ಶಿಕಾರಿಪುರ: ಕಾರ್ಮಿಕರ ಭವಿಷ್ಯ ನಿಧಿ (PF) ಹಣ ಹಿಂಪಡೆಯುವ ನಿಯಮಾವಳಿಗಳಲ್ಲಿನ ಬದಲಾವಣೆ ಹಾಗೂ ಇಎಸ್ಐ (ESI) ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆಯನ್ನು ಖಂಡಿಸಿ, ಸ್ಥಳೀಯ ಸಾಯಿ ಗಾರ್ಮೆಂಟ್ಸ್‌ನ ಸಾವಿರಾರು ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.
ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಆಗಮಿಸಿ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಸುಮಾರು 3,000ಕ್ಕೂ ಅಧಿಕ ಕಾರ್ಮಿಕರು ಗಾರ್ಮೆಂಟ್ಸ್ ಮುಂಭಾಗ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಲ್ಲಿಂದ ತಾಲ್ಲೂಕು ಕಚೇರಿಯವರೆಗೆ ಬೃಹತ್ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪಿಎಫ್ ನಿಯಮದಲ್ಲಾದ ಬದಲಾವಣೆ :
ಈ ಕುರಿತು ಮಾತನಾಡಿದ ಕಾರ್ಮಿಕ ರಾಕೇಶ್, “ನಮ್ಮ ಈ ಹೋರಾಟ ಸಂಸ್ಥೆಯ ವಿರುದ್ಧವಲ್ಲ, ಬದಲಾಗಿ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧವಾಗಿದೆ. ಮಾಸಿಕ 12,000 ರೂ. ವೇತನದಲ್ಲಿ 2,000 ರೂ.ಗಳನ್ನು ಪಿಎಫ್‌ಗಾಗಿ ಕಡಿತಗೊಳಿಸಿ ಕೈಗೆ ಕೇವಲ 10,000 ರೂ. ನೀಡಲಾಗುತ್ತಿದೆ. ಈ ಮೊದಲು ಪ್ರತಿ 45 ದಿನಗಳಿಗೊಮ್ಮೆ ಪಿಎಫ್ ಹಣ ಪಡೆಯಲು ಅವಕಾಶವಿತ್ತು. ಆದರೆ ಈಗ ನಿಯಮ ಬದಲಾಗಿದ್ದು, ಮೂರು ತಿಂಗಳು, ಒಂದು ವರ್ಷ ಅಥವಾ ಮೂರು ವರ್ಷಕ್ಕೊಮ್ಮೆ ಮಾತ್ರ ಹಣ ಸಿಗಲಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಬಡ ಕಾರ್ಮಿಕರ ಜೀವನ ನಿರ್ವಹಣೆಗೆ ತೀವ್ರ ಹೊಡೆತ ಬಿದ್ದಿದೆ” ಎಂದು ಅಳಲು ತೋಡಿಕೊಂಡರು.

ಇಎಸ್ಐ ಆಸ್ಪತ್ರೆಗೆ ಒತ್ತಾಯ:
ಕಳೆದ ಆರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಕುಂತಲಾ ಮಾತನಾಡಿ, “ಬರುತ್ತಿರುವ ಅಲ್ಪ ವೇತನದಲ್ಲಿ ಪಿಎಫ್ ಕಡಿತದ ಜೊತೆಗೆ, ಅನಾರೋಗ್ಯದ ಕಾರಣದಿಂದ ನಾಲ್ಕು ದಿನ ರಜೆ ಹಾಕಿದರೆ ಸಂಬಳ 8,000 ರೂಪಾಯಿಗೆ ಇಳಿಯುತ್ತದೆ. ಹಿಂದಿನಂತೆ 45 ದಿನಗಳಿಗೊಮ್ಮೆ ಪಿಎಫ್ ಹಣ ಸಿಗದಿದ್ದರೆ ಜೀವನ ನಡೆಸುವುದು ದುಸ್ತರವಾಗಲಿದೆ. ಜೊತೆಗೆ, ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ತಾಲ್ಲೂಕಿನಲ್ಲಿಯೇ ಸುಸಜ್ಜಿತ ಇಎಸ್ಐ ಆಸ್ಪತ್ರೆ ನಿರ್ಮಿಸಬೇಕು” ಎಂದು ಆಗ್ರಹಿಸಿದರು.
ಮೂಲಸೌಕರ್ಯಗಳ ಕೊರತೆ:
ಕೆಲಸದ ಒತ್ತಡದ ಕುರಿತು ಧ್ವನಿ ಎತ್ತಿದ ಕಾರ್ಮಿಕೆ ರೇಖಾ, “ಮಧ್ಯಾಹ್ನದ ಊಟಕ್ಕೆ ಕೇವಲ ಅರ್ಧ ಗಂಟೆ ಸಮಯ ನೀಡಲಾಗುತ್ತಿದ್ದು, ಐದೇ ನಿಮಿಷದಲ್ಲಿ ಊಟ ಮುಗಿಸಿ ಮತ್ತೆ ಕೆಲಸಕ್ಕೆ ಹಾಜರಾಗುತ್ತೇವೆ. ಇಷ್ಟೊಂದು ಶ್ರಮವಹಿಸಿ ದುಡಿದರೂ ನಮಗೆ ಶುದ್ಧ ಕುಡಿಯುವ ನೀರು ಹಾಗೂ ಅಗತ್ಯ ಮೂಲಸೌಕರ್ಯಗಳು ದೊರೆಯುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಬದುಕಿಗೆ ಆಸರೆಯಾದ ಸಂಸ್ಥೆ, ಅನಿವಾರ್ಯವಾದ ಹೋರಾಟ:
ಮತ್ತೋರ್ವ ಕಾರ್ಮಿಕೆ ರಾಧೆ ಮಾತನಾಡಿ, “ಗ್ರಾಮೀಣ ಭಾಗದ ಹಾಗೂ ಬೇರೆ ಬೇರೆ ಜಿಲ್ಲೆಗಳ ಬಡ ಕುಟುಂಬಗಳಿಗೆ ಈ ಗಾರ್ಮೆಂಟ್ಸ್ ಉದ್ಯೋಗ ನೀಡಿ ಬದುಕಿಗೆ ಆಸರೆಯಾಗಿದೆ. ಆದರೆ, ನಮ್ಮದೇ ಬೆವರಿನ ಪಿಎಫ್ ಹಣವನ್ನು ಸಕಾಲಕ್ಕೆ ಪಡೆಯಲು ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ” ಎಂದರು.
ಮೆರವಣಿಗೆಯ ಉದ್ದಕ್ಕೂ ತಮ್ಮ ಹಕ್ಕುಗಳಿಗಾಗಿ ಘೋಷಣೆ ಕೂಗಿದ ಸಾವಿರಾರು ನೌಕರರು, ಸರ್ಕಾರ ತಕ್ಷಣವೇ ಸ್ಪಂದಿಸಿ ಹಿಂದಿನಂತೆಯೇ ಪಿಎಫ್ ಹಣ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.

