ಮಾ.10 ರಿಂದ 14ರ ವರೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ

Written by malnadtimes.com

Published on:

ಬಾಳೆಹೊನ್ನೂರು ; ವೀರಶೈವ ಮಹಾಮತ ಸಂಸ್ಥಾಪಕರಾದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಮಾರ್ಚ್ 10ರಿಂದ 14ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ವಿವಿಧ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಮಾ. 10ರಂದು ವೀರಗಾಸೆ-ಪುರವಂತರ ಸಮ್ಮೇಳನವನ್ನು ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಶಾಸಕರಾದ ಹೆಚ್.ಡಿ.ತಮ್ಮಯ್ಯ, ಜಗದೀಶ ಗುಡಗುಂಟಿಮಠ, ಮಾಜಿ ಸಂಸದ ಮಂಜುನಾಥ ಕುನ್ನೂರು, ವಾಣಿಜ್ಯ ತೆರಿಗೆ ಅಧಿಕಾರಿ ಭುವನೇಶ್ವರಿ ಪಾಟೀಲ ಆಗಮಿಸುವರು. ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆ ಅಧ್ಯಕ್ಷ ಯು.ಎಂ.ಬಸವರಾಜ್ ರಂಭಾಪುರಿ ಬೆಳಗು ಮಾಸ ಪತ್ರಿಕೆ ಬಿಡುಗಡೆ ಮಾಡುವರು.

ಮಾ. 11ರಂದು ಬೆಳಿಗ್ಗೆ 11 ಗಂಟೆಗೆ ನರಸಿಂಹರಾಜಪುರ ತಾಲ್ಲೂಕ ಪತ್ರಕರ್ತರ ಸಂಘದಿಂದ ಕೃಷಿ ಸಮ್ಮೇಳನ ಹಾಗೂ ಕಾಫಿ-ಅಡಿಕೆ ಬೆಳೆಗಾರರ ಹಿತ ಚಿಂತನ ಮಂಥನ ಸಮಾರಂಭ ನಡೆಯಲಿದ್ದು ಶಾಸಕ-ಕರ್ನಾಟಕ ಬಿ.ಜೆಪಿ. ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಟಿ.ಡಿ.ರಾಜೇಗೌಡ, ಹೆಚ್.ಡಿ.ರೇವಣ್ಣ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಎಂ.ಜೆ.ದಿನೇಶ್, ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಸುಜಾತ ಹೆಚ್.ಎಲ್., ಧರ್ಮರಾಜ ಹೊಂಕ್ರವಲ್ಲಿ, ಹೆಚ್.ಬಿ.ರಾಜಗೋಪಾಲ್, ರವಿಚಂದ್ರ, ಕೊರಟಗೆರೆ ಪ್ರಕಾಶ್ ಪಾಲ್ಗೊಳ್ಳುವರು.

ಅಂದು ಸಂಜೆ 6.30 ಗಂಟೆಗೆ ಜರುಗುವ ಕೃಷಿ ಮೇಳ-ಒಂದು ಚಿಂತನ ಮಂಥನ ಸಮಾರಂಭವನ್ನು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಹೆಚ್.ಕೆ.ಸುರೇಶ್, ಜೆ.ಟಿ.ಪಾಟೀಲ, ವಿ.ಪ.ಸದಸ್ಯ ಸಿ.ಟಿ.ರವಿ, ಭಾಸ್ಕರ ವೆನಿಲ್ಲಾ, ಎಸ್.ಹೆಚ್.ರಾಜಶೇಖರ್, ಸಿದ್ಧೇಶ ನಾಗೇಂದ್ರ, ಎಂ.ಎಸ್. ಚನ್ನಕೇಶವ, ಹೆಚ್.ಎಂ.ಲೋಕೇಶ್, ಕುಮಾರಿ ಬಿ.ಸಿ.ಗೀತಾ, ಸುನೀಲ ವರ್ಣೇಕರ್, ಟಿ.ಎಂ. ಉಮೇಶ ಕಲ್ಮಕ್ಕಿ, ಬಿ.ಎಸ್. ನಾಗರಾಜಭಟ್ ಭಾಗವಹಿಸುವರು. ರಾಯಚೂರಿನ ಡಾ.ಚನ್ನಬಸವಯ್ಯ ಹಿರೇಮಠ ಇವರು ಡಾ|| ಮಮತಾ ರಾಣಿ ಅವರ ಸಂಶೋಧಿತ ಕೃತಿ“ಅವಿಭಜಿತ ಬೆಂಗಳೂರು ಜಿಲ್ಲೆಯ ವೀರಭದ್ರ ಆರಾಧನೆ-ಒಂದು ಅಧ್ಯಯನ” ಕೃತಿ ಬಿಡುಗಡೆ ಮಾಡುವರು.

ಮಾ. 12ರ ಬೆಳಿಗ್ಗೆ 11 ಗಂಟೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಶಿವಾದ್ವೈತ ಸಮಾವೇಶ ನಡೆಯಲಿದ್ದು ವಿ.ಆರ್.ಎಲ್. ಸಮೂಹ ಸಂಸ್ಥೆ ಚೇರ್ಮನ್ ಡಾ. ವಿಜಯ ಸಂಕೇಶ್ವರ ಉದ್ಘಾಟಿಸುವರು. ಪ್ರತಿಷ್ಠಿತ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ರಾಯಚೂರು ಜಿಲ್ಲೆ ಕವಿತಾಳ ಗ್ರಾಮದ ಸಾವಯವ ಕೃಷಿ ತಜ್ಞೆ ಡಾ|| ಕವಿತಾ ಮಿಶ್ರಾ ಇವರಿಗೆ ಪ್ರದಾನ ಮಾಡಲಾಗುವುದು. ಡಾ.ಚನ್ನಬಸವಯ್ಯ ಹಿರೇಮಠ ರಾಯಚೂರು ಇವರಿಂದ ರಚಿತವಾದ “ವೀರಶೈವ ರೇಣುಕ ರೇವಣಸಿದ್ಧ ಸತ್ಯ ದರ್ಶನ” ಕೃತಿಯನ್ನು ಸಾಹಿತ್ಯ ಸಂಶೋಧಕ ಡಾ|| ಎ.ಸಿ.ವಾಲಿ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಅಭಿವೃದ್ಧಿ ಸಚಿವ ಡಾ.ಎಂ.ಬಿ.ಪಾಟೀಲ, ಅ.ಭಾ.ವೀ. ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ, ಶಾಸಕ ಜಿ.ಎಸ್.ಪಾಟೀಲ, ಮಾಜಿ ಸಚಿವ ಡಿ.ಎನ್.ಜೀವರಾಜ್, ಕೊಡ್ಲಿಪೇಟೆ ರಾಜೇಶ್ವರಿ ನಾಗರಾಜ್, ಶಿವಮೊಗ್ಗದ ಎಸ್.ಎಸ್.ಜ್ಯೋತಿಪ್ರಕಾಶ್ ಭಾಗವಹಿಸುವರು.

ಸಂಜೆ ಜರುಗುವ ಸಂಗೀತ-ಸೌರಭ-ನಗೆ ಹಬ್ಬವನ್ನು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ ಉದ್ಘಾಟಿಸುವರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿ.ಚಿದಾನಂದಪ್ಪ, ಜುಂಜಪ್ಪ ಹೆಗ್ಗಪ್ಪನವರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಡಾ|| ರಾಜಗುರು ಗುರುಸ್ವಾಮಿ ಕಲಕೇರಿ ಇವರಿಂದ ಸಂಗೀತ ಸೌರಭ, ಟಿ.ವಿ.ಹಾಸ್ಯ ಕಲಾವಿದ ಶರಣು ಹಿರೇಮಠ ಹಾಗೂ ಗದಗ ಜಾನಪದ ಸಂಜೀವಿನಿಯ ಗವಿಸಿದ್ಧಯ್ಯ ಹಳ್ಳಿಕೇರಿಮಠ ಇವರಿಂದ ನಗೆ ಹಬ್ಬ ಕಾರ್ಯಕ್ರಮ ಜರುಗಲಿದೆ.

ಮಾ. 13ರ ಸಂಜೆ ಜಾನಪದ ಮೇಳ ನಡೆಯಲಿದ್ದು ಗುರುಮಠಕಲ್ಲ ಶಾಸಕ ಶರಣಗೌಡ ಕಂದಕೂರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹಾಸನ ಸಂಸದ ಶ್ರೇಯಸ್ ಎಂ.ಪಟೇಲ್, ಕೊಗಳಿಯ ಹೆಚ್.ಎಸ್.ಶಂಕರಯ್ಯ, ನಂದಿಬೇವೂರಿನ ವೀರೇಶ, ಸೋಮಲಾಪುರದ ವೀರಣ್ಣ ಅಂಗಡಿ ಭಾಗವಹಿಸುವರು.

ಈ ಎಲ್ಲ ದಿನಗಳಲ್ಲಿ ನಾಡಿನ ವಿವಿಧ ಮಠಾಧೀಶರು ಕವಿ ಕಲಾವಿದರು ಪಾಲ್ಗೊಳ್ಳುವರು.

ಮಾ. 10ರಂದು ಧ್ವಜಾರೋಹಣ ಮತ್ತು ಹರಿದ್ರಾ ಲೇಪನ, 11ರಂದು ದೀಪೋತ್ಸವ ಕುಂಕುಮೋತ್ಸವ, ಶ್ರೀ ವೀರಭದ್ರಸ್ವಾಮಿ ಚಿಕ್ಕರಥೋತ್ಸವ, 12ರಂದು ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ, 13ರಂದು ಶಯನೋತ್ಸವ, ಶ್ರೀ ಜಗದ್ಗುರು ಶಿವಾನಂದ ಎಸ್ಟೇಟಿನಲ್ಲಿ ಪೂಜಾ-ಪ್ರಸಾದ, ಕೆಂಡಾರ್ಚನೆ ನಡೆಯುವುದು. 14ರಂದು ವಸಂತೋತ್ಸವ, ಭದ್ರಾ ನದಿ ತೀರದಲ್ಲಿ ಜರುಗುವ ಸುರಗಿ ಸಮಾರಾಧನೆಯೊಂದಿಗೆ ಜಾತ್ರಾ ಮಹೋತ್ಸವ ಮಂಗಲಗೊಳ್ಳುವುದೆಂದು ಅವರು ತಿಳಿಸಿದ್ದಾರೆ.

Leave a Comment