ರಿಪ್ಪನ್‌ಪೇಟೆ : ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ 17 ವರ್ಷದೊಳಗಿನ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಆಕಸ್ಮಿಕ ಘಟನೆಯೊಂದು ಸಂಭವಿಸಿದ್ದು, ವಿದ್ಯಾರ್ಥಿಯೊಬ್ಬ ಎಸೆದ ಡಿಸ್ಕಸ್ ತಲೆಗೆ ಬಡಿದು ದೈಹಿಕ ಶಿಕ್ಷಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುವನ್ನು ಮೇರಿ ಮಾತಾ ಪ್ರೌಢಶಾಲೆಯ ದೈಹಿಕ ಶಿಕ್ಷಕ ಕಮಲಾಕರ್ ಎಂದು ಗುರುತಿಸಲಾಗಿದೆ. ಕ್ರೀಡಾಕೂಟದಲ್ಲಿ ಡಿಸ್ಕಸ್ ಥ್ರೋ ಸ್ಪರ್ಧೆ ನಡೆಯುತ್ತಿದ್ದಾಗ ವಿದ್ಯಾರ್ಥಿಯೊಬ್ಬ ಡಿಸ್ಕಸ್ ಎಸೆದಿದ್ದಾನೆ. ಅದು ಆಕಸ್ಮಿಕವಾಗಿ ಮೈದಾನದಲ್ಲಿದ್ದ ಶಿಕ್ಷಕ ಕಮಲಾಕರ್ ಅವರ ತಲೆಗೆ ಬಿದ್ದಿದೆ. ಇದರಿಂದಾಗಿ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವ ಉಂಟಾಗಿದೆ.
ಘಟನೆ ನಡೆದ ಕೂಡಲೇ ಅವರನ್ನು ರಿಪ್ಪನ್‌ಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

