ಹೊಸನಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಜಾಸೇವಾ ಆಂದೋಲನ’ದ ತಾಲೂಕು ಮಟ್ಟದ ಸಾರ್ವಜನಿಕ ಕುಂದುಕೊರತೆ ಸಭೆಯು ಶನಿವಾರ ಇಲ್ಲಿನ ಆರ್ಯ ಈಡಿಗರ ಸಭಾಭವನದಲ್ಲಿ ಯಶಸ್ವಿಯಾಗಿ ಜರುಗಿತು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಭೆಗೆ ಚಾಲನೆ ನೀಡಿದರು.
ತ್ವರಿತ ಪರಿಹಾರದ ಭರವಸೆ ನೀಡಿದ ಶಾಸಕರು:
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, “ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಮತ್ತು ವೇಗವಾಗಿ ಪರಿಹಾರ ಒದಗಿಸುವುದು ಸರ್ಕಾರದ ಪ್ರಮುಖ ಆಶಯವಾಗಿದೆ. ಸಲ್ಲಿಕೆಯಾಗುವ ಪ್ರತಿಯೊಂದು ಅರ್ಜಿಯನ್ನೂ ಆನ್‌ಲೈನ್ ಪೋರ್ಟಲ್‌ನಲ್ಲಿ ದಾಖಲಿಸುವುದರಿಂದ, ಅರ್ಜಿಯ ಸ್ಥಿತಿಗತಿಯನ್ನು ಪಾರದರ್ಶಕವಾಗಿ ಟ್ರ್ಯಾಕ್ ಮಾಡಲು ಸಾಧ್ಯವಿದೆ. ಇದರಿಂದ ಕಡತಗಳ ವಿಲೇವಾರಿ ವಿಳಂಬ ತಪ್ಪಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಂದಾಯ ಇಲಾಖೆಗೇ ಸಿಂಹಪಾಲು ಅರ್ಜಿಗಳು:
ಬೆಳಿಗ್ಗೆ 8 ಗಂಟೆಯಿಂದಲೇ ತಾಲೂಕಿನ ವಿವಿಧೆಡೆಯಿಂದ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಅಹವಾಲು ಸಲ್ಲಿಸಿದರು. ದಿನವಿಡೀ ಒಟ್ಟು 329 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ ಸುಮಾರು 150 ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದ್ದಾಗಿವೆ. ಪ್ರಮುಖವಾಗಿ:
ಭೂ ಮತ್ತು ಅರಣ್ಯ ಸಮಸ್ಯೆ:
94ಸಿ ಅಡಿಯಲ್ಲಿ ನಿವೇಶನ ಮಂಜೂರಾತಿ, ಹಕ್ಕುಪತ್ರ ವಿತರಣೆ, ಅರಣ್ಯ ಹಕ್ಕು ಮತ್ತು ಕಂದಾಯ ಭೂಮಿ ಸರ್ವೆ ಕುರಿತು ಹೆಚ್ಚಿನ ದೂರುಗಳು ಕೇಳಿಬಂದವು.
ಕೃಷಿಕರ ಸಂಕಷ್ಟ:
ತಾಲೂಕಿನಲ್ಲಿ ಮಿತಿಮೀರಿರುವ ಮಂಗಗಳ ಹಾವಳಿಗೆ ಶಾಶ್ವತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದರು. ಜೊತೆಗೆ ಜಮೀನುಗಳಿಗೆ ಸಂಪರ್ಕ ರಸ್ತೆ, ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಬಿಚ್ಚಿಟ್ಟರು.
ಮೂಲಸೌಕರ್ಯ ಹಾಗೂ ಆರೋಗ್ಯ:
ಶಿಥಿಲಾವಸ್ಥೆಯಲ್ಲಿರುವ ಹೊಸನಗರ ಬಸ್ ನಿಲ್ದಾಣವನ್ನು ಕೆಡವಿ ಹೊಸ ನಿಲ್ದಾಣ ನಿರ್ಮಿಸಬೇಕು ಎಂದು ಯುವಕರು ಆಗ್ರಹಿಸಿದರು. ಹೊಸನಗರ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರವಿದ್ದರೂ ರೇಡಿಯಾಲಜಿಸ್ಟ್ ಮತ್ತು ತಜ್ಞ ವೈದ್ಯರಿಲ್ಲದಿರುವುದು, ಹೊರಗಡೆ ಔಷಧ ಚೀಟಿ ಬರೆದುಕೊಡುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ರಿಪ್ಪನ್‌ಪೇಟೆಗೆ ನೂತನ ಆಸ್ಪತ್ರೆ ಮತ್ತು ವೈದ್ಯರ ನೇಮಕಕ್ಕೆ ಒತ್ತಾಯ ಕೇಳಿಬಂದಿತು.
ಕುಡಿಯುವ ನೀರಿನ ಯೋಜನೆ:
ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಜೆಜೆಎಂ (JJM) ಯೋಜನೆಯಡಿ ಹಲವು ಮನೆಗಳಿಗೆ ಇನ್ನೂ ನಲ್ಲಿ ಸಂಪರ್ಕ ಸಿಕ್ಕಿಲ್ಲ ಎಂದು ಗ್ರಾಮಸ್ಥರು ದೂರಿದರು.
ಭಾಷಣ ಮಾಡದೆ ನಿರ್ಗಮಿಸಿದ ಸಚಿವರು-ಅಭಿಮಾನಿಗಳಲ್ಲಿ ನಿರಾಸೆ:
ಬೆಳಿಗ್ಗೆ 10 ಗಂಟೆಗೆ ಸಭಾಂಗಣಕ್ಕೆ ಆಗಮಿಸಿದ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ಆದರೆ, ಸಭೆಯನ್ನುದ್ದೇಶಿಸಿ ಅಥವಾ ಅಧಿಕಾರಿಗಳಿಗೆ ಕಿವಿಮಾತು ಹೇಳುವ ನಿಟ್ಟಿನಲ್ಲಿ ಒಂದೇ ಒಂದು ಮಾತನ್ನೂ ಆಡದೆ, ಬಂದಷ್ಟೇ ವೇಗವಾಗಿ ನಿರ್ಗಮಿಸಿದರು. ನೆಚ್ಚಿನ ನಾಯಕನ ಭಾಷಣ ಕೇಳಲು ಕಾದಿದ್ದ ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಇದರಿಂದ ತೀವ್ರ ನಿರಾಸೆಯಾಯಿತು.
ಸಭೆಯಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಶಿಮುಲ್ ಅಧ್ಯಕ್ಷ ಎಚ್.ಎನ್. ವಿದ್ಯಾಧರ, ಜಿಲ್ಲಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಳಿ, ಎಸ್ಪಿ ಬಿ. ನಿಖಿಲ್, ಅಪರ ಜಿಲ್ಲಾಧಿಕಾರಿ ಅಭಿಷೇಕ್, ಅಕ್ಷಯ, ತಾ.ಪಂ ಆಡಳಿತಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ್, ಜಿ.ಪಂ ಉಪಕಾರ್ಯದರ್ಶಿ ಸುಜಾತ, ತಹಶೀಲ್ದಾರ್ ಭರತ್‌ರಾಜ್, ಇಓ ನರೇಂದ್ರಕುಮಾರ್, ಬಿಇಓ ವೈ. ಗಣೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಹೆಚ್.ಬಿ ಚಿದಂಬರ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.
