ಶಿವಮೊಗ್ಗ: ಬಿ.ಎಡ್ ಪರೀಕ್ಷೆಯ ಫಲಿತಾಂಶ ಪ್ರಕಟಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿ ಸಾಗರದ ಗಂಗೋತ್ರಿ ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪೋಷಕರು ಮಂಗಳವಾರ ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹತ್ತಿರವಾಗುತ್ತಿದೆ. ಹೀಗಾಗಿ ಕೂಡಲೇ ಫಲಿತಾಂಶ ನೀಡದಿದ್ದರೆ ವಿವಿ ಆವರಣದಲ್ಲೇ ಸಾಮೂಹಿಕ ಆತ್ಮಹ*ತ್ಯೆ ಮಾಡಿಕೊಳ್ಳುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳ ಪ್ರಮುಖ ಸಮಸ್ಯೆಗಳು:
- 2023-24ನೇ ಬ್ಯಾಚ್: 3 ಮತ್ತು 4ನೇ ಸೆಮಿಸ್ಟರ್ ಪರೀಕ್ಷೆಗಳು ಮುಗಿದು ತಿಂಗಳುಗಳಾದರೂ ಫಲಿತಾಂಶ ಬಂದಿಲ್ಲ.
- 2024-25ನೇ ಬ್ಯಾಚ್: 1ರಿಂದ 3ನೇ ಸೆಮಿಸ್ಟರ್ ವರೆಗಿನ ಯಾವುದೇ ಫಲಿತಾಂಶ ಪ್ರಕಟವಾಗಿಲ್ಲ.
- 2025-26ನೇ ಬ್ಯಾಚ್: ಮೊದಲ ಸೆಮಿಸ್ಟರ್ ಪರೀಕ್ಷೆ ನಡೆದಿದ್ದರೂ, ಈ ಕೋರ್ಸ್‌ಗೆ ಅಧಿಕೃತ ಅನುಮೋದನೆ/ಮಾನ್ಯತೆ ಸಿಕ್ಕಿಲ್ಲ ಎಂಬ ಆತಂಕವಿದೆ.
ಅಧಿಕಾರಿಗಳ ಸ್ಪಷ್ಟನೆ ಮತ್ತು ಕುಲಪತಿಗಳ ಭರವಸೆ:
ಪ್ರತಿಭಟನಾ ಸ್ಥಳಕ್ಕೆ ಬಂದ ಪರೀಕ್ಷಾಂಗ ಕುಲಸಚಿವ ತಿಮ್ಮರಾಯಪ್ಪ, UUCMS ಪೋರ್ಟಲ್‌ನಲ್ಲಿರುವ ತಾಂತ್ರಿಕ ದೋಷದಿಂದಾಗಿ ಲಾಗಿನ್ ಆಗುತ್ತಿಲ್ಲ, ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು. ಸರ್ಕಾರದ ನೇಮಕಾತಿ ಸಂದರ್ಭದಲ್ಲಿ ಇಂತಹ ಆಡಳಿತಾತ್ಮಕ ವೈಫಲ್ಯ ಸರಿಯಲ್ಲ ಎಂದು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಸಿಂಡಿಕೇಟ್ ಸಭೆ ಮುಗಿಸಿ ಸ್ಥಳಕ್ಕೆ ಆಗಮಿಸಿದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಕಾಲೇಜು ಮುಖ್ಯಸ್ಥರೊಂದಿಗೆ ಚರ್ಚಿಸಿದರು. “ಶಿಕ್ಷಕರ ನೇಮಕಾತಿಯ ಅವಕಾಶ ಯಾರಿಗೂ ತಪ್ಪದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆ. UUCMS ತಾಂತ್ರಿಕ ಸಮಸ್ಯೆಯನ್ನು ಸರ್ಕಾರದ ಉನ್ನತಾಧಿಕಾರಿಗಳ ಮಟ್ಟದಲ್ಲಿ ಖುದ್ದಾಗಿ ಮಾತನಾಡಿ ಬಗೆಹರಿಸುತ್ತೇನೆ. ಹಿಂದಿನ ಬ್ಯಾಚ್‌ಗಳ ಬಾಕಿ ಫಲಿತಾಂಶ ಹಾಗೂ ಮಾನ್ಯತೆಯ ಗೊಂದಲವನ್ನು ತ್ವರಿತವಾಗಿ ಪರಿಹರಿಸಲಾಗುವುದು” ಎಂದು ಖಚಿತ ಭರವಸೆ ನೀಡಿದರು. ಕುಲಪತಿಗಳ ಈ ಮಾತಿನ ಬಳಿಕ ವಿದ್ಯಾರ್ಥಿಗಳು ಧರಣಿ ಹಿಂಪಡೆದರು.
ತಾಂತ್ರಿಕ ಸಮಸ್ಯೆಯಿಂದ ಫಲಿತಾಂಶ ತಡವಾಗಿದೆ. ಶೀಘ್ರವೇ ಅಡಚಣೆ ನಿವಾರಿಸಿ ಪೂರ್ಣ ಫಲಿತಾಂಶ ಪ್ರಕಟಿಸುತ್ತೇವೆ. ವಿದ್ಯಾರ್ಥಿಗಳ ಭವಿಷ್ಯ ಕಾಪಾಡುವುದು ನಮ್ಮ ಜವಾಬ್ದಾರಿ.
– ಡಾ. ಶರತ್ ಅನಂತಮೂರ್ತಿ ಕುಲಪತಿ, ಕುವೆಂಪು ವಿವಿ
ನಮ್ಮ ಭವಿಷ್ಯದ ಜೊತೆ ಚೆಲ್ಲಾಟ ಬೇಡಿ. ವಿಳಂಬದಿಂದಾಗಿ ನಾವು ತೀವ್ರ ಮಾನಸಿಕ ಒತ್ತಡದಲ್ಲಿದ್ದೇವೆ. ಶೀಘ್ರವೇ ಫಲಿತಾಂಶ ನೀಡದಿದ್ದರೆ ಪ್ರಾಣತ್ಯಾಗದಂತಹ ಉಗ್ರ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ.
– ಅಶ್ವತ್, ವಿದ್ಯಾರ್ಥಿ
ನ್ಯಾಯಾಲಯದ ಸೂಚನೆ ಇದ್ದರೂ ವಿವಿಯು ಮಾನ್ಯತೆ ಹಾಗೂ ಫಲಿತಾಂಶ ನೀಡುವಲ್ಲಿ ಅನಗತ್ಯ ವಿಳಂಬ ಮಾಡುತ್ತಿದೆ. ಕೂಡಲೇ ಯುಜಿಸಿಎಂಎಸ್ ಪೋರ್ಟಲ್ ಸೌಲಭ್ಯ ಒದಗಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು.
– ಕೃಷ್ಣಮೂರ್ತಿ, ಕಾಲೇಜು ಮುಖ್ಯಸ್ಥ

