ಹೊಸನಗರ: ಸ್ಥಳೀಯ ತಾಲೂಕು ಕಚೇರಿಯಲ್ಲಿ ಕಳೆದ ಮೂರು ತಿಂಗಳಿಂದ ಬಂದ್ ಆಗಿರುವ ಆಧಾರ್ ನೋಂದಣಿ ಕೇಂದ್ರವನ್ನು ಒಂದು ವಾರದೊಳಗೆ ಮರುಆರಂಭಿಸದಿದ್ದರೆ ತಾಲೂಕು ಕಚೇರಿಯ ಎದುರು ಪಕ್ಷಾತೀತವಾಗಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್ ಎಚ್ಚರಿಸಿದ್ದಾರೆ.
ಆಧಾರ್ ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ಮಂಡಲದಿಂದ ಗ್ರೇಡ್ 2 ತಹಶೀಲ್ದಾರ್ ಸುಧೀಂದ್ರ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.

ಜನರ ಅಲೆದಾಟ:
ಯಡೂರು, ನಿಟ್ಟೂರು, ಸಂಪೆಕಟ್ಟೆ, ಮಾಸ್ತಿಕಟ್ಟೆ, ಹುಲಿಕಲ್ ಮುಂತಾದ ಗ್ರಾಮೀಣ ಪ್ರದೇಶಗಳಿಂದ 40-50 ಕಿ.ಮೀ ಪ್ರಯಾಣಿಸಿ ತಾಲೂಕು ಕೇಂದ್ರಕ್ಕೆ ಬರುವ ಸಾರ್ವಜನಿಕರು ಆಧಾರ್ ಸೆಂಟರ್ ಮುಚ್ಚಿರುವುದನ್ನು ಕಂಡು ನಿರಾಶರಾಗಿ ಹಿಂತಿರುಗುತ್ತಿದ್ದಾರೆ.
ಅಂಚೆ ಕಚೇರಿ ಮೇಲಿನ ಒತ್ತಡ:
ಪ್ರಸ್ತುತ ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ತಿದ್ದುಪಡಿ ಮತ್ತು ಹೊಸ ನೋಂದಣಿಗೆ ಅವಕಾಶವಿದ್ದು, ದಿನಕ್ಕೆ ಕೇವಲ 25-30 ಜನರಿಗೆ ಮಾತ್ರ ಸೇವೆ ಸಿಗುತ್ತಿದೆ. ಇದರಿಂದ ಸಾರ್ವಜನಿಕರು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.
ಸರ್ಕಾರದ ಧೋರಣೆಗೆ ಆಕ್ರೋಶ:
ಪ್ರತಿಯೊಂದಕ್ಕೂ ಆಧಾರ್ ಕೆವೈಸಿ ಕಡ್ಡಾಯಗೊಳಿಸುವ ಸರ್ಕಾರಿ ಇಲಾಖೆಗಳು, ಜನರಿಗೆ ಅಗತ್ಯ ಆಧಾರ್ ಸೇವೆ ಒದಗಿಸಲು ಸೂಕ್ತ ವ್ಯವಸ್ಥೆ ಮಾಡದಿರುವುದು ದುರದೃಷ್ಟಕರ ಎಂದು ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಎನ್.ಆರ್. ದೇವಾನಂದ್, ರಾಜುಗೌಡ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

