ಶಿವಮೊಗ್ಗ

ಬರಗಾಲದಲ್ಲೂ ಬಂಪರ್ ಇಳುವರಿ ಸಾಧ್ಯವೇ? ಶಿವಮೊಗ್ಗ ಕೃಷಿ ಮೇಳ ಬಿಚ್ಚಿಟ್ಟ ರಹಸ್ಯ!

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಕೃಷಿ ಇಲಾಖೆಗಳ ಸಹಯೋಗದೊಂದಿಗೆ ನವುಲೆಯ ಕೃಷಿ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಕೃಷಿ ಮತ್ತು ತೋಟಗಾರಿಕೆ ಮೇಳ-2026’ಕ್ಕೆ ಚಾಲನೆ ದೊರೆಯಿತು.

Krishimela Shivamogga 1

ಶಿವಮೊಗ್ಗ: ಪ್ರಕೃತಿ ವಿಕೋಪ ಮತ್ತು ಬರಗಾಲದ ಸಂಕಷ್ಟದಲ್ಲೂ ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸುವುದು ಹಾಗೂ ಅನ್ನದಾತರಿಗೆ ಆರ್ಥಿಕ ಬಲ ನೀಡಿ ಯಂತ್ರೋಪಕರಣ ಬಳಕೆಯ ಮಹತ್ವ ತಿಳಿಸುವುದು ಪ್ರಸ್ತುತ ಕೃಷಿ ಮೇಳದ ಪ್ರಮುಖ ಗುರಿಯಾಗಿದೆ ಎಂದು ಕೃಷಿ ಸಚಿವ ಪಿ. ಎಂ. ನರೇಂದ್ರಸ್ವಾಮಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಕೃಷಿ ಇಲಾಖೆಗಳ ಸಹಯೋಗದೊಂದಿಗೆ ನವುಲೆಯ ಕೃಷಿ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಕೃಷಿ ಮತ್ತು ತೋಟಗಾರಿಕೆ ಮೇಳ-2026’ಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಈ ಬಾರಿಯ ಮೇಳವನ್ನು “ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ” ಎಂಬ ಧ್ಯೇಯವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿದೆ ಎದರು.

ರೈತರು ಕೃಷಿ ವಿಜ್ಞಾನಿಗಳ ಸಲಹೆ ಮತ್ತು ಆಧುನಿಕ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದ ಸಚಿವರು, ಸರ್ಕಾರದ ಹಲವು ಮಹತ್ವದ ಯೋಜನೆಗಳನ್ನು ಪ್ರಸ್ತಾಪಿಸಿದರು.

ನೇಗಿಲಯೋಗಿ ಯೋಜನೆ:

ನವೆಂಬರ್ ತಿಂಗಳಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, ಬರಪೀಡಿತ ರೈತರಿಗೆ ಆರ್ಥಿಕ ಚೇತರಿಕೆ ಕಲ್ಪಿಸುವುದು ಮತ್ತು ಕೃಷಿ ಯಂತ್ರೋಪಕರಣಗಳ ಬಳಕೆಗೆ ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ.

ಬೆಳೆ ನಷ್ಟ ಪರಿಹಾರ:

ನಷ್ಟ ಅನುಭವಿಸಿದ ಪ್ರತಿಯೊಬ್ಬ ರೈತನಿಗೆ ಪ್ರಾಥಮಿಕ ಹಂತವಾಗಿ ₹2,500 ಪರಿಹಾರ ಧನ ವಿತರಿಸಲಾಗಿದೆ.

ಕರ್ನಾಟಕ ಅಗ್ರಿಟೆಕ್ ಮಿಷನ್ 2026:

ಕೃತಕ ಬುದ್ಧಿಮತ್ತೆ (AI), ಡ್ರೋನ್ ಹಾಗೂ ದೂರ ಸಂವೇದಿ ತಂತ್ರಜ್ಞಾನ ಬಳಸಿ ರೈತರಿಗೆ ಸಕಾಲಿಕ ಮಾಹಿತಿ ನೀಡಲು ₹35.99 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಪ್ರಾಯೋಗಿಕವಾಗಿ ಮಂಡ್ಯ, ಬೆಳಗಾವಿ, ವಿಜಯಪುರ, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಈಗಾಗಲೇ 27 ಲಕ್ಷಕ್ಕೂ ಹೆಚ್ಚು ಸಲಹಾ ಸಂದೇಶಗಳನ್ನು ರೈತರಿಗೆ ತಲುಪಿಸಲಾಗಿದೆ.

ಮಾದರಿ ನೀರಾವರಿ ಪದ್ಧತಿ:

ರಾಜ್ಯದಲ್ಲಿ 30,000 ಎಕರೆ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಹನಿ ನೀರಾವರಿ ವಿಸ್ತರಿಸಲಾಗುತ್ತಿದ್ದು, ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಜಾಗತಿಕ ಮಾರುಕಟ್ಟೆಗೆ ರವಾನಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಸಂಸದ ಬಿ. ವೈ. ರಾಘವೇಂದ್ರ ‘ಬರ ನಿರ್ವಹಣೆ – ನೇಗಿಲ ಮಿಡಿತ’ ವಿಶೇಷ ಸಂಚಿಕೆ ಮತ್ತು ರೈತರ ಯಶೋಗಾಥೆಯ ಕೃತಿಯನ್ನು ಅನಾವರಣಗೊಳಿಸಿದರು.

ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ವಿ. ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿ, “ಈ ಬಾರಿ ಡಿಜಿಟಲ್ ರೂಪದಲ್ಲಿ ಮಳಿಗೆ ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗಿದ್ದು, ಮೇಳದಲ್ಲಿ 600ಕ್ಕೂ ಅಧಿಕ ಪ್ರದರ್ಶನ ಮಳಿಗೆಗಳಿವೆ. ವಿಶ್ವವಿದ್ಯಾಲಯದ 81 ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಜೆಆರ್‌ಎಫ್ ಮತ್ತು ಎಸ್‌ಆರ್‌ಎಫ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ರಾಜ್ಯದಲ್ಲೇ ಮೊದಲ ಸ್ಥಾನ ತಂದುಕೊಟ್ಟಿದ್ದಾರೆ. ಅಲ್ಲದೆ ‘ಡ್ರೋನ್ ದೀದಿ’ ಯೋಜನೆಯಡಿ 96 ಮಂದಿಗೆ ಡ್ರೋನ್ ತರಬೇತಿ ನೀಡಲಾಗಿದೆ,” ಎಂದರು.

ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಅಧ್ಯಕ್ಷತೆ ವಹಿಸಿ ಒಡಂಬಡಿಕೆಗಳಿಗೆ ಸಹಿ ಹಾಕಿ ಕೃಷಿ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.

ವೇದಿಕೆಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ನಿಗಮ ಮಂಡಳಿ ಅಧ್ಯಕ್ಷ ಪಲ್ಲವಿ, ಚೇತನ್ ಕೆ., ಕೃಷಿಕ ಸಮಾಜದ ನಗರದ ಮಹಾದೇವಪ್ಪ, ಪದ್ಮಶ್ರೀ ಪುರಸ್ಕೃತ ಕೃಷಿಕ ಸತ್ಯನಾರಾಯಣ ಬೆಲೆಕೇರಿ, ವಿವಿಧ ವಿವಿಗಳ ಕುಲಪತಿಗಳು ಹಾಗೂ ಪ್ರಗತಿಪರ ಕೃಷಿಕರು ಉಪಸ್ಥಿತರಿದ್ದರು. ವಿಸ್ತರಣಾ ನಿರ್ದೇಶಕ ಡಾ. ರಾಘವೇಂದ್ರ ಕೆ. ಮೇಸ್ತ ವಂದನಾರ್ಪಣೆ ಮಾಡಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!