮೂತ್ರ ವಿಸರ್ಜನೆ ಮಾಡುವುದರಿಂದ ಬಸ್ ತಂಗುದಾಣವೋ, ಘನತ್ಯಾಜ್ಯ ಘಟಕವೋ ಎಂಬ ಸಂಶಯ ಸಾರ್ವಜನಿಕರನ್ನು ಕಾಡುವಂತಾಗಿದೆ.
ಇನ್ನಾದರೂ ಸ್ಥಳೀಯ ಗ್ರಾಮಾಡಳಿತವಾಗಲಿ ಪೊಲೀಸ್ ಇಲಾಖೆಯವರಾಗಲಿ ಗಮನಹರಿಸಿ ಸಾರ್ವಜನಿಕರಿಗೆ ಮತ್ತು ದೂರದೂರಿನ ಪ್ರಯಾಣಿಕರಿಗೆ ದುರ್ನಾತದಿಂದ ಮುಕ್ತಿ ನೀಡಿ ಸ್ವಚ್ಚತೆಯಂತೆ ಗಮನಹರಿಸುವರೇ ಕಾದುನೋಡಬೇಕಾಗಿದೆ.