RIPPONPETE ; ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವ ಉದ್ದೇಶದಿಂದಲೂ ಏನೋ ರಾಜ್ಯ ಹೆದ್ದಾರಿಯಲ್ಲಿ ಬಿದ್ದಿರುವ ಆಳು ಉದ್ದದ ಹೊಂಡವನ್ನು ಮುಚ್ಚಲು ಲೋಕೋಪಯೋಗಿ ಇಲಾಖೆ ಜೇಡಿ, ಕೆಂಪು ಮಣ್ಣು ಹಾಕುತ್ತಿದ್ದಾರೆಂದು ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ ಆರೋಪಿಸಿದ್ದಾರೆ.
ಆಯನೂರು – ಹೊಸನಗರ ರಾಜ್ಯ ಹೆದ್ದಾರಿ 26 ಮಾರ್ಗದ ಕೋಡೂರು, ಕೊಪ್ಪರಗುಂಡಿ ಮತ್ತು ಅರಸಾಳು, ಸೂಡೂರು, ಚಿನ್ನಮನೆ ಬಳಿ ತೀವ್ರ ಮಳೆಯಿಂದ ರಸ್ತೆಯಲ್ಲಿ ಭಾರಿ ಪ್ರಮಾಣದ ಹೊಂಡ ಗುಂಡಿಗಳು ಬಿದ್ದಿದ್ದು ಇದರಿಂದಾಗಿ ಸಾರ್ವಜನಿಕರು ಪ್ರಯಾಣಿಕರು ವಾಹನಗಳಲ್ಲಿ ಓಡಾಡದ ಸ್ಥಿತಿ ನಿರ್ಮಾಣಗೊಂಡಿದ್ದು ಇದಕ್ಕೆ “ಕೋಲ್ಡ್ ಟಾರ್’’ ಹಾಕುವ ಬದಲು ಕೆಂಪು ಜೇಡಿ ಮಣ್ಣಿನ ಲೇಪನ ಮಾಡುವ ಮೂಲಕ ಕಣ್ಣು ಕಟ್ಟುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ನೆಪದಲ್ಲಿ ಅಧಿಕಾರದ ಗದ್ದುಗೆ ಏರಿ ಈಗ ಅದನ್ನು ಸಮರ್ಥವಾಗಿ ಅನುಷ್ಟಾನಗೊಳಿಸಲಾಗದೇ ಅಭಿವೃದ್ದಿಗಾಗಿ ಮೀಸಲಾಗಿಟ್ಟ ಹಣವನ್ನು ಗ್ಯಾರಂಟಿಗೆ ಬಳಸಿ ಅಭಿವೃದ್ದಿಯೂ ಇಲ್ಲದೆ ಜನರನ್ನು ದಿಕ್ಕು ತಪ್ಪಿಸುವ ಹುನ್ನಾರದಲ್ಲಿ ತೊಡಗಿಕೊಂಡಿರುವ ಸರ್ಕಾರಕ್ಕೆ ಜನಸಾಮಾನ್ಯರಲ್ಲಿ ತೀವ್ರ ಅಸಮದಾನಕ್ಕೆ ಕಾರಣವಾಗಿದೆ.
ಸಸರ್ಕಾರ ಅಧಿಕಾರ ಹಿಡಿದ ದಿನದಿಂದ ಆರಂಭಗೊಂಡಿರುವ ಹಲವು ಆರೋಪಗಳಲ್ಲಿ ಸಿಲುಕಿಕೊಂಡಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಆಡಳಿತದಿಂದ ಜನಸಾಮಾನ್ಯರಲ್ಲಿ ಅಸಮದಾನ ಕಾಣಿಸಿಕೊಂಡಿದ್ದು ಈಗ ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರು ಮತ್ತು ವಾಹನ ಚಾಲಕರು ಜೀವವನ್ನು ಎಡಗೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಿಸದ್ದಾರೆಂದು ಹಲವು ವಾಹನ ಚಾಲಕರು ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ತೀವ್ರವಾಗಿ ಖಂಡಿಸುವಂತಾಗಿದೆ.
ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣದೊಂದಿಗೆ ಈಗ ಲೋಕೋಪಯೋಗಿ ಇಲಾಖೆಯವರು ಹೊಂಡ ಗುಂಡಿಯನ್ನು ಕೆಂಪು ಜೇಡಿ ಮಣ್ಣಿನಲ್ಲಿ ಮುಚ್ಚುತ್ತಾ ಬೇಸಿಗೆಯಲ್ಲಿ ದೋಳು ತುಂಬಿ ಎಷ್ಟು ಜನರನ್ನು ಬಲಿ ತಗೆದುಕೊಳ್ಳಬೇಕೋ ಎಂಬ ಬಗ್ಗೆ ಆಡಿಕೊಳ್ಳುವಂತಾಗಿ ಸರ್ಕಾರಕ್ಕೆ ಹಿಡಿ ಶಾಪಹಾಕುತ್ತಿದ್ದಾರೆ.
ಅಧಿಕಾರದ ದಾಹಕ್ಕಾಗಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿ ಈಗ ಸರಿಯಾಗಿ ನಿರ್ವಹಣೆ ಮಾಡಲಾಗದೆ ಎಲ್ಲಾ ಇಲಾಖೆಯಲ್ಲಿನ ಹಣವನ್ನು ಪಡೆದು ದಿವಾಳಿ ಮಾಡಿರುವುದಕ್ಕೆ ಸಾಕ್ಷಿಯಾಗಿ ರಾಜ್ಯ ಹೆದ್ದಾರಿಯಲ್ಲಿನ ಹೊಂಡ-ಗುಂಡಿ ಮುಚ್ಚಲು ಕೆಂಪು ಜೇಡಿ ಮಣ್ಣಿನ ಲೇಪನ ಮಾಡುತ್ತಿರುವುದ ಸರ್ಕಾರಕ್ಕೆ ನಾಚಿಕೆಯಾಗಬೇಕು.
– ಜಿ.ಡಿ. ಮಲ್ಲಿಕಾರ್ಜುನ, ರಿಪ್ಪನ್‌ಪೇಟೆ ಗ್ರಾ.ಪಂ. ಸದಸ್ಯ