ರಿಪ್ಪನ್‌ಪೇಟೆ ; ಇಲ್ಲಿನ ಶಿವಮೊಗ್ಗ ರಸ್ತೆಯ ಕೆರೆಹಳ್ಳಿಯಲ್ಲಿರುವ ಎಂ.ಎಸ್.ಐ.ಎಲ್. ಮದ್ಯದಂಗಡಿಯನ್ನು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿ ಮಹಿಳೆಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಎಂ.ಎಸ್.ಐ.ಎಲ್. ಅಂಗಡಿಯ ಮುಂಭಾಗ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಗ್ರಾಮದ ಸ್ವಾಸ್ಥ್ಯ ಹದಗೆಡಿಸುತ್ತಿರುವ ಮದ್ಯದಂಗಡಿಯನ್ನು ಕೂಡಲೇ ತೆರವುಗೊಳಿಸುವಂತೆ ಪಟ್ಟು ಹಿಡಿದು ಕುಳಿತಿದ್ದರು.
ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆ ಪಿಎಸ್‌ಐ ಎಸ್.ಪಿ.ಪ್ರವೀಣ್ ಹಾಗೂ ಸಿಬ್ಬಂದಿವರ್ಗ ಹಾಗೂ ಅಬಕಾರಿ ಇಲಾಖೆಯ ಇನ್ಸ್‌ಪೆಕ್ಟರ್ ನಾಗರಾಜ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತರ ಬೇಡಿಕೆಯನ್ನು ಕೇಳಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನಾನಿರತರು ಈ ಗ್ರಾಮಕ್ಕೆ ಒಂದೇ ರಸ್ತೆ ಇದ್ದು ಈ ರಸ್ತೆಯ ಮೂಲಕವೇ ನಡೆದುಕೊಂಡು ಹೋಗಬೇಕಿದೆ. ಮಹಿಳೆಯರು, ಯುವತಿಯರು, ಮಕ್ಕಳಿಗೆ ಮದ್ಯದಂಗಡಿಗೆ ಬರುವ ಕೆಲ ಕಿಡಿಗೇಡಿಗಳಿಂದ ಕಿರಿಕಿರಿಯಾಗುತ್ತಿದೆ. ಕೆಲವರು ರೇಗಿಸಿದುಂಟು. ತುಂಬಾ ತೊಂದರೆ ಆಗುತ್ತಿದ್ದು ಕೂಡಲೇ ಮದ್ಯದಂಗಡಿಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಖರೀದಿಸಿದ ಮದ್ಯವನ್ನು ಜಮೀನಿನಲ್ಲಿ, ಮನೆಯ ಹಿಂಭಾಗದಲ್ಲಿ ಬಂದು ಸೇವನೆ ಮಾಡಿ ಬಾಟಲಿಗಳನ್ನು ಮನಸೋ ಇಚ್ಚೆ ಎಲ್ಲೆಂದರಲ್ಲಿ ಬಿಸಾಕಿ ಗ್ರಾಮದ ಕಲುಷಿತ ವಾತಾವರಣವನ್ನು ಸೃಷ್ಟಿಸುವಂತೆ ಮಾಡುತ್ತಿದ್ದು ಸಂಜೆ 6 ಗಂಟೆಯ ಮೇಲೆ ಮಹಿಳೆಯರು ಮತ್ತು ಮಕ್ಕಳು ಮನೆಯಿಂದ ಹೊರಬರಲು ಹಿಂಜರಿಯುವಂತ ಸನ್ನಿವೇಶವುಂಟಾಗಿದೆ ಎಂದು ಆರೋಪಿಸಿದರು.
ಈ ಪ್ರತಿಭಟನೆಯಲ್ಲಿ ರವೀಂದ್ರ ಕೆರೆಹಳ್ಳಿ, ಟೀಕಪ್ಪಗೌಡ, ಶಾಂತಮ್ಮ, ಜಯಮ್ಮ, ಹೇಮಾವತಿ, ವನಿತಾ, ಮುರುಳಿ ಕೆರೆಹಳ್ಳಿ, ಮಂಜುನಾಥಗೌಡ, ಸಂತೋಷ, ಸಚಿನ್‌ಗೌಡ, ಅವಿನಾಶ್, ಗಣೇಶ, ಇನ್ನಿತರರು ಪಾಲ್ಗೊಂಡು ಪ್ರತಿಭಟನೆ ನಡೆಸಿ, ಅಬಕಾರಿ ಇಲಾಖೆಯವರಿಗೆ ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಮೇಲಾಧಿಕಾರಿಗಳಿಗೆ ಕಳುಹಿಸಿ ಕ್ರಮ ಜರುಗಿಸುವುದಾಗಿ ತಿಳಿಸಿದರು.