ಕಾಲುಸಂಕ ನಿರ್ಮಾಣವಾದರೂ ಇಲ್ಲಿ ಹಳ್ಳ ದಾಟಲು ಮರದ ದಿಮ್ಮಿಯೇ ಗತಿ !

Written by malnadtimes.com

Published on:

Ripponpete | ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ (Hosanagara) ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಳಕೋಡು-ಕರಡಿಗ ಗ್ರಾಮದ ಸಂಪರ್ಕದ ಶರ್ಮಿಣ್ಯಾವತಿ ಹಳ್ಳಕ್ಕೆ 2022-23ನೇ ಸಾಲಿನಲ್ಲಿ 15 ಲಕ್ಷ ರೂ. ಅಂದಾಜು ಮೊತ್ತದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಲುಸಂಕ ಕಾಮಗಾರಿ ನಿರ್ಮಿಸಲಾದರೂ ಕೂಡಾ ತಜ್ಞರ ಅವೈಜ್ಞಾನಿಕ ಯೋಜನೆಯಿಂದಾಗಿ ಇಲ್ಲಿ ಹಳ್ಳ ದಾಟಲು ಸಾರವೇ (ಮರದದಿಮ್ಮಿ) ಗತಿಯಾಗಿದೆ‌.

WhatsApp Group Join Now
Telegram Group Join Now
Instagram Group Join Now

ಕಳೆದ ವರ್ಷ ಜೂನ್ ತಿಂಗಳಲ್ಲಿ “ಅಸುರಕ್ಷಿತ ಸಂಪರ್ಕ ಸೇತುವೆ’’ ಎಂಬ ಶೀರ್ಷಿಕೆಯಡಿ ‘ಮಲ್ನಾಡ್ ಟೈಮ್ಸ್’ನಲ್ಲಿ ಪ್ರಕಟಗೊಂಡ ವರದಿಯಿಂದಲೂ ಎಚ್ಚರಗೊಳ್ಳದ ಅಧಿಕಾರಗಳು 2024 ಜೂನ್ ತಿಂಗಳು ಬಂದರೂ ಕೂಡಾ ಇಲ್ಲಿನ ಬೆಳಕೋಡು-ಕರಡಿಗ ಗ್ರಾಮದ ಸಂಪರ್ಕವೂ ಮೃತ್ಯುವಿನ ಜೊತೆಗೆ ಸರಸವಾಡಿದಂತಾಗಿದ್ದು, ಪ್ರತಿನಿತ್ಯ ಈ ಸಂಪರ್ಕದ ಸಾರವೇಯಲ್ಲಿ ಶಾಲಾ-ಕಾಲೇಜ್ ವಿದ್ಯಾರ್ಥಿಗಳು, ಅಂಗನವಾಡಿ ಮಕ್ಕಳು, ಕೃಷಿಕರು ಮತ್ತು ಸಾರ್ವಜನಿಕರು ಕಾಲಸಂಕದ ಮೇಲೆ ಸರ್ಕಸ್ ಮಾಡಿಕೊಂಡು ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ತಮ್ಮ ನೋವನ್ನು ಮಾಧ್ಯಮದವರ ಬಳಿ ಹಂಚಿಕೊಂಡರು.

ಪ್ರತಿವರ್ಷದ ಮಳೆಗಾಲದಲ್ಲಿ ಗ್ರಾಮದ ಜನರು ನಿತ್ಯ ಸಂಚಾರದ ಮಾರ್ಗ ಹಳ್ಳದ ಹರಿವಿನಿಂದ ಕಡಿತಗೊಂಡು ಸುತ್ತಿ-ಬಳಸಿ ದೂರದ ಪ್ರಯಾಣದಿಂದ ಜನರು, ಶಾಲಾ-ಕಾಲೇಜ್ ವಿದ್ಯಾರ್ಥಿಗಳು, ಪೇಟೆ-ಪಟ್ಟಣ ಸೇರಬೇಕಾಗಿದೆ. ನೇರ ಸಂಪರ್ಕದ ದಾರಿ ನೀರಿನಿಂದ ಮುಳುಗಡೆಗೊಂಡು ಸಂಚಾರ ಅಸ್ತವ್ಯಸ್ಥವಾಗುವುದರಿಂದ ಇಲ್ಲಿನ ಜನರು ಪೇಟೆ-ಪಟ್ಟಣ ಸನಿಹ ಸಂಚಾರಕ್ಕಾಗಿ ಶರ್ಮಿಣ್ಯಾವತಿ ಹಳ್ಳದ ಎರಡು ಕಡೆಯ ದಂಡೆಗೆ ಮರದ ಉದ್ದದ ಮರದದಿಮ್ಮಿಗಳನ್ನು ಅಡ್ಡಲಾಗಿ ಹಾಕಿ ಅದರ ಮೇಲೆ ಸರ್ಕಸ್ ಮಾಡಿಕೊಂಡು ಜೀವಭಯದಲ್ಲಿ ಕಾಲಸಂಕ ನಿರ್ಮಿಸಿಕೊಂಡು ದಾಟುವಂತಾಗಿದೆ. ಆದರೆ ಇಲ್ಲಿನ ವಯೋವೃದ್ದರು ಗರ್ಭಿಣಿಯರು, ಮಹಿಳೆಯರು ವಿದ್ಯಾರ್ಥಿಗಳು ಸಂಕದಾಟುವಾಗ ಸ್ವಲ್ಪ ಅಜಾಗರೂಕರಾದರೂ ನೀರು ಪಾಲಾಗುವುದು ನಿಶ್ಚಿತ. ಆದರೂ ಅನಿವಾರ್ಯದ ಬಳಕೆ ಇದಾಗಿದ್ದು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ನಮ್ಮ ಗೋಳು ಕೇಳೋರಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಈ ಗ್ರಾಮದ ಜನರು ಕೃಷಿ ಮತ್ತು ಹೈನುಗಾರಿಕೆ ನೆಚ್ಚಿ ಜೀವನ ನಡೆಸುತ್ತಿದ್ದಾರೆ. ಸುಮಾರು ನೂರಕ್ಕೂ ಅಧಿಕ ಕುಟುಂಬಗಳಿರುವ ಇಲ್ಲಿನ ಜನ ಶಾಲೆ ಆಸ್ಪತ್ರೆ, ಸಂತೆ ಇನ್ನಿತರ ದೈನಂದಿನ ಕಾರ್ಯಗಳಿಗೆ ರಿಪ್ಪನ್‌ಪೇಟೆಗೆ ಬರಬೇಕು. ಗ್ರಾಮಗಳ ಸಮೀಪದ ಮಾರ್ಗ ಅಸುರಕ್ಷಿತ ಕಾಲುಸಂಕ ಬಳಸಬೇಕಿದೆ. ಸರಕು ಸರಜಾಮು ವಾಹನದಲ್ಲಿ ಬದಲಿ ಮಾರ್ಗದಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ ಕಣಬಂದೂರು ಮಾರ್ಗದ ಸುಮಾರು 10 ಕಿ.ಮೀ.ದೂರ ಸುತ್ತಾಡಿ ಸಾಗಬೇಕಿದೆ. ಸಣ್ಣ-ಪುಟ್ಟ ಮಕ್ಕಳನ್ನು ಅಂಗನವಾಡಿಗಳಿಗೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಹರಸಾಹಸವಾಗಿದೆ.

10 ವರ್ಷದ ಹಿಂದೆ ಚಿಕ್ಕಜೇನಿ ಬಳಿಯ ಮರದದಿಮ್ಮಿಯ ಕಾಲುಸಂಕ ದಾಟುವಾಗ ಎರಡು ಮಕ್ಕಳು ಅಕಸ್ಮಿಕ ಕಾಲುಜಾರಿ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದು ಪದೇಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಕ್ಷೇತ್ರ ಶಾಸಕರಾಗಲಿ, ಅಧಿಕಾರಿಗಳಾಗಲಿ ತಲೆ ಕೆಡಿಸಿಕೊಂಡಿಲ್ಲ. ಇನ್ನಾದರೂ ಈ ಕಡೆ ಗಮನಹರಿಸಿ ಜಂಬಳ್ಳಿ, ಯಡಗುಡ್ಡೆ, ಸಂಪಳ್ಳಿ, ಕಾರುಗೋಡು, ಬೆಳಕೋಡು, ಕರಡಿಗ ಗ್ರಾಮಗಳ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮುಂದಾಗಬೇಕು ಎಂದು ಗ್ರಾಮಸ್ಥರಾದ ರಾಮಪ್ಪ ಕರಡಿಗ ಮತ್ತಿತರರು ಆಗ್ರಹಿಸಿದ್ದಾರೆ.

Leave a Comment