RIPPONPETE | ಹಿರಿಯ ಪತ್ರಕರ್ತ, ಸಹಕಾರಿ ಧುರೀಣ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಶಿವಮೊಗ್ಗ ಜಿಲ್ಲಾ ಸಂಚಾಲಕ, ಬ್ರಾಹ್ಮಣ ಸಮಾಜದ ಜಿಲ್ಲಾಧ್ಯಕ್ಷ ಅರಸಾಳು ಎಸ್.ಜಿ.ರಂಗನಾಥ (93) ಇಂದು ಸಂಜೆ ಶಿವಮೊಗ್ಗದ ಖಾಸಗಿ ಅಸ್ಪತ್ರೆಯಲ್ಲಿ ನಿಧನ ಹೊಂದಿದರು.
ಇದೆ ಸಂದರ್ಭದಲ್ಲಿ ದುಃಖತಪ್ತ ಕುಟುಂಬಸ್ಥರು ಮೃತರ ಕಣ್ಣುಗಳನ್ನು ನೇತ್ರಾಲಯಕ್ಕೆ ದಾನ ಮಾಡಿದರು. ಮೃತರ ಪಾರ್ಥಿವ ಶರೀರವನ್ನು ಶಿವಮೊಗ್ಗದ ವಿನೋಬನಗರದಲ್ಲಿರುವ ಅವರ ಪುತ್ರನ ನಿವಾಸದಲ್ಲಿ ಇಡಲಾಗಿದೆ. ನಾಳೆ (ಸೋಮವಾರ) ಬೆಳಗ್ಗೆ ಏಳು ಗಂಟೆಗೆ ರೋಟರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಪ್ರೆಸ್‌ಗಿಲ್ಡ್ ನಲ್ಲಿ ವಿವಿಧ ಪದಾಧಿಕಾರಿಯಾಗಿ ರಂಗನಾಥ ಸೇವೆ ಸಲ್ಲಿಸಿದ್ದರು.
ಸಂತಾಪ :
ಹಿರಿಯ ಸಹಕಾರಿ ಧುರೀಣ ಮತ್ತು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಜಿಲ್ಲಾ ಸಂಚಾಲಕ ಹಾಗೂ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಹಂಗಾಮಿ ಅಧ್ಯಕ್ಷರಾಗಿ ಮತ್ತು ಜಿಲ್ಲಾ ಬ್ರಾಹ್ಮಣ ಮಹಾಸಭಾ ನಿರ್ದೇಶಕರಾಗಿ, ಅರಸಾಳು ವ್ಯವಸಾಯ ಸೇವಾ ಸಹಕಾರ ಸಂಘದ ನಿವೃತ್ತ ಕಾರ್ಯದರ್ಶಿಯಾಗಿ ಹಾಗೂ ಅರಸಾಳು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷರಾಗಿದ್ದ ಹಿರಿಯ ಚೇತನ ಎಸ್.ಜಿ.ರಂಗನಾಥರ ನಿಧನಕ್ಕೆ ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನ ಪದಾಧಿಕಾರಿಗಳು, ಆನಂದಪುರ ಮುರುಘಾಮಠದ ಜಗದ್ಗುರು ಮಲ್ಲಿಕಾರ್ಜುನ ಮಹಾಸ್ವಾಮೀಜಿ ಮತ್ತು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ, ಮಾಜಿ ಶಾಸಕ ಬಿ.ಸ್ವಾಮಿರಾವ್, ಜಿ.ಪಂ.ಮಾಜಿ ಸದಸ್ಯ ಬಿ.ಎಸ್.ಪುರುಷೋತ್ತಮರಾವ್ ತಾ.ಪಂ.ಮಾಜಿ ಸದಸ್ಯ ಎಂ.ಬಿ.ಲಕ್ಷ್ಮಣ ಗೌಡ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡ ಬಿ.ಎಸ್.ಈಶ್ವರಪ್ಪ, ಎಲ್.ವೈ.ದಾನೇಶಪ್ಪಗೌಡ ಲಕ್ಕವಳ್ಳಿ ಇನ್ನಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.