ಶಿವಮೊಗ್ಗ: ಸಾಗರ ಹಾಗೂ ಶಿಕಾರಿಪುರದ ಶಾಹಿ ಗಾರ್ಮೆಂಟ್ಸ್ ಕಾರ್ಮಿಕರಲ್ಲಿ ಪಿಎಫ್ ಮತ್ತು ಇಎಸ್‌ಐ ಕುರಿತು ಉಂಟಾಗಿದ್ದ ಗೊಂದಲಗಳನ್ನು ನಿವಾರಿಸಲು ಸಂಸದ ಬಿ.ವೈ. ರಾಘವೇಂದ್ರ ಕಾರ್ಖಾನೆಗಳಿಗೆ ಭೇಟಿ ನೀಡಿ ಸಂವಾದ ನಡೆಸಿದರು. ಕಾರ್ಮಿಕ ಇಲಾಖೆ ಹಾಗೂ ಪಿಎಫ್–ಇಎಸ್‌ಐ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ, ಅವರ ಪ್ರಶ್ನೆಗಳಿಗೆ ಸ್ಪಷ್ಟನೆ ಕೊಡಿಸಿದರು.
ಮೊದಲು ಶಿಕಾರಿಪುರ ತಾಲೂಕಿನ ಶಾಹಿ ಗಾರ್ಮೆಂಟ್ಸ್‌ಗೆ ಭೇಟಿ ನೀಡಿದ ಸಂಸದರು, ಬಳಿಕ ಸಾಗರದ ಘಟಕದಲ್ಲಿ ಕಾರ್ಮಿಕ ಮಹಿಳೆಯರು ಹಾಗೂ ಇತರ ನೌಕರರೊಂದಿಗೆ ಚರ್ಚಿಸಿದರು.
ಅಧಿಕಾರಿಗಳಿಂದ ನೇರ ಮಾರ್ಗದರ್ಶನ
ಭವಿಷ್ಯ ನಿಧಿ (ಪಿಎಫ್) ಹಾಗೂ ನೌಕರರ ರಾಜ್ಯ ವಿಮೆ (ಇಎಸ್‌ಐ) ಕುರಿತಾಗಿ ಕಾರ್ಮಿಕರು ತಮ್ಮಲ್ಲಿದ್ದ ಪ್ರಶ್ನೆಗಳು ಮತ್ತು ಆತಂಕಗಳನ್ನು ಸಭೆಯಲ್ಲಿ ತಿಳಿಸಿದರು. ಸಂಬಂಧಿಸಿದ ಅಧಿಕಾರಿಗಳು ನಿಯಮಗಳ ಕುರಿತು ನೇರವಾಗಿ ಸ್ಪಷ್ಟನೆ ನೀಡಿ, ಸೂಕ್ತ ಮಾರ್ಗದರ್ಶನ ನೀಡಿದರು ಎಂದು ಸಂಸದರು ತಿಳಿಸಿದ್ದಾರೆ.
ಕಾರ್ಮಿಕರ ಕುಂದುಕೊರತೆಗಳಿಗೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಶೀಘ್ರ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದು ರಾಘವೇಂದ್ರ ಭರವಸೆ ನೀಡಿದರು.
ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಬದ್ಧ
ಕ್ಷೇತ್ರದ ಗಾರ್ಮೆಂಟ್ಸ್ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ತಮ್ಮ ಆದ್ಯತೆ ಎಂದು ಸಂಸದರು ಹೇಳಿದರು. ಕಲ್ಯಾಣ ಯೋಜನೆಗಳ ಸೌಲಭ್ಯಗಳು ಪಾರದರ್ಶಕವಾಗಿ ಪ್ರತಿಯೊಬ್ಬ ಅರ್ಹ ಕಾರ್ಮಿಕರಿಗೂ ತಲುಪಬೇಕು ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಮಿಕರ ವೇತನ ಸುರಕ್ಷತೆ, ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣಕ್ಕೆ ಒತ್ತು ನೀಡುವ ಸುಧಾರಣೆಗಳನ್ನು ಜಾರಿಗೆ ತಂದಿದೆ. ಅವುಗಳ ಪ್ರಯೋಜನಗಳನ್ನು ಕಾರ್ಮಿಕರಿಗೆ ತಲುಪಿಸಲು ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸುವುದಾಗಿ ಅವರು ಹೇಳಿದರು.
ಶಿಕಾರಿಪುರದ ಸಭೆಯಲ್ಲಿ ಪಿಎಫ್ ಪ್ರಾದೇಶಿಕ ಆಯುಕ್ತೆ ಜೀಸೆನಾ, ಪಿಎಫ್ ಜಾರಿ ಅಧಿಕಾರಿ ರವೀಂದ್ರ, ಇಎಸ್‌ಐ ವ್ಯವಸ್ಥಾಪಕಿ ಆಶಾ ದೇವಿ, ಇಎಸ್‌ಐ ಸಾಮಾಜಿಕ ಭದ್ರತಾ ಅಧಿಕಾರಿ ಪ್ರಿಯಾನ್ಶು ಚೌಧರಿ ಹಾಗೂ ಕಾರ್ಮಿಕ ಅಧಿಕಾರಿ ರಘುನಾಥ್ ಉಪಸ್ಥಿತರಿದ್ದರು.

