ಶಿವಮೊಗ್ಗ

ಶಿವಮೊಗ್ಗದ ಸಕ್ರೆಬೈಲು ಬಿಡಾರದಲ್ಲಿ ‘ಶೌರ್ಯ’ ಆನೆ ಸಾವು: ನಿರ್ವಹಣಾ ವ್ಯವಸ್ಥೆ ಬಗ್ಗೆ ಮತ್ತೆ ಎದ್ದ ಪ್ರಶ್ನೆ

ಬಾಳೆಹೊನ್ನೂರು ಬಳಿ ಸೆರೆಹಿಡಿದು ಪಳಗಿಸಲು ಸಕ್ರೆಬೈಲು ಆನೆ ಬಿಡಾರಕ್ಕೆ ತರಲಾಗಿದ್ದ 32 ವರ್ಷದ 'ಶೌರ್ಯ' ಆನೆ ಅಸುನೀಗಿದೆ. ಈ ಘಟನೆಯು ಬಿಡಾರದಲ್ಲಿನ ಆನೆಗಳ ಆರೈಕೆ, ವೈದ್ಯಕೀಯ ನೆರವು ಹಾಗೂ ನಿರ್ವಹಣೆಯ ಬಗ್ಗೆ ಮತ್ತೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಶಿವಮೊಗ್ಗದ ಸಕ್ರೆಬೈಲು ಬಿಡಾರದಲ್ಲಿ 'ಶೌರ್ಯ' ಆನೆ ಸಾವು Sakrebailu

ಶಿವಮೊಗ್ಗ: ಚಿಕ್ಕಮಗಳೂರಿನ ಬಾಳೆಹೊನ್ನೂರು ಬಳಿ ಸೆರೆಹಿಡಿದು ಪಳಗಿಸಲು ಸಕ್ರೆಬೈಲು ಆನೆ ಬಿಡಾರಕ್ಕೆ ತರಲಾಗಿದ್ದ 32 ವರ್ಷದ ‘ಶೌರ್ಯ’ ಆನೆ ಅಸುನೀಗಿದೆ. ಈ ಘಟನೆಯು ಬಿಡಾರದಲ್ಲಿನ ಆನೆಗಳ ಆರೈಕೆ, ವೈದ್ಯಕೀಯ ನೆರವು ಹಾಗೂ ನಿರ್ವಹಣೆಯ ಬಗ್ಗೆ ಮತ್ತೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

WhatsApp Group Join Now
Telegram Group Join Now
Instagram Group Join Now

ಬಾಳೆಹೊನ್ನೂರು ಭಾಗದಲ್ಲಿ ಇಬ್ಬರನ್ನು ಬಲಿಪಡೆದಿದ್ದ ಈ ಆನೆಯನ್ನು ಕಳೆದ ಏಪ್ರಿಲ್ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿ ಸೆರೆಹಿಡಿಯಲಾಗಿತ್ತು. ನಂತರ ಅದನ್ನು ಸಕ್ರೆಬೈಲಿಗೆ ಸ್ಥಳಾಂತರಿಸಿ ಪಳಗಿಸುವ ಕಾರ್ಯ ಮಾಡಲಾಗುತ್ತಿತ್ತು. ಇದೀಗ ಶೌರ್ಯನ ಹಠಾತ್ ಸಾವಿನಿಂದಾಗಿ ಶಿಬಿರದಲ್ಲಿರುವ ಆನೆಗಳ ಸಂಖ್ಯೆ 24 ರಿಂದ 23 ಕ್ಕೆ ಕುಸಿದಿದೆ.

ಹಿಂದಿನ ಘಟನೆಗಳ ಬಗ್ಗೆಯೂ ಕಳವಳ:

ಸಕ್ರೆಬೈಲು ಬಿಡಾರದಲ್ಲಿ ಆನೆಗಳ ಸಾವು ಅಥವಾ ಅನಾರೋಗ್ಯದ ಸಮಸ್ಯೆಗಳು ಹೊಸದೇನಲ್ಲ. ಈ ಹಿಂದೆ ಹಾಸನದಿಂದ ತರಲಾಗಿದ್ದ ‘ವಿಕ್ರಾಂತ್’ ಎಂಬ ಆನೆಯ ಅನಾರೋಗ್ಯದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹಾಗೆಯೇ ‘ಬಾಲಣ್ಣ’ ಎಂಬ ಆನೆ ಕಿವಿಯ ಗಾಯದಿಂದ ಬಳಲುತ್ತಿದ್ದ ಬಗ್ಗೆಯೂ ವರದಿಯಾಗಿತ್ತು. ಇಂತಹ ಸಾಲು ಸಾಲು ಘಟನೆಗಳು ನಡೆಯುತ್ತಿದ್ದರೂ, ಆನೆಗಳ ಸುರಕ್ಷತೆ ಮತ್ತು ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆಯಲ್ಲಿ ಶಾಶ್ವತ ಸುಧಾರಣೆ ಕಂಡುಬರುತ್ತಿಲ್ಲ ಎಂಬುದು ಪ್ರಾಣಿಪ್ರಿಯರ ಪ್ರಮುಖ ಆರೋಪವಾಗಿದೆ.

ವಿವಿಧ ಜಿಲ್ಲೆಗಳಲ್ಲಿ ಉಪಟಳ ನೀಡುವ ಕಾಡಾನೆಗಳನ್ನು ಸೆರೆಹಿಡಿದು ಸಕ್ರೆಬೈಲಿಗೆ ತರುವುದು ವಾಡಿಕೆ. ಆದರೆ, ಹೊಸ ಪರಿಸರಕ್ಕೆ ಹೊಂದಿಕೊಳ್ಳುವಾಗ ಆನೆಗಳಿಗೆ ನೀಡಬೇಕಾದ ಆಹಾರ, ಅಗತ್ಯ ಚಿಕಿತ್ಸೆ ಮತ್ತು ನಿರಂತರ ವೈದ್ಯಕೀಯ ನಿಗಾದಲ್ಲಿ ಲೋಪವಾಗುತ್ತಿದೆ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿವೆ. ಹಿರಿಯ ಅಧಿಕಾರಿಗಳು ಕೇವಲ ತಪಾಸಣೆಗೆಂದು ಭೇಟಿ ನೀಡುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬ ಅಸಮಾಧಾನವೂ ಇದೆ.

ಸಮಗ್ರ ತನಿಖೆಗೆ ಆಗ್ರಹ:

ಸದ್ಯ ಶೌರ್ಯ ಆನೆಯ ಸಾವಿಗೆ ನಿಖರವಾದ ಕಾರಣ ಮರಣೋತ್ತರ ಪರೀಕ್ಷೆ ಹಾಗೂ ವೈದ್ಯಕೀಯ ವರದಿಗಳು ಬಂದ ಬಳಿಕವಷ್ಟೇ ಗೊತ್ತಾಗಬೇಕಿದೆ. ಈ ಕುರಿತು ನಡೆಯುವ ತನಿಖೆಯು ಕೇವಲ ಕಾಟಾಚಾರಕ್ಕೆ ಸೀಮಿತವಾಗಬಾರದು. ಆನೆಗೆ ಈವರೆಗೆ ನೀಡಲಾದ ಚಿಕಿತ್ಸೆ, ಆಹಾರದ ವಿವರ ಹಾಗೂ ವೈದ್ಯಕೀಯ ವರದಿಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ಒಂದು ವೇಳೆ ನಿರ್ವಹಣೆಯಲ್ಲಿ ಅಥವಾ ಚಿಕಿತ್ಸೆಯಲ್ಲಿ ಲೋಪವಾಗಿರುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿ ದಯಾಸಂಘಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!