RIPPONPETE ; ಈ ಹಿಂದೆ ಸಿದ್ದರಾಮಯ್ಯ ಸರ್ಕಾರ 2015-16ನೇ ಸಾಲಿನಲ್ಲಿ ಅಧಿಕಾರದಲ್ಲಿದ್ದಾಗ ಪೂರ್ವ ಪ್ರಾಥಮಿಕ ಕಲಿಕೆಯಿಂದ 12ನೇ ತರಗತಿಯವರೆಗೆ ಸರ್ಕಾರಿಯ ಎಲ್ಲ ಶಾಲೆಗಳು ಒಂದೇ ಸೂರಿನಡಿಯಲ್ಲಿ ತರುವ ಹೊಸ ಯೋಜನೆಯನ್ನು ಜಾರಿಗೊಳಿಸಿದ್ದು ಅದರಂತೆ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡ್ಮೂರು ಸರ್ಕಾರಿ ಶಾಲೆಗಳನ್ನು ಈ ಯೋಜನಾ ವ್ಯಾಪ್ತಿಗೆ ತರವ ಮೂಲಕ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಂಚ ಹೋಬಳಿಯ ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಶಾಲೆಯನ್ನು ಕೆ.ಪಿ.ಎಸ್. (ಕರ್ನಾಟಕ ಪಬ್ಲಿಕ್ ಸ್ಕೂಲ್) ಮಾರ್ಪಡಿಸಿ ಸುಮಾರು 1.80 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿ ಉದ್ಘಾಟನೆಗೊಂಡ ವರ್ಷದೊಳಗೆ ಕಟ್ಟಡ ಸೋರುವಂತಾಗಿದೆ ಎಂದು ಸಾರ್ವಜನಿಕರು ಮತ್ತು ಪೋಷಕರು ವಿದ್ಯಾರ್ಥಿಗಳು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಉದ್ಘಾಟನೆಗೂ ಮುನ್ನವೇ ಕಟ್ಟಡ ಕಳಪೆಯಾಗಿರುವ ಬಗ್ಗೆ ಸಮಗ್ರ ವರದಿಯನ್ನು ಮ.ಟೈ. ಮಾಡಲಾಗಿದ್ದು ಆಗ ಶಾಸಕ ಆರಗ ಜ್ಞಾನೇಂದ್ರ ಗುತ್ತಿಗೆದಾರರ ಮತ್ತು ಅಧಿಕಾರಿಗಳಿಗೆ ತೀವ್ರವಾಗಿ ತರಾಟೆ ತಗೆದುಕೊಂಡು ಮೇಲ್ಚಾವಣಿ ಸೋರುವಿಕೆಯನ್ನು ಖುದ್ದು ಪರಿಶೀಲನೆ ನಡೆಸಿದಾಗ ಅಧಿಕಾರಿಗಳು ಹೊಸ ತಾಂತ್ರಿಕತೆ ಬಳಸಿ ಮಾಡಲಾಗಿದೆ ಸರಿಯಾಗುತ್ತದೆ ಇನ್ಮುಂದೆ ಸೋರುವುದಿಲ್ಲ ಎಂದು ನಂಬಿಸಿದರು.
ಮಲೆನಾಡಿನ ಪ್ರದೇಶವಾಗಿರುವ ಕಾರಣ ಭಾರಿ ಮಳೆಯಿಂದಾಗಿ ಕೆಲವು ಕಡೆಯಲ್ಲಿ ನೀರು ಸುರಿದು ಗೋಡೆಯಲ್ಲಿ ತೇವಾಂಶ ಕಂಡುಬಂದಿದೆ ಎಂದು ಅಂದಿನ ಹೊಸನಗರ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಸ್ಪಷ್ಟನೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.
ಒಟ್ಟಾರೆ ಕಳಪೆ ಕಾಮಗಾರಿಯಿಂದಾಗಿ ಕಟ್ಟಡ ಉದ್ಘಾಟನೆಗೊಂಡು ವರ್ಷ ಕಳೆಯುವ ಮುನ್ನವೇ ಮೇಲ್ಛಾವಣಿ ನೀರು ತೊಟ್ಟಿಕ್ಕುತ್ತಿದ್ದು ಪಾಠ ಪ್ರವಚನದ ವೇಳೆಯಲ್ಲಿ ಮಕ್ಕಳು ನೋಟ್ಸ್ ಬರೆದುಕೊಳ್ಳುವಾಗ ಮೇಲೆ ನೋಡಿಕೊಳ್ಳುವ ಸ್ಥಿತಿ ಎದುರಾಗಿದೆ. ಅಲ್ಲದೆ ಗೋಡೆಯಲ್ಲಿ ಬಿರುಕು ಬಿಟ್ಟು ಸುರಿದ ಮಳೆಯ ನೀರು ಗೋಡೆಯಲ್ಲಿನ ಬಿರುಕಿನಲ್ಲಿ ಕೊಠಡಿಯ ತುಂಬುತ್ತಿದೆ.
ಶಿಕ್ಷಣ ಸಚಿವರ ಕ್ಷೇತ್ರದಲ್ಲಿಯೇ ಕಟ್ಟಡ ಹೀಗೆ ದುರಾವಸ್ಥೆಯಾದರೆ ಇನ್ನೂ ಬೇರೆ ಕಡೆಯ ಕಥೆ ಏನು ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುವಂತಾಗಿದೆ.
ಅಮೃತ ಗ್ರಾಮದ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 320 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು 7ನೇ ತರಗತಿವರಗೆ 08 ಕೊಠಡಿಗಳಲ್ಲಿ 11 ತರಗತಿಗಳನ್ನು ನಡೆಸುವ ಅನಿವಾರ್ಯತೆ ಎದುರಾಗಿದೆ. ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳಿಗೆ ನಿರ್ಮಿಸಿದ್ದ ಶೌಚಾಲಯವನ್ನು ಕಟ್ಟಡ ಕಾರ್ಮಿಕರ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಕೊಡಲಾಗಿ ನಿರ್ಮಾಣಗೊಂಡ ಕಾಮಗಾರಿ ಉದ್ಘಾಟನೆಗೊಂಡು ವರ್ಷಗಳು ಕಳೆದರು ಕೂಡಾ ವಿದ್ಯಾರ್ಥಿಗಳಿಗೆ ಶೌಚಾಲಯ ಬಳಕೆ ಮಾತ್ರ ಇಲ್ಲದಂತಾಗಿ ಬಯಲು ಬಹಿರ್ದೆಸೆಗೆ ಹೋಗುವ ಸ್ಥಿತಿಯಾಗಿದೆ.
ಪ್ರತ್ಯೇಕ ಅಡುಗೆ ಕೋಣೆ ಇಲ್ಲ :
ಮಕ್ಕಳ ಬಿಸಿ ಊಟ ತಯಾರಿಕೆಗೆ ಪ್ರತ್ಯೇಕ ಅಡುಗೆ ಕೋಣೆ ಇಲ್ಲದಿರುವುದರಿಂದ ಶಾಲಾ ಕೊಠಡಿಯನ್ನು ಅಡುಗೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಅಗತ್ಯಕ್ಕೆ ತಕ್ಕಷ್ಟು ನೀರಿನ ವ್ಯವಸ್ಥೆಯಿಲ್ಲದೆ ತೆರೆದ ಬಾವಿ ಮತ್ತು ಹೊಂಡಗಳಿಂದ ನೀರನ್ನು ಉಪಯೋಗಿಸಲಾಗುತ್ತಿದೆ. ತಾತ್ಕಾಲಿಕವಾಗಿ
ವಿದ್ಯುತ್ ಸಂಪರ್ಕಕ್ಕೆ ಅಳವಡಿಸಲಾದ ವಿದ್ಯುತ್ ವಯರ್‌ಗಳು ನೆಲದ ಮೇಲೆ ಬಿದ್ದಿದ್ದು ಡ್ಯಾಮೇಜ್ ವಯರ್‌ನ ತಂತಿ ತುಳಿದು ಎರಡು ಜಾನುವಾರು ಸಾವನ್ನಪ್ಪಿರುತ್ತವೆಂಬ ಸುದ್ದಿ ಇದ್ದು ವಿದ್ಯಾರ್ಥಿಗಳು ಆಕಸ್ಮಿಕವಾಗಿ ತುಳಿದರೆ ಗತಿ ಏನು ಎಂಬ ಬಗ್ಗೆ ವಿದ್ಯಾರ್ಥಿ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಅಧಿಕಾರಿಗಳ ಮತ್ತು ಗುತ್ತಿಗೆದಾರನ ಬೇಜವಾಬ್ದಾರಿಗೆ ಕನ್ನಡಿ ಬೇಕಾ ?
ಕರ್ನಾಟಕ ಪಬ್ಲಿಕ್ ಸ್ಕೂಲ್ ಕಟ್ಟಡ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಶಾಲಾಭಿವೃದ್ದಿ ಸಮಿತಿಯವರು ಮತ್ತು ಶಿಕ್ಷಕವೃಂದ ಈ ಬಗ್ಗೆ
ಅಧಿಕಾರಿಗಳು ಮತ್ತು ಗುತ್ತಿಗೆದಾರರ ಗಮನ ಸೆಳೆದರೂ ಕೂಡಾ ಲೆಕ್ಕಿಸಿದೇ ಬೇಜವಾಬ್ದಾರಿಯೇ ಈ ಸುಸಜ್ಜಿತ ಕಟ್ಟಡ ಕಾಮಗಾರಿ ಕಳಪೆಯಾಗಿ ಸೋರುವಂತಾಗಲು ಕಾರಣವಾಗಿ ಅಂಗೈ ಹುಣ್ಣಿಗೆ ಕನ್ನಡಿ ಬೇಕಾ ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಪನಿರ್ದೇಶಕರೇ ಎಲ್ಲಿದ್ದೀರಾ ?
ಶಿಕ್ಷಣ ಸಚಿವರು ಬಂದು ಉದ್ಘಾಟನೆ ಮಾಡಿ ಹೋದ ಮೇಲೆ ಶಾಲಾ ಕಟ್ಟಡ ಹೇಗಿದೆ ಸೋರುತ್ತಿರುವ ಕಟ್ಟಡದಲ್ಲಿ ವಿದ್ಯಾರ್ಥಿಗಳು ಹೇಗೆ ಕುಳಿತುಕೊಂಡು ಪಾಠ ಕೇಳುತ್ತಾರೆಂಬ ಬಗ್ಗೆ ಗಮನಹರಿಸಿದ್ದೀರಾ ಎಂದು ಪೋಷಕರು ತಮ್ಮ ಅಸಹಾಯಕತೆಯನ್ನು ಮಾಧ್ಯಮದವರಲ್ಲಿ ಹಂಚಿಕೊಂಡರು.