ರಿಪ್ಪನ್‌ಪೇಟೆ: ಪುರಾತನ ವಸ್ತುಗಳು (ಆ್ಯಂಟಿಕ್ ಪೀಸ್) ಹಾಗೂ ‘ಆರ್‌ಪಿ ಡೀಲ್’ ವ್ಯವಹಾರದಲ್ಲಿ ತೊಡಗಿಸಿದರೆ ಅಲ್ಪಾವಧಿಯಲ್ಲೇ ದುಪ್ಪಟ್ಟು ಲಾಭ ಸಿಗಲಿದೆ ಎಂದು ನಂಬಿಸಿ ಉದ್ಯಮಿಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಕೃತ್ಯ ಮಲೆನಾಡು ಭಾಗದಲ್ಲಿ ಬೆಳಕಿಗೆ ಬಂದಿದೆ. ಕೊಟ್ಟ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ ಜೀವ ಬೆದರಿಕೆ ಒಡ್ಡಿದ ಆರೋಪದಡಿ ಮೂವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ಸಂಬಂಧ ರಿಪ್ಪನ್‌ಪೇಟೆಯ ನಾಗರಾಜ (A1), ಕೊಪ್ಪ ತಾಲೂಕು ಕೌರಿಕೊಪ್ಪದ ವಿಶ್ವನಾಥ (A2) ಹಾಗೂ ಬಾಳೂರು ನಿವಾಸಿ ನಾಗೇಂದ್ರ (A3) ವಿರುದ್ಧ ತನಿಖೆ ಆರಂಭವಾಗಿದೆ.
ನಂಬಿಸಿ ಬಲೆ ಬೀಸಿದ್ದು ಹೀಗೆ:
2018ರಲ್ಲಿ ತೀರ್ಥಹಳ್ಳಿಯ ಚಿನ್ನದ ವ್ಯಾಪಾರಿಗಳನ್ನು ಸಂಪರ್ಕಿಸಿದ್ದ ಪ್ರಮುಖ ಆರೋಪಿ ನಾಗರಾಜ, ತಾನು ದೊಡ್ಡ ಮಟ್ಟದಲ್ಲಿ ಪುರಾತನ ವಸ್ತುಗಳ ವಹಿವಾಟು ನಡೆಸುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ. ಇದರಲ್ಲಿ ಬಂಡವಾಳ ಹೂಡಿದರೆ ಹಣ ದ್ವಿಗುಣಗೊಳ್ಳಲಿದೆ ಎಂಬ ಆಮಿಷಕ್ಕೆ ಒಳಗಾದ ವ್ಯಾಪಾರಿಗಳು, ಆರಂಭದಲ್ಲಿ 50,000 ರೂ. ನಗದು ನೀಡಿದ್ದರು.
ವರ್ಷಗಳ ಕಾಲ ಮುಂದುವರಿದ ಹಣ ವರ್ಗಾವಣೆ:
ವ್ಯವಹಾರ ಅಂತಿಮ ಹಂತದಲ್ಲಿದೆ ಎಂದು ಕಥೆ ಕಟ್ಟಿದ ಆರೋಪಿಗಳು ಹಂತ ಹಂತವಾಗಿ ಹಣ ಪಡೆದಿದ್ದಾರೆ. ವ್ಯಾಪಾರಿಗಳು 2020ರಿಂದ 2026ರ ಅವಧಿಯಲ್ಲಿ ಹಂತ ಹಂತವಾಗಿ ಲಕ್ಷಾಂತರ ರೂಪಾಯಿಗಳನ್ನು ಫೋನ್ ಪೇ ಹಾಗೂ ಬ್ಯಾಂಕ್ ಖಾತೆಗಳ ಮೂಲಕ ರವಾನಿಸಿದ್ದಾರೆ. ನಾಗರಾಜನ ಹುಂಚ ಶಾಖೆಯ ಬ್ಯಾಂಕ್ ಖಾತೆಗೆ ಜಮೆಯಾದ ಮೊತ್ತ ಹಾಗೂ ಯುಪಿಐ ವರ್ಗಾವಣೆ ಸೇರಿ ಬರೋಬ್ಬರಿ 22,63,500 ರೂ. ಹಣ ವರ್ಗಾವಣೆಯಾಗಿದೆ. ಇದರ ಜತೆಗೆ ಉಳಿದ ಇಬ್ಬರು ಆರೋಪಿಗಳಿಗೂ ನಗದು ರೂಪದಲ್ಲಿ ಹಣ ಸಂದಾಯವಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೊನೆಗೆ ಜೀವ ಬೆದರಿಕೆ:
ವರ್ಷಗಳು ಕಳೆದರೂ ಲಾಭವೂ ಸಿಗದೆ, ಹೂಡಿದ ಅಸಲು ಕೈಸೇರದೆ ಹೋದಾಗ ವ್ಯಾಪಾರಿಗಳು ಹಣ ಹಿಂತಿರುಗಿಸುವಂತೆ ಪಟ್ಟುಹಿಡಿದಿದ್ದಾರೆ. ಈ ವೇಳೆ ಆರೋಪಿಗಳು, ಪೊಲೀಸರಿಗೆ ದೂರು ನೀಡಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

