ಬಿರುಸುಗೊಂಡ ಭತ್ತದ ನಾಟಿ ಚಟುವಟಿಕೆ ; ಆಕರ್ಷಣೆಗೊಂಡ ಜೋಡಿತ್ತಿನ ಬೇಸಾಯ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇತ್ತೀಚಿನ ವರ್ಷಗಳಲ್ಲಿ ಅಡಿಕೆ, ಶುಂಠಿ ಬೆಳೆಯಿಂದಾಗಿ ಭತ್ತದ ಬಿತ್ತನೆ, ನಾಟಿ ಇನ್ನಿತರ ಕೃಷಿ ಕ್ಷೀಣಿಸುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಗದ್ದೆಯಲ್ಲಿ ಭತ್ತ ಬೆಳೆಯುವವರೇ ಇಲ್ಲದಂತಾಗುವ ಕಾಲ ದೂರವಿಲ್ಲ ಎಂದು ಭಾವಿಸುವ ಮುನ್ನವೇ ಕಲ್ಲೂರು ಗ್ರಾಮದ ರೈತ ಈರಪ್ಪ ಎಂಬುವರು ತಮ್ಮ ಜಮೀನಿನಲ್ಲಿ ಭತ್ತದ ಸಸಿ ಮಡಿಯನ್ನು ಹಾಕಿ ಶುಕ್ರವಾರ ಕೂಲಿ ಕಾರ್ಮಿಕರೊಂದಿಗೆ ಎತ್ತುಗಳ ನಳ್ಳಿ ಕಟ್ಟಿಕೊಂಡು ಟಿಲ್ಲರ್‌ನಲ್ಲಿ ಜಮೀನು ಹದಗೊಳಿಸಿ ನಾಟಿ ಮಾಡುತ್ತಿದ್ದ ದೃಶ್ಯ ಕೃಷಿಕರನ್ನು ಆಕರ್ಷಿಸಿತು.

WhatsApp Group Join Now
Telegram Group Join Now
Instagram Group Join Now

ಮಲೆನಾಡಿನಲ್ಲಿ ಧೋ… ಎಂದು ಮುಂಗಾರು ಮಳೆ ಸುರಿಯುತ್ತಿದ್ದು ಭತ್ತದ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ರೈತಾಪಿ ವರ್ಗ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆ ಇನ್ನೂ ಕೆಲವು ರೈತರು ನಾಟಿ ಕಾರ್ಯಕ್ಕೆ ಸಸಿ ಮಡಿಯನ್ನು ತಯಾರಿ ಮಾಡಿಕೊಳ್ಳುವುದರಲ್ಲೇ ಕಾಲಕಳೆಯುತ್ತಿದ್ದಾರೆ.

ಹಿಂದಿನವರು ಮಾಡಿಕೊಂಡು ಬಂದಂತಹ ಬೇಸಾಯದಿಂದ ಉತ್ತಮ ಬದುಕು ಸಾಗಿಸುತ್ತಿದ್ದ ರೈತರುಗಳಿಗೆ ಇಂದಿನ ದುಬಾರಿ ಬೆಲೆ ಏರಿಕೆ ಹಾಗೂ ಕೃಷಿ ಕೂಲಿಕಾರ್ಮಿಕರ ವೇತನ ಹೆಚ್ಚಳದಿಂದಾಗಿ ಭತ್ತದ ಕೃಷಿಯಿಂದ ಹೆಚ್ಚು ಲಾಭವಾಗದು ಆ ಕಾರಣ ಎಲ್ಲ ರೈತಾಪಿ ವರ್ಗ ಇರುವ ಜಮೀನಿಗೆಲ್ಲಾ ಅಡಿಕೆ, ಶುಂಠಿ ಹೀಗೆ ವಾಣಿಜ್ಯ ಬೆಳೆಯತ್ತ ಮುಖಮಾಡಿದ್ದು ಭತ್ತದ ಬೆಳೆ ಕುಂಠಿತವಾಗುವುದರೊಂದಿಗೆ ಅಡಿಕೆ, ಶುಂಠಿ ಮಲೆನಾಡಿನ ಜಮೀನು ಆಕ್ರಮಿಸಿಕೊಂಡತಾಗಿದೆ.

ಜೂನ್-ಸೆಪ್ಟೆಂಬರ್ ಅವಧಿಯ ಭತ್ತದ ನಾಟಿಗೆ ಸೂಕ್ತವಾಗಿದೆ. ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಲೂರು ಗ್ರಾಮದ ರೈತ ಈರಣ್ಣ ಅವರ ಜಮೀನಿನಲ್ಲಿ ಟಿಲ್ಲರ್ ಹಾಗೂ ಜೊಡೆತ್ತುಗಳ ಶ್ರಮದ ಜೊತೆಗೆ 25ಕ್ಕೂ ಹೆಚ್ಚಿನ ಕೂಲಿ ಹೆಣ್ಣಾಳುಗಳ ನಾಟಿ ಕಾರ್ಯ ಕಂಡು ಬಂದಿತು. ಕೃಷಿ ಕಾರ್ಮಿಕರು ಹಾಗೂ ಕಾರ್ಮಿಕ ಮಹಿಳೆಯರು ನಾಟಿ ಮಾಡುತ್ತಾ ಸ್ಥಳೀಯ ಜನಪದ ಗೀತೆಗಳನ್ನು ಹಾಗೂ ಸೋಬಾನೆ ಪದವನ್ನು ಹಾಡುತ್ತಾ ನಾಟಿ ಕಾರ್ಯದಲ್ಲಿ ತೊಡಗಿಕೊಂಡಿದ್ದು ಕೃಷಿಕರಲ್ಲಿ ಹುಮ್ಮಸ್ಸು ಇಮ್ಮಡಿಗೊಳ್ಳುವಂತೆ ಮಾಡಿತು.

ಮಲೆನಾಡಿನಲ್ಲಿ ಶೇ.90 ರಷ್ಟು ಕೃಷಿ ಪ್ರದೇಶದಲ್ಲಿ ಹೆಚ್ಚು ಆದಾಯ ತಂದುಕೊಡುವ ಅಡಿಕೆ ಹಾಗೂ ಶುಂಠಿಯಂತಹ ವಾಣಿಜ್ಯ ಕೃಷಿಯತ್ತ ರೈತರು ಮುಖ ಮಾಡಿದ್ದಾರೆ. ವಿದ್ಯಾವಂತ ಮಕ್ಕಳು ಕೃಷಿಯಿಂದ ವಿಮುಖರಾಗಿ ಉದ್ಯೋಗ ಮಾಡುತ್ತಾ ದೂರದ ಬೆಂಗಳೂ ಹಾಗೂ ವಿದೇಶಗಳಲ್ಲಿ ಉದ್ಯೋಗದಲ್ಲಿ ತೊಡಗಿರುವು ಮೂಲಕ ಅಪ್ಪ ನೆಟ್ಟ ಆಲದ ಮರಕ್ಕೆ ನಾವುಗಳೇಕೆ ಮಾರು ಹೋಗಬೇಕು ಎನ್ನುವ ಈ ಕಾಲದಲ್ಲಿ ಕೃಷಿ ಎಂದರೆ ಇಂದಿನ ಯುವಸಮೂಹ ಮೂಗು ಮುರಿಯುವಂತಾಗಿದ್ದಾರೆ.

ನಾಟಿ ಕಾರ್ಯಕ್ಕೆ ಬರುವ ಮಹಿಳಾ ಕಾರ್ಮಿಕರಿಗೆ 300 ರೂ. ಕೂಲಿ ಹಾಗೂ ಊಟ ನೀಡಬೇಕು. ಒಂದು ಎಕರೆ ಭತ್ತದ ನಾಟಿ ಕಾರ್ಯಕ್ಕೆ 15 ರಿಂದ 20 ಸಾವಿರ ವೆಚ್ಚವಾಗುತ್ತದೆ. ಭತ್ತವು ಕಟಾವು ಹಂತಕ್ಕೆ ಬರುವವರೆಗೆ 30 ರಿಂದ 35 ಸಹಸ್ರ ರೂ. ಖರ್ಚು ಬರಲಿದೆ ಎಂದು ರೈತ ಮಂಜುನಾಥ ಕಲ್ಲೂರು ಮಾಧ್ಯಮದವರಿಗೆ ವಿವರಿಸಿ ಯಾರಿಗೆ ಬೇಕಾಗಿದೆ ಈ ರೀತಿಯ ರೈತರ ಗೋಳು ಎಂದು ಉದ್ಘರಿಸಿದರು.

ಒಟ್ಟಾರೆಯಾಗಿ ಹಿಂದಿನವರು ಮಾಡಿಕೊಂಡು ಬರಲಾಗುತ್ತಿರುವ ಕೃಷಿ ಕಾರ್ಯವನ್ನು ನಮ್ಮ ಮುಂದಿನ ಯುವಪೀಳಿಗೆ ಮುಂದುವರಿಸಿ ಭೂಮಿ ತಾಯಿಗೆ ಹಾಕಿದ ಬೀಜವೂ ಮುಂದೆ ನಮಗೆ ಎಂದಿಗೂ ಕೈ ಬಿಡದು ಎಂಬ ಆಶಾ ಭಾವನೆಯಲ್ಲಿ ಶ್ರಮಪಟ್ಟು ಕೆಲಸ ಮಾಡಿದರೆ ಪ್ರತಿಫಲ ಗ್ಯಾರಂಟಿಯೆಂದ ಅವರು ಕಾಲಕಾಲಕ್ಕೆ ಮಳೆ ಬಂದರೆ ರೈತಾಪಿ ವರ್ಗ ನೆಮ್ಮದಿಯಿಂದಿರಲು ಸಾಧ್ಯವೆಂದರು.

ನಮ್ಮ ಪೂರ್ವಿಕರು ಮೊದಲೆಲ್ಲಾ 15-20 ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಬಿತ್ತನೆ ಮಾಡುತ್ತಿದ್ದರು. ಈಗ ಇದು ಲಾಭದಾಯಕವಲ್ಲ ಎಂಬುದನ್ನು ಅರಿತು ಮನೆ ಬಳಕೆಗಾಗಿ ಕಡಿಮೆ ಜಮೀನಿನಲ್ಲಿ ಬೇಸಾಯ ಮಾಡಿ ಜಾನುವಾರುಗಳ ಮೇವು ಮತ್ತು ವರ್ಷದ ಕೂಳಿಗೆ ಭತ್ತ ಬೆಳೆಯಲಾಗುತ್ತಿದೆ‌.
– ಈರಪ್ಪ ಕಲ್ಲೂರು, ಕೃಷಿಕ

ಯಾಂತ್ರೀಕೃತ ವ್ಯವಸಾಯ ಹೆಚ್ಚಾಗಿರುವ ಕಾರಣ ಸಂಪ್ರದಾಯಿಕ ನಾಟಿ ಪದ್ದತಿ ವಿರಳವಾಗಿದೆ. ಖಚ್ಚು ಕಾರ್ಮಿಕರ ಕೊರತೆ ರೋಗ ಹವಮಾನ ವೈಪರೀತ್ಯದ ಕಾರಣಕ್ಕೆ ಭತ್ತದ ಕೃಷಿ ವ್ಯಾಪ್ತಿ ಕ್ಷೀಣಿಸತೊಡಗಿದೆ.
– ಮಂಜುನಾಥ ಕಲ್ಲೂರು, ರೈತ

ಬೇಗ ಭತ್ತದ ನಾಟಿ ಕಾರ್ಯ ಮಾಡುವವರ ಮನೆಗೆ ಹೋಗಿ ಕೃಷಿ ಕಾರ್ಯ ಮಾಡುವುದರಿಂದಾಗಿ ನಮ್ಮ ನಾಟಿಯ ದಿನ ನಮ್ಮ ಮನೆಗೆ ಅವರ ಮನೆಯಿಂದ ಕೂಲಿಯಾಳು ಬರಲೆಂಬ ಕಾರಣಕ್ಕಾಗಿ ಮೈಯಾಳು ಮಾಡಿಕೊಳ್ಳುವುದು ಮಲೆನಾಡಿನ ಪದ್ದತಿಯಾಗಿದೆ. ಸಂಬಳಕ್ಕಾಗಿ ಹೋಗದೆ ಮೈಯಾಳು ಮಾಡಿಕೊಳ್ಳಲು ಹೋಗುತ್ತೇವೆ. ಬಡವ ಶ್ರೀಮಂತ ಎಂಬ ಭೇದ-ಭಾವ ಇಲ್ಲದೆ ಕರೆದವರ ಮನೆಗೆ ಹೋಗಿ ಕೃಷಿ ಕಾರ್ಯ ಮಾಡುವುದು ಪದ್ದತಿಯಾಗಿದೆ.
– ಸುಲೋಚನಮ್ಮ, ಕೃಷಿಕ ಮಹಿಳೆ

Leave a Comment