ಹೊಸನಗರ

ಹೊಸನಗರದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ | ವಿದ್ಯುತ್ ಸಮಸ್ಯೆ ಬಗೆಹರಿಸಲು ತುರ್ತು ಕ್ರಮಕೈಗೊಳ್ಳಿ ; ಶಾಸಕ ಬೇಳೂರು ಗೋಪಾಲಕೃಷ್ಣ

ಹೊಸನಗರ ; ತಾಲೂಕಿನಲ್ಲಿ ಪದೇ ಪದೇ ವಿದ್ಯುತ್ ವ್ಯತ್ಯಯ ಆಗುತ್ತಿದೆ. ಜನಸಾಮಾನ್ಯರು ರೋಸಿ ಹೋಗಿದ್ದಾರೆ. ಇಂತಹ ತಂತ್ರಜ್ಞಾನದ ಬೆಳವಣಿಗೆಯ ಕಾಲದಲ್ಲಿಯೂ ವಿದ್ಯುತ್ ಇಲ್ಲದೇ ಜನರು ಪರದಾಡುವಂತಾಗಿರುವುದು ವಿಪರ‍್ಯಾಸ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಮೆಸ್ಕಾಂ ಕಾರ‍್ಯವೈಖರಿ ಕುರಿತು ಅಸಮಧಾನ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಹೊಸನಗರಕ್ಕೆ 110/33 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆಯು ತ್ವರಿತಗತಿಯಲ್ಲಿ ಫಾರೆಸ್ಟ್ ಕ್ಲಿಯರೆನ್ಸ್ ನೀಡಬೇಕು. ಗುಣಮಟ್ಟದ ವಿದ್ಯುತ್ ನೀಡುವುದಾಗಿ ಜನತೆಗೆ ಜನಪ್ರತಿನಿಧಿಗಳು ಭರವಸೆ ನೀಡಿದ್ದೇವೆ. ಅಧಿಕಾರಿಗಳು ಇದಕ್ಕೆ ಪೂರಕವಾಗಿ ಕಾರ‍್ಯನಿರ್ವಹಿಸಬೇಕು ಎಂದು ಮೆಸ್ಕಾಂ ಇಂಜಿನಿಯರ್ ಚಂದ್ರಶೇಖರ್ ಅವರಿಗೆ ತಿಳಿಸಿದರು.

ಡಿಎಪಿ ರಸಗೊಬ್ಬರ ರಿಪ್ಪನ್‌ಪೇಟೆಯಲ್ಲಿ ಖಾಸಗಿ ಅಂಗಡಿಗಳಲ್ಲಿ ಹೆಚ್ಚು ದರಕ್ಕೆ ಮಾರಲಾಗುತ್ತಿದೆ ಎಂದು ಸದಸ್ಯ ಎನ್.ಚಂದ್ರೇಶ್ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಆರಗ ಜ್ಞಾನೇಂದ್ರ, ಕೇಂದ್ರ ಸರ್ಕಾರ ರೈತರಿಗೆ ಅನುವಾಗುವ ನಿಟ್ಟಿನಲ್ಲಿ ರಸಗೊಬ್ಬರಕ್ಕೆ ಸಹಾಯಧನ ನೀಡುತ್ತಿದೆ. ಮಾರಾಟ ಮಾಡಲು ನಿಯಮಾವಳಿಗಳಿವೆ. ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿತಸ್ಥ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ತಾಲೂಕಿನಲ್ಲಿ ಈವರೆಗೆ ವಾಡಿಕೆಗಿಂತ ಶೇ.160 ರಷ್ಟು ಹೆಚ್ಚುವರಿ ಮಳೆಯಾಗಿದೆ. ಬಿತ್ತನೆ ಕಾರ‍್ಯ ಆರಂಭವಾಗುವ ಹಿನ್ನೆಲೆಯಲ್ಲಿ 400 ಕ್ವಿಂಟಾಲ್ ಭತ್ತದ ಬೀಜ ದಾಸ್ತಾನು ಇದೆ ಎಂದು ಕೃಷಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದರು.

ಶುಚಿರುಚಿಯಾದ ಆಹಾರ ಹಾಗೂ ನಿಯಮಾನುಸಾರ ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ‍್ಯಗಳನ್ನು ಒದಗಿಸುವಲ್ಲಿ ತಾತ್ಸಾರ ತೋರಿದಲ್ಲಿ ಸಂಬಂಧಪಟ್ಟ ಅಧಿಕಾರಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ನಾಮ ನಿರ್ದೇಶಿತ ಸದಸ್ಯೆ ಸುಮಾ ಸುಬ್ರಮಣ್ಯ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ಸ್ಮಶಾನ, ರಸ್ತೆ, ಆಟದ ಮೈದಾನ, ವಿದ್ಯುತ್ ಮಾರ್ಗ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ. ಮಾನವೀಯತೆ ಮರೆತವರಂತೆ ವರ್ತಿಸುತ್ತಿದ್ದಾರೆ. ಜನಪ್ರತಿನಿಧಿಗಳ ಮಾತಿಗೂ ಬೆಲೆ ಇಲ್ಲದಂತಾಗಿದೆ. ಮಲೆನಾಡು ಭಾಗದಲ್ಲಿ ಜನರ ಜೀವನ ಸಂಕಷ್ಟ ದಿಂದ ಕೂಡಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಅರಿಯಬೇಕು ಎಂದು ಹೇಳಿದರು.

ಅಧಿಕ ಮಳೆಯಿಂದ ತಾಲೂಕಿನಲ್ಲಿ ಈ ವರ್ಷ 13 ಮನೆಗಳಿಗೆ ಹಾನಿಯಾಗಿದೆ. 26 ಅನಧಿಕೃತ ಮನೆಗಳಿಗೆ ಹಾನಿಯಾಗಿದೆ. 3 ಸಂತ್ರಸ್ಥರಿಗೆ ಪರಿಹಾರ ಒದಗಿಸಲಾಗಿದೆ. ತುರ್ತು ಸಂದರ್ಭಕ್ಕೆ ಸ್ಪಂದಿಸಲು ಸಹಾಯವಾಣಿ ತೆರೆಯಲಾಗಿದೆ ಎಂದು ತಹಸೀಲ್ದಾರ್ ಎಚ್.ಜೆ.ರಶ್ಮಿ ಮಾಹಿತಿ ನೀಡಿದರು.

ಸರ್ಕಾರಿ ಶಾಲೆಗಳಲ್ಲಿನ ಸ್ಥಿತಿಗತಿ, ಮೂಲಸೌಕರ್ಯ ವ್ಯವಸ್ಥೆ, ತುರ್ತು ದುರಸ್ತಿ ಆಗಬೇಕಿರುವ ಕೊಠಡಿಗಳ ಮಾಹಿತಯನ್ನು ಬಿಇಒ ಕೃಷ್ಣಮೂರ್ತಿ ತಿಳಿಸಿದರು.

ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ಕೂಡಲೇ ನೆಲಸಮಗೊಳಿಸುವಂತೆ ಶಾಸಕರಾದ ಆರಗ ಜ್ಞಾನೇಂದ್ರ ಸೂಚನೆ ನೀಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ತಾಲೂಕಿನಲ್ಲಿ ಸಾಧನೆ ಕುಂಠಿತಗೊಂಡಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ತಾ.ಪಂ. ಕಾರ‍್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಬಿ.ಚಿದಂಬರ, ನಾಮನಿರ್ದೇಶಿತ ಸದಸ್ಯರಾದ ವಾಟಗೋಡು ಸುರೇಶ್, ಆಸಿಫ್, ಎಂ.ಎಂ.ಪರಮೇಶ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ತೀರ್ಥಹಳ್ಳಿ ಶಾಸಕರ ಆಪ್ತ ಕಾರ್ಯದರ್ಶಿ ಬಸವರಾಜ್, ಮತ್ತಿತರರು ಇದ್ದರು.

ಶುಂಠಿ ಬೆಳೆಯಲು ಲಂಚ ಆರೋಪ ;
ತಾಲೂಕಿನ ರಾಮಚಂದ್ರಪುರ ಗ್ರಾಮದಲ್ಲಿ ಶುಂಠಿ ಬೆಳೆಗಾರರ ಬಳಿ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ 20 ಸಾವಿರ ರೂ. ಲಂಚ ಪಡೆದಿರುವ ಮಾಹಿತಿ ಬಂದಿದೆ. ಇನ್ನೊಂದು ಪ್ರಕರಣದಲ್ಲಿ ರೈತನೋರ್ವನಿಗೆ ಒತ್ತುವರಿ ಮಾಡಿರುವ ಕಾರಣಕ್ಕಾಗಿ ದೈಹಿಕ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಏನು ಹೇಳುತ್ತೀರಿ?, ಇಂತಹದ್ದನ್ನೆಲ್ಲಾ ಸಹಿಸಲು ಸಾಧ್ಯವಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಡಿಎಫ್‌ಓ ಮೋಹನ್ ಕುಮಾರ್ ಅವರನ್ನು ಉದ್ದೇಶಿಸಿ ಹೇಳಿದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!