CHIKKAMAGALURU ; ಜಿಲ್ಲಾ ಒಕ್ಕಲಿಗರ ಸಂಘದಿಂದ ನಗರದ ಎಐಟಿ ವೃತ್ತದಲ್ಲಿ ನಿರ್ಮಾಸಿರುವ ನೂತನ ಬೆಳ್ಳಿ ಭವನ ಉದ್ಘಾಟನೆ ವೇಳೆ ಸಚಿವ ಕೆ.ಜೆ ಜಾರ್ಜ್ ಭಾಷಣದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದಕ್ಕೆ ಸಮಾರಂಭದಲ್ಲಿದ್ದ ಯುವಕರು ಅಡ್ಡಿಪಡಿಸಿದ ಘಟನೆ ನಡೆದಿದೆ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಭಾಷಣ ಮಾಡಿದ್ದಕ್ಕೆ ಜಾರ್ಜ್ ಅವರಿಗೆ ಆಕ್ಷೇಪ ವ್ಯಕ್ತವಾಗಿದೆ.
ಯುವಕರು ವೇದಿಕೆಯತ್ತ ತೆರಳಿ ‘ಇದು ರಾಜಕೀಯ ವೇದಿಕೆಯಲ್ಲ, ರಾಜಕೀಯ ಮಾತನಾಡುವುದಾದರೆ ಕೆಳಗೆ ಇಳಿಯಿರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮುಜುಗರಕ್ಕೆ ಒಳಗಾದ ಸಚಿವರು, ‘ಭಾಷಣಕ್ಕೆ ಅಡ್ಡಿಪಡಿಸಿ ರಾಜಕೀಯ ಮಾಡಬೇಡಿ, ನನಗೂ ರಾಜಕೀಯ ಬರುತ್ತದೆ’ ಎಂದು ಸಿಟ್ಟಾದರು. ಈ ವೇಳೆ ಮಧ್ಯ ಪ್ರವೇಶಿಸಿದ ನಿರ್ಮಲಾನಂದನಾಥ ಸ್ವಾಮೀಜಿ ಯುವಕರನ್ನು ಸಮಾಧಾನಪಡಿಸಿದರು. ಸ್ವಾಮೀಜಿ ಮಧ್ಯ ಪ್ರವೇಶದಿಂದ ಯುವಕರು ಸುಮ್ಮನಾದರು.
ಮತ್ತೆ ಮೈಕ್ ಬಳಿ ಬಂದ ಸಚಿವರು, ‘ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದರು.
ನಂತರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಕೆ.ಜೆ.ಜಾರ್ಜ್, ‘ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ್ದಕ್ಕೆ ಒಕ್ಕಲಿಗರ ಸಂಘದ ಸಮಾರಂಭದಲ್ಲಿ ಕೆಲವರು ಆಕ್ಷೇಪಿಸಿದರು. ಗ್ಯಾರಂಟಿ ಯೋಜನೆಗಳು ರಾಜ್ಯ ಸರ್ಕಾರದ ಕಾರ್ಯಕ್ರಮ ಆಗಿರುವುದರಿಂದ ಜನರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಹೇಳಿದೆ’ ಎಂದರು.
‘ಆದರೆ, ಕಾಂಗ್ರೆಸ್ ಜಾರಿಗೆ ತಂದ ಯೋಜನೆ ಆಗಿರುವುದರಿಂದ ಬೇರೆಯವರಿಗೆ ಹಿಡಿಸಲಿಲ್ಲ. ಗ್ಯಾರಂಟಿ ಯೋಜನೆಗಳು ಯಾವುದೇ ಪಕ್ಷ, ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ’ ಎಂದು ಹೇಳಿದರು.