‘ಶರಾವತಿ ಹಿನ್ನೀರ ಹಬ್ಬ ಎನ್ನುವ ಬದಲು ಕಣ್ಣೀರ ಹಬ್ಬ ಎಂದು ಹೆಸರಿಡಬಹುದಿತ್ತು’ ; ಪಟಗುಪ್ಪದಲ್ಲಿ ‘ಶರಾವತಿ ಹಿನ್ನೀರ ಹಬ್ಬ’ ಆಚರಣೆಗೆ ಕಾಂಗ್ರೆಸ್ ತೀವ್ರ ವಿರೋಧ


ಹೊಸನಗರ: ಶಾಸಕ ಎಚ್. ಹಾಲಪ್ಪ ಹರತಾಳು ಅಧ್ಯಕ್ಷತೆಯಲ್ಲಿ ಮಾ.4ರಂದು ತಾಲೂಕಿನ ಪಟಗುಪ್ಪದಲ್ಲಿ ಏರ್ಪಡಿಸಿರುವ ಶರಾವತಿ ಹಿನ್ನೀರು ಹಬ್ಬ ಎನ್ನುವ ಕಾರ‍್ಯಕ್ರಮದ ಆಯೋಜನೆಯು ಆಯೋಜಕರ ವಿಕೃತ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ ಆರೋಪಿಸಿದ್ದಾರೆ.


ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಶರಾವತಿ ಮುಳುಗಡೆ ಎನ್ನುವುದು ಈ ಭಾಗದ ಜನರಿಗೆ ಕರಾಳ ದಿನವಾಗಿದೆ. ಹೊಸನಗರ ಹಾಗೂ ಸಾಗರ ತಾಲೂಕಿನ ಜನತೆಯ ಬದುಕಿಗೆ ಶಾಪವಾಗಿದೆ. ತಲೆ ತಲಾಂತರದಲ್ಲಿ ಈ ಭಾಗದಲ್ಲಿ ನೆಲೆಸಿದ್ದವರ ಮನೆ, ಜಮೀನು ಬದುಕನ್ನು ಕಿತ್ತುಕೊಂಡ ದುರಂತ ಘಟನೆ ಇದು. ಇಂತಹ ಮುಳುಗಡೆಯ ನೆಪವಾಗಿಸಿಕೊಂಡು, ಮುಳುಗಡೆಯಾಗಿ 60 ವರ್ಷ ಕಳೆದಿದ್ದು ಫ್ಲೆಕ್ಸ್ ಹಾಕಿ ಶರಾವತಿ ಹಿನ್ನೀರ ಹಬ್ಬ ಎಂದು ಸಂಭ್ರಮಿಸುವ ಆಚರಣೆಯನ್ನು ಕೈಗೊಂಡಿರುವುದು ವಿಪರ‍್ಯಾಸವಷ್ಟೇ ಎಂದರು.


ಮುಳುಗಡೆ ಸಂದರ್ಭದಲಿ ಅನುಭವಿಸಿದ ಸಂಕಷ್ಟವನ್ನು ಯುವಪೀಳಿಗೆಯವರಿಗೆ ಮನವರಿಕೆ ಮಾಡಿಕೊಡಬೇಕು. ಆದರೆ ಸಂಭ್ರಮಾಚರಣೆ ಮೂಲಕ ಇತಿಹಾಸವನ್ನು ಮರೆಸುವ ಯತ್ನ ಇದಾಗಿದೆ. ಅಂದು ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬಂದ ಸಾವಿರಾರು ಕುಟುಂಬಗಳಿಗೆ ಇನ್ನೂ ನೆಲೆ ಕಂಡುಕೊಳ್ಳಲಾಗಿಲ್ಲ. ಸಂತ್ರಸ್ಥರಿಗೆ ಪರಿಹಾರ ಸಿಕ್ಕಿಲ್ಲ. ತಮ್ಮಅಜ್ಜ, ಅಜ್ಜಿ, ತಂದೆ-ತಾಯಂದಿರು ಅನುಭವಿಸಿದ ನೋವಿನ ದಿನಗಳನ್ನು ನೆನೆಸಿಕೊಂಡಲ್ಲಿ ಇದು ಸಂತಸ ಪಡುವ ಹಬ್ಬವಾಗಲು ಸಾಧ್ಯವೇ ಇಲ್ಲ. ಶರಾವತಿ ಕಣ್ಣೀರ ಹಬ್ಬ ಎಂದರೆ ಹೆಚ್ಚು ಸೂಕ್ತವಾಗುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ವೇಳೆ ಇಂತಹದೊಂದು ಕಾರ‍್ಯಕ್ರಮವನ್ನು ಆಯೋಜಿಸುವುದೇ ಆಗಿದ್ದಲ್ಲಿ, ನಾಡಿನ ಹಿರಿಯ ಸಾಹಿತಿ ನಾ. ಡಿಸೋಜ ಅವರಂತ ಹಲವು ಹಿರಿಯರು, ಮುಳುಗಡೆ ಸಂತ್ರಸ್ಥರ ಮಾರ್ಗದರ್ಶನ, ಸಲಹೆ ಪಡೆಯಬಹುದಿತ್ತು. ಸ್ವತಃ ಮುಳುಗಡೆ ಸಂತ್ರಸ್ಥರಾದ ಶಾಸಕ ಹಾಲಪ್ಪ ಅವರೂ ಸಹಾ ಇದರಲ್ಲಿ ಭಾಗಿಯಾಗುತ್ತಿರುವುದು ದುರಾದೃಷ್ಟಕರ. ಮುಳಗಡೆ ಸಂತ್ರಸ್ಥರ ಪರವಾಗಿ ನಿಲ್ಲಬೇಕಾದ ಹರತಾಳು ಹಾಲಪ್ಪನವರೇ ಈ ಶರಾವತಿ ಹಿನ್ನೀರ ಹಬ್ಬದ ಅಧ್ಯಕ್ಷತೆ ವಹಿಸಿರುವುದು ಮುಳುಗಡೆ ಸಂತ್ರಸ್ಥ ಕುಟುಂಬಕ್ಕೆ ಮಾಡಿದ ಅವಮಾನ. ಹಿಂದಿನ ತಲೆಮಾರಿನ ಜನರು ಅನುಭವಿಸಿದ ನೋವಿನ ನೆನಪಿನಲ್ಲಿ ಕೆಲ ಯುವಕರ ತಂಡ ಈಗ ಸಂಭ್ರಮಾಚರಣೆ ಮಾಡಲು ಮುಂದಾಗಿರುವುದು ಎಷ್ಟರ ಮಟ್ಟಿಗೆ ಸಮಂಜಸ ? ಎಂದು ಪ್ರಶ್ನಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,755FollowersFollow
0SubscribersSubscribe
- Advertisement -spot_img

Latest Articles

error: Content is protected !!