ರಿಪ್ಪನ್‌ಪೇಟೆ ; ಶ್ರೀ ಮಹಾವೀರ ಶಕವರ್ಷ 2552 ವಿಶ್ವಾವಸು ಸಂವತ್ಸರ ಹೊಸ ಭತ್ತದ ಪೈರು ಕಟಾವು ಇಂದು ಅತಿಶಯ ಶೀಕ್ಷೇತ್ರದ ಪುಣ್ಯ ಕೃಷಿ ಭೂಮಿಯಲ್ಲಿ ಶಾಸ್ತ್ರೋಕ್ತವಾಗಿ ಪೂರ್ವ ಪರಂಪರೆಯಂತೆ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ನೇತೃತ್ವ, ಸಾನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಶ್ರೀಪಾರ್ಶ್ವನಾಥ ಸ್ವಾಮಿ, ಲೋಕವಂದನೀಯ ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಗೆ ಪಲ್ಲಕ್ಕಿಯಲ್ಲಿ ತರಲಾಯಿತು.

ಶ್ರೀ ಸನ್ನಿಧಿಯಲ್ಲಿ ಪೂಜಾ ವಿಧಾನದ ಮೂಲಕ ಹೊಸ ಭತ್ತದ ತೆನೆಯುಳ್ಳ ಪೈರನ್ನು ಶ್ರೀ ಪದ್ಮಾವತಿ ದೇವಿ ಸನ್ನಿಧಿಗೆ ಶ್ರೀಗಳವರು ಭಕ್ತಿಯಿಂದ ಸಮರ್ಪಿಸಿದರು. “ಪೃಥ್ವಿಯ ಪುಣ್ಯಭೂಮಿಯಲ್ಲಿ ಬೆಳೆದ ಭತ್ತವು ಆಹಾರ ದ್ರವ್ಯವಾಗಿ ಬಳಸುವುದರಿಂದ ಅನ್ನಪ್ರಸಾದ ರೂಪವಾಗಿ ಶರೀರ ಪೋಷಣೆ ಆಗುತ್ತದೆ. ಭಕ್ತರಿಗೆ ನಿತ್ಯನಿರಂತರ ಅಭೀಷ್ಠ ಅನ್ನಪ್ರಸಾದ ಲಭಿಸುತ್ತಿದೆ” ಎಂದು ಶ್ರೀಗಳವರು ಪ್ರವಚನದಲ್ಲಿ ತಿಳಿಸಿದರು.

“ಕೃಷಿ ಚಟುವಟಿಕೆಯಲ್ಲಿ ಭಾಗಿಯಾದವರಿಗೆ ಮಹಾಮಾತೆ ಇಷ್ಟಾರ್ಥ ಸತ್ಫಲ ನೀಡಲಿ” ಎಂದು ಹರಸುತ್ತಾ ಊರ ಪರವೂರ ಭಕ್ತರಿಗೆ ಹೊಸತೆನೆ-ಶ್ರೀಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಶ್ರೀಕ್ಷೇತ್ರದ ಸ್ವಾಮ್ಯದ ಹೊಲದಲ್ಲಿ ಬೆಳೆದ ಸಮೃದ್ಧ ಭತ್ತದ ಬೆಳೆ ಭೂ ತಾಯಿಯ ವರಪ್ರಸಾದ ಎಂದು ಉಲ್ಲೇಖಿಸಿ ಭೂಮಿಯನ್ನು ಸದ್ವಿನಿಯೋಗಗೊಳಿಸಿ, ಆರ್ಥಿಕವಾಗಿ ಸಬಲರಾಗಬೇಕು ಎಂಬ ಸಂದೇಶವಿತ್ತರು. ಪುರೋಹಿತ ಪದ್ಮರಾಜ ಇಂದ್ರ, ಸಹಪುರೋಹಿತರು ಪೂಜಾ ವಿಧಿ ನೆರವೇರಿಸಿದರು.


ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





