ಸಾಗರ : ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಬಳಸಿ ಎರಡು ಚುಕ್ಕೆ ಜಿಂಕೆಗಳನ್ನು ಹತ್ಯೆಗೈದು, ಮಾಂಸ ಮಾಡಿ ತಿಂದಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಒಟ್ಟು ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಸೆ. 02ರಂದು ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಅರಣ್ಯ ಅಧಿಕಾರಿಗಳು ನಾಗವಳ್ಳಿ ಗ್ರಾಮದ ಸರ್ವೆ ನಂಬರ್ 72ರಲ್ಲಿರುವ ಶಾಜಿ ಬಿನ್ ವರ್ಜೀಸ್ ಎಂಬುವವರಿಗೆ ಸೇರಿದ ಜಮೀನಿನ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಕ್ರಮವಾಗಿ ವಿದ್ಯುತ್ ಹರಿಸಿ ಎರಡು ಗಂಡು ಜಿಂಕೆಗಳನ್ನು ಕೊಂದು, ಮಾಂಸ ಮಾಡಿರುವುದು ಪತ್ತೆಯಾಗಿದೆ. ಆರೋಪಿಗಳು ಸ್ವಲ್ಪ ಮಾಂಸವನ್ನು ಬೇಯಿಸಿ ಸೇವಿಸಲು ಸಿದ್ಧಪಡಿಸಿಕೊಂಡಿದ್ದರು ಹಾಗೂ ಉಳಿದ ಕಳೇಬರವನ್ನು ಮಣ್ಣಿನಲ್ಲಿ ಹೂತು ಹಾಕಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಹತ್ಯೆಯಾಗಿರುವ ಈ ಚುಕ್ಕೆ ಜಿಂಕೆಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್-2ರಡಿ ಬರುವ ಪ್ರಾಣಿಗಳಾಗಿವೆ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.
ಆರೋಪಿಗಳ ಮಾಹಿತಿ:
ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕ ಶಾಜಿ ಬಿನ್ ವರ್ಜೀಸ್, ಬಾನು ಬಿನ್ ಗಣೀ, ರಾಮ ಬಿನ್ ಮಂಜಿ ಮರಾಟಿ, ಶ್ರೀಧರ ಬಿನ್ ದುರ್ಗಪ್ಪ ನಾಯಕ್, ಶಿವು ಬಿನ್ ಗಣೀ ಹಾಗೂ ಮಹೇಶ್ ಬಿನ್ ಮಂಗಳ ಎಂಬುವವರ ವಿರುದ್ಧ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇವರಲ್ಲಿ ಬಾನು, ಶಿವು ಹಾಗೂ ಮಹೇಶ್ ಎಂಬ ಮೂವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕಾರ್ಯಾಚರಣೆ ತಂಡ:
ಈ ಕಾರ್ಯಾಚರಣೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕೃಷ್ಣ ಪಟಗಾರ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗುರುರಾಜ್ ಸಿ.ಬಿ. ಅವರ ಮಾರ್ಗದರ್ಶನದಲ್ಲಿ, ಶರಾವತಿ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಧನಂಜಯ ನಾಯಕ್ ನೇತೃತ್ವದಲ್ಲಿ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಗುರುರಾಜ್ ತೋಳಬಂದಿ, ಕಿರಣ್ ಎ. ಬಿದರಳ್ಳಿ, ಸಂಧ್ಯಾ ಎಸ್., ಗಸ್ತು ಅರಣ್ಯ ಪಾಲಕರಾದ ದೀಪಕ್ ಎಸ್., ಪ್ರಭು ಸೇರಿದಂತೆ ಇತರ ಅರಣ್ಯ ಸಿಬ್ಬಂದಿ ಪಾಲ್ಗೊಂಡಿದ್ದರು.

