ರಿಪ್ಪನ್ಪೇಟೆ ; ಹನಿ ಹನಿ ಕೂಡಿದರೆ ಹಳ್ಳ ಎಂಬ ನಾಣ್ನುಡಿಯಂತೆ ಗ್ರಾಹಕರು ನಿತ್ಯ ಸಣ್ಣ-ಪುಟ್ಟ ವ್ಯಾಪಾರದಿಂದ ಬಂದ ಅಲ್ಪಸ್ವಲ್ಪ ಲಾಭದ ಹಣವನ್ನು ಕೂಡಿಸಿ ನಂಬಿಕೆ ವಿಶ್ವಾಸದ ಮೇಲೆ ರಾಷ್ಟ್ರೀಕೃತ ಕೆನರಾ ಬ್ಯಾಂಕ್, ಎಸ್.ಬಿ.ಐ. ಹಾಗೂ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ಗಳಲ್ಲಿನ ಅಧಿಕೃತ ಠೇವಣಿ ಸಂಗ್ರಹಕಾರರಿಗೆ ಪಿಗ್ಮಿ ಹಣ ಸಂದಾಯ ಮಾಡಲಾದರು ಕೂಡಾ ಬ್ಯಾಂಕ್ನ ಶಾಖೆಯ ಅಧಿಕಾರಿಗಳು ಮಾತ್ರ ಠೇವಣಿ ಗ್ರಾಹಕರನ್ನು ಕಂಡು ಮೂಗು ಮುರಿಯುವಂತಾಗಿದ್ದಾರೆ.
ಸಂತೆ, ಅಂಗಡಿ-ಮುಂಗಟ್ಟುಗಳಲ್ಲಿ ವ್ಯಾಪಾರ ಮಾಡುವ ಗ್ರಾಹಕರು ವ್ಯಾಪಾರದಿಂದ ಬಂದಂತಹ ಲಾಭಾಂಶದ ಅಲ್ಪಸ್ವಲ್ಪ ಹಣವನ್ನು ಚಳಿಗಾಲ, ಬೇಸಿಗೆ ಕಾಲ, ಮಳೆಗಾಲ ಎನ್ನದೆ ಸಂಜೆಯಾಗುತ್ತಲೆ ಅಂಗಡಿಯ ಬಳಿ ಬರುವ ಬ್ಯಾಂಕ್ನ ನಿತ್ಯ ನಿಧಿ ಠೇವಣಿ ಸಂಗ್ರಹಕಾರ ಮೇಲೆ ನಂಬಿಕೆ ವಿಶ್ವಾಸದ ಮೇಲೆ ಪಿಗ್ಮಿ ಹಣವನ್ನು ಸಂದಾಯ ಮಾಡುವ ಮೂಲಕ ಬ್ಯಾಂಕ್ ನಿಯಮದಂತೆ ಎರಡ್ಮೂರು ವರ್ಷ ತಾವು ವ್ಯಾಪಾರದಿಂದ ಉಳಿಸಿದ ಹಣವನ್ನು ಏಕ ಗಂಟಾಗಿ ಗ್ರಾಹಕರು ಪಡೆದುಕೊಳ್ಳುವಂತಹ ಯೋಜನೆಗೆ ಇಂದಿನ ಬ್ಯಾಂಕ್ ಅಧಿಕಾರಿಗಳು ತಿಲಾಂಜಲಿ ಇಡಲು ಮುಂದಾದಂತಾಗಿದ್ದು ಇದರಿಂದಾಗಿ ಗ್ರಾಹಕರಲ್ಲಿ ತೀವ್ರ ಆಕ್ರೋಶಕ್ಕೆ ಎಡೆಮಾಡಿದಂತಾಗಿದೆ.
ಗ್ರಾಹಕರ ಮತ್ತು ಠೇವಣಿ ಸಂಗ್ರಹಕಾರದ ಮಧ್ಯ ಸೇತುವೆಯಂತಾಗಿದ್ದು ಬ್ಯಾಂಕ್ ಅಧಿಕಾರಿಗಳ ಮುಖವನ್ನು ನೋಡದೇ ನಂಬಿಕೆ ವಿಶ್ವಾಸದ ಮೇಲೆ ವ್ಯವಹಾರ ನಡೆಸುತ್ತಿರುವ ಠೇವಣಿದಾರನ್ನು ಬ್ಯಾಂಕ್ನ ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿವರ್ಗ ಕಡೆಗಣಿಸಿರುವುದು ಮತ್ತು ನಿತ್ಯ ನಿಧಿ ಠೇವಣಿ ಗ್ರಾಹಕರನ್ನು ನಿರ್ಲಕ್ಷ್ಯದಿಂದ ಕಾಣುತ್ತಿರುವುದು ನೋವಿನ ಸಂಗತಿಯಾಗಿದೆ.
ಒಂದು ಕಡೆಯಲ್ಲಿ ನಿತ್ಯನಿಧಿ ಹಣವನ್ನು ಪಡೆಯಲು ಬ್ಯಾಂಕ್ ಕಛೇರಿಗೆ ಹೋದರೆ ಸರ್ವರ್ ಇಲ್ಲ, ನೆಟ್ವರ್ಕ್ ಸಮಸ್ಯೆ ಹೀಗೆ ಇಲ್ಲ ಸಲ್ಲದ ಸಬೂಬು ಹೇಳಿಕೊಂಡು ಕಾಲಹರಣ ಮಾಡುವ ಬ್ಯಾಂಕ್ ಅಧಿಕಾರಿಗಳಿಗೆ ಗ್ರಾಹಕರ ಕಷ್ಟ ಏನು ಎಂಬ ಅರಿವು ಇಲ್ಲದಂತಾಗಿದ್ದಾರೆ. ಅಲ್ಲದೆ ಪಿಗ್ಮಿ ಠೇವಣಿ ಕಟ್ಟಲಾದ ಹಣವನ್ನು ಪಡೆಯಲು ಬ್ಯಾಂಕ್ಗೆ ಹೋದರೆ ಬ್ಯಾಂಕ್ ಸಿಬ್ಬಂದಿಗಳು ನಮಗೆ ಅದರ ಮಾಹಿತಿ ಇಲ್ಲ ಎಂದು ದಿನಗಟ್ಟಲೆ ಗ್ರಾಹಕರನ್ನು ಅಲೆಸುತ್ತಾರೆಂದು ಗ್ರಾಹಕರು ತಮ್ಮ ಮನದಾಳದ ನೋವನ್ನು ಮಾಧ್ಯಮದವರ ಬಳಿ ತೊಡಿಕೊಂಡರು.
ಒಂದು ಕಾಲದಲ್ಲಿ ಪಿಗ್ಮಿ ಸಂಗ್ರಹಣೆಯಿಂದ ಬ್ಯಾಂಕ್ಗೆ ಹತ್ತಿರವಾಗುತ್ತಿದ್ದ ಗ್ರಾಹಕರು ಈಗ ಬ್ಯಾಂಕ್ ವ್ಯವಹಾರದಿಂದ ದೂರ ಉಳಿಯುವಂತಾಗುವ ಕಾಲ ದೂರವಿಲ್ಲ ಎನ್ನುವಂತಾಗಿದೆ.
ಇತ್ತೀಚೆಗೆ ರಾಷ್ಟ್ರೀಕೃತ ಬ್ಯಾಂಕ್ ನಿತ್ಯನಿಧಿ ಠೇವಣಿ ಸಂಗ್ರಹಕಾರ 100 ರೂಪಾಯಿಗೆ ಮೂರ್ನಾಲ್ಕು ರೂಪಾಯಿ ಕಮಿಷನ್ಗಾಗಿ ಊರು ಊರು ಸುತ್ತಾಡಿಕೊಂಡು ಗ್ರಾಹಕರಿಂದ ನಿತ್ಯ ಸುಮಾರು 30 ರಿಂದ 50 ಸಾವಿರ ರೂ. ಹಣವನ್ನು ಸಂಗ್ರಹಿಸಿಕೊಂಡು ಬಂದು ಬ್ಯಾಂಕ್ಗೆ ಜಮಾ ಮಾಡಲು ಬಂದರೆ ಶಾಖೆಯ ವ್ಯವಸ್ಥಾಪಕರು ಮತ್ತು ಇತರ ಬ್ಯಾಂಕ್ ಅಧಿಕಾರಿಗಳು ಸಿಬ್ಬಂದಿವರ್ಗದವರಿಗೆ ಸರಿಯಾದ ತಿಳುವಳಿಕೆ ಇಲ್ಲದೆ ಅವರಿಗೆ ಗಣಕಯಂತ್ರಕ್ಕೆ ಪಿಗ್ಮಿ ಖಾತೆದಾರರ ಖಾತೆಗೆ ಅಪ್ಲೋಡ್ ಮಾಡಿ ಲೆಕ್ಕ ಪಕ್ಕಾ ಮಾಡಿ ಹೋಗಿ ಎನ್ನುತ್ತಾರೆ. ಹಾಗಾದರೆ ಬ್ಯಾಂಕ್ ಅಧಿಕಾರಿಗಳ ಜವಾಬ್ದಾರಿ ಏನು? ಎಂಬ ಪ್ರಶ್ನೆ ಕಾಡುವಂತಾಗಿದೆ.
ಇನ್ನಾದರೂ ಬ್ಯಾಂಕ್ ಆಧಿಕಾರಿಗಳು ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದರೆ ಗ್ರಾಹಕರಲ್ಲಿ ಬ್ಯಾಂಕ್ ವಿರುದ್ಧ ಪ್ರತಿಭಟನೆ ನಡೆಸುವ ಕಾಲ ದೂರವಿಲ್ಲ ಎನ್ನುತ್ತಾರೆ.
ಇದೇ ರೀತಿ ಇತ್ತೀಚೆಗೆ ಕೋಲಾರ ಜಿಲ್ಲೆಯ ಮೊಳಬಾಗಿಲು ಕೆನರಾಬ್ಯಾಂಕ್ ಶಾಖೆಗೆ ವ್ಯವಸ್ಥಾಪರನ್ನು ವರ್ಗಾವಣೆಯಾಗಿ ಬಂದಂತಹ ಅಧಿಕಾರಿಗೆ ಕನ್ನಡ ಭಾಷೆ ಗೊತ್ತಿಲ್ಲದವರನ್ನು ಬ್ಯಾಂಕ್ ಶಾಖೆ ವರ್ಗಾಯಿಸಿದ್ದು ಗ್ರಾಹಕರು ತಮ್ಮ ಖಾತೆಯ ಹಣ ಪಡೆಯಲು ಹೋದಾಗ ನಿರ್ಲಕ್ಷ್ಯ ವಹಿಸಿ ಪ್ರತಿಭಟನೆ ಎದುರಿಸಿರುವುದು ವರದಿಯಾಗಿದ್ದು ಒಂದು ರೀತಿಯಲ್ಲಿ ಬ್ಯಾಂಕ್ ಗ್ರಾಹಕರಿಗೆ ಬ್ಯಾಂಕ್ ಸೌಲಭ್ಯಗಳ ಸರಿಯಾಗಿ ತಲುಪದಿರುವುದು ಬ್ಯಾಂಕ್ ಅಧಿಕಾರಿಗಳು ಸಿಬ್ಬಂದಿವರ್ಗ ಯಾವ ಕೆಲಸ ಮಾಡುತ್ತಾರೆಂಬ ಬಗ್ಗೆ ಸಹ ಗ್ರಾಹಕರು ಕೇಳಿದರೆ ಕಿವಿ ಕೇಳಿಸದವರಂತೆ ನಟಿಸುತ್ತಾರೆ. ಹಾಗಾದರೆ ಯಾರಿಗಾಗಿ ಇಂತಹ ಬ್ಯಾಂಕ್ ಎಂಬ ಜಿಜ್ಞಾಸೆ ಗ್ರಾಹಕರನ್ನು ಕಾಡುವಂತಾಗಿದೆ.
ಠೇವಣಿದಾರರಿಗೆ ಬ್ಯಾಂಕ್ನಿಂದ ಮಳೆಗಾಲದದ ರೈನ್ ಕೋಟ್, ಛತ್ರಿ ಇನ್ನಾವುದೇ ಮೂಲಭೂತ ಸೌಲಭ್ಯಗಳನ್ನು ಸಹ ನೀಡದೆ ಇರುವುದು ಸಹ ಗ್ರಾಹಕರನ್ನು ಕೆರಳಿಸುವಂತಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





