ಸಿರಿಧಾನ್ಯಗಳ ಮೌಲ್ಯವರ್ಧನೆಯಿಂದ ಆರೋಗ್ಯ ವೃದ್ಧಿ

0 299

ರಿಪ್ಪನ್‌ಪೇಟೆ : ಪ್ರಸ್ತುತ ದಿನಮಾನಗಳಲ್ಲಿ ಜನರು ಸಲಾಡ್‌ಗಳು, ಸಿಹಿತಿಂಡಿಗಳು, ಸ್ಯಾಂಡ್‌ವಿಚ್‌ಗಳು, ಚೀಸ್ ಮುಂತಾದವುಗಳ ಹಿಂದೆ ಬಿದ್ದು ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದು, ಪೌಷ್ಟಿಕ ಆಹಾರ ಹಾಗೂ ಆರೋಗ್ಯದ ಮಹತ್ವ ತಿಳಿಸುವುದು ಮುಖ್ಯವಾಗಿದೆ ಡಾ.ಜ್ಯೋತಿ ರಾಥೋಡ್ ತಿಳಿಸಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷ ಬಿ.ಎಸ್ಸಿ ಕೃಷಿಯ ಗಂಧದ ಗುಡಿ ತಂಡದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿಯಲ್ಲಿ, ಕೋಡೂರಿನಲ್ಲಿ ಹಮ್ಮಿಕೊಂಡಿದ್ದ ಸಿರಿಧಾನ್ಯಗಳ ಮೌಲ್ಯವರ್ಧನೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಕ್ಕಿಯು ಹೊಟ್ಟೆಯನ್ನು ತುಂಬಿಸುತ್ತದೆ ಹೊರತು ಪೋಷಕಾಂಶಗಳ ಅವಶ್ಯಕತೆಯನ್ನು ತುಂಬಿಸಿವುದಿಲ್ಲ. ಸಿರಿಧಾನ್ಯಗಳು ಪ್ರೋಟೀನ್, ಲಿಪಿಡ್, ವಿಟಮಿನ್ ಬಿ, ಕಾರ್ಬೊಹೈಡ್ರೇಟ್, ಕ್ಯಾಲ್ಸಿಯಂ, ಜಿಂಕ್ ಮುಂತಾದ ಸಮತೋಲಿತ ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು, ಮಧುಮೇಹ, ಸಕ್ಕರೆ ಕಾಯಿಲೆ, ಬೊಜ್ಜು ಮುಂತಾದ ರೋಗಗಳಿಗೆ ರಾಮಬಾಣವಾಗಿದೆ ಎಂದು ಹೇಳಿದರು.

ಮಕ್ಕಳ ಬೆಳವಣಿಗೆಗೆ ಕೊಡುವ ಹಾರ್ಲಿಕ್ಸ್, ಬೂಸ್ಟ್ ಬಿಟ್ಟು ಸಿರಿಧಾನ್ಯಗಳಿಂದ ತಯಾರಿಸಿದ ರಾಗಿ ಮಾಲ್ಟ್ ಕೊಡುವುದರಿಂದ ಕ್ಯಾಲ್ಸಿಯಂ ಜಾಸ್ತಿ ಪ್ರಮಾಣದಲ್ಲಿ ದೊರೆತು ಮುಂದೆ ಬರುವ ಕಾಲುನೋವು, ಸೊಂಟನೋವು, ಕತ್ತು ನೋವನ್ನು ದೂರವಿಡಬಹುದು ಎಂದು ತಿಳಿಸಿದರು.

ಅಂಗಡಿಯಲ್ಲಿ ಮಾರಾಟ ಮಾಡುವ ಖಾದ್ಯಗಳಲ್ಲಿ ಸಂರಕ್ಷಕಗಳಿದ್ದು ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಮನೆಯಲ್ಲಿಯೇ ಖಾದ್ಯ ತಯಾರಿಸುವುದು ಸೂಕ್ತ ಎಂದು ಸಂಪನ್ಮೂಲ ವ್ಯಕ್ತಿ ಡಾ.ಶೃತಿ ಈ ಸಂದರ್ಭದಲ್ಲಿ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮೌಲ್ಯವರ್ಧಿತ ರಾಗಿ ಮಾಲ್ಟ್ ತಯಾರಿಸಲಾಯಿತು. 1ಕೆ.ಜಿ ರಾಗಿ ಹಿಟ್ಟು, 4 ಕೆ.ಜಿ ಗೋಧಿ, 750 ಗ್ರಾಂ ಹೆಸರುಕಾಳನ್ನು ನೀರಿನಲ್ಲಿ ನೆನೆಸಿ, ಮೊಳಕೆಯೊಡೆದ ನಂತರ ಬಿಸಿಲಿಗೆ ಒಣಗಿಸಿ, ಪುಡಿ ಮಾಡಿ ಏಲಕ್ಕಿಯೊಂದಿಗೆ ಬೆರೆಸಿ ಮೌಲ್ಯವರ್ಧಿತ ಮಾಲ್ಟ್ ತಯಾರಿಸುವುದರ ಕುರಿತು ತಿಳಿಸಿ ಪ್ರಾತ್ಯಕ್ಷಿಕೆ ಮಾಡಲಾಯಿತು.

Leave A Reply

Your email address will not be published.

error: Content is protected !!