ಸಾಗರ: ಇಲ್ಲಿನ ಪ್ರಸಿದ್ಧ ಜಾಮಿಯಾ ಮಸೀದಿಯ ‘ಮಜ್ಲಿಸ್-ಇ-ಮುಂತಾಜಿಮಾ’ ಆಡಳಿತ ಸಮಿತಿಯು ಹಣಕಾಸಿನ ದುರ್ಬಳಕೆ ಹಾಗೂ ಕಾರ್ಯವೈಖರಿಯಲ್ಲಿ ಭಾರಿ ಅವ್ಯವಹಾರ ಎಸಗಿದೆ ಎಂದು ಆರೋಪಿಸಿ, ಯುವ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ಮಂಗಳವಾರ ಮಂಡಳಿ ಕಚೇರಿ ಮುಂಭಾಗ ಪ್ರತ್ಯೇಕವಾಗಿ ಸತ್ಯಾಗ್ರಹ ನಡೆಸಿದರು. ಸಮುದಾಯದ ಆಸ್ತಿ ಮತ್ತು ಲೆಕ್ಕಪತ್ರಗಳಲ್ಲಿ ಪಾರದರ್ಶಕತೆ ಕಾಪಾಡಿ ಸತ್ಯವನ್ನು ಜನರ ಮುಂದಿಡಬೇಕು ಎಂಬುದು ಅವರ ಮುಖ್ಯ ಆಗ್ರಹವಾಗಿತ್ತು.
ಸರ್ಕಾರಿ ಲೆಕ್ಕ ಪರಿಶೋಧನೆಯ ವರದಿಗಳನ್ನು ಉಲ್ಲೇಖಿಸಿ ಆಡಳಿತ ವ್ಯವಸ್ಥೆಗೆ ದೂರು ನೀಡಿರುವ ಅವರು, ಸಮಿತಿಯ ಪದಾಧಿಕಾರಿಗಳು ಹಾಗೂ 11 ಜನ ಸದಸ್ಯರ ಪಾತ್ರದ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ ಎಂದಿದ್ದಾರೆ. ಸ್ಥಳೀಯ ವಕ್ಫ್ ಅಧಿಕಾರಿಗಳ ಬದಲು, ಪಾರದರ್ಶಕತೆಗಾಗಿ ಕೆಎಎಸ್ ಅಥವಾ ಐಪಿಎಸ್ ದರ್ಜೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲೇ ತನಿಖೆ ನಡೆಯಬೇಕು; ಅಷ್ಟೇ ಅಲ್ಲದೆ, ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೆ ನೂತನ ಆಡಳಿತ ಮಂಡಳಿ ರಚನೆಯ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲೂಕು ದಂಡಾಧಿಕಾರಿ (ತಹಶೀಲ್ದಾರ್) ಡಾ. ಪ್ರತಿಭಾ ಆರ್. ಮನವಿ ಪತ್ರ ಸ್ವೀಕರಿಸಿದರು. ಈ ಕುರಿತು ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಕಾನೂನು ಚೌಕಟ್ಟಿನಲ್ಲಿ ಸೂಕ್ತ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ತಹಶೀಲ್ದಾರ್ ಭರವಸೆಯ ಮೇರೆಗೆ ಧರಣಿಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದ ಜಮೀಲ್, “ಇದು ಯಾರ ವಿರುದ್ಧದ ವೈಯಕ್ತಿಕ ದ್ವೇಷವಲ್ಲ, ಬದಲಿಗೆ ಧಾರ್ಮಿಕ ಸಂಸ್ಥೆಯ ಆಡಳಿತದಲ್ಲಿ ಉತ್ತರದಾಯಿತ್ವ ತರುವ ಪ್ರಾಮಾಣಿಕ ಪ್ರಯತ್ನ” ಎಂದು ಸ್ಪಷ್ಟಪಡಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲ ತಿಂಗಳುಗಳಿಂದ ಸಮಿತಿಯ ಕುರಿತು ನಾನಾ ರೀತಿಯ ವಿಡಿಯೋ ಹಾಗೂ ಮಾತುಕತೆಗಳು ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ. ಹೀಗಾಗಿ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ನಾಲ್ಕು ದಿನಗಳೊಳಗೆ ಈ ಬಗ್ಗೆ ವಸ್ತುಸ್ಥಿತಿ ವರದಿ ನೀಡಬೇಕು ಎಂದು ಅವರು ಗಡುವು ವಿಧಿಸಿದ್ದಾರೆ. ನಿಗದಿತ ಸಮಯದಲ್ಲಿ ಸ್ಪಷ್ಟ ನಿರ್ಧಾರ ಹೊರಬರದಿದ್ದರೆ ಮಸೀದಿಯ ಎದುರೇ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

