ಭದ್ರಾವತಿ ; ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿರುವುದಾಗಿ ಆಸ್ಪತ್ರೆಯಲ್ಲಿ ವೈದ್ಯರು ದೃಢಪಡಿಸಿದ ಬಳಿಕ ಮೃತದೇಹವನ್ನು ಮನೆಗೆ ತೆಗೆದುಕೊಂಡು ಬಂದಾಗ ಮಹಿಳೆ ಕಣ್ತೆರೆದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಮಂಗಳವಾರ ನಡೆದಿದೆ.
ಗಾಂಧಿನಗರದ ಸಿವಿಲ್ ಗುತ್ತಿಗೆದಾರ ಸುಬ್ರಹ್ಮಣಿ ಅವರ ಪತ್ನಿ ಮೀನಾಕ್ಷಿ (52) ಸಾವಿನ ಮನೆಯ ಬಾಗಿಲು ತಟ್ಟಿ ವಾಪಸ್ ಬಂದಾಕೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಮಹಿಳೆ ಸ್ಪಂದಿಸುತ್ತಿಲ್ಲ. ಉಸಿರು ನಿಂತಿದ್ದು, ಅವರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಸೋಮವಾರ ತಡರಾತ್ರಿ ಘೋಷಿಸಿದ್ದಾರೆ.
ಮೃತದೇಹವನ್ನು ಮಂಗಳವಾರ ಬೆಳಿಗ್ಗೆ ತೆಗೆದುಕೊಂಡು ಹೋಗಲು ಕುಟುಂಬಸ್ಥರು ನಿರ್ಧರಿಸಿ, ಸಾವಿನ ವಿಷಯವನ್ನು ಬಂಧು-ಬಳಗದವರಿಗೆಲ್ಲ ತಿಳಿಸಿದ್ದರು. ಮನೆಯವರು ಅಂತ್ಯಕ್ರಿಯೆಗೆ ಎಲ್ಲಾ ತಯಾರಿಯನ್ನೂ ಮಾಡಿಕೊಂಡಿದ್ದರು. ಮಂಗಳವಾರ ಬೆಳಿಗ್ಗೆ ಮಹಿಳೆಯ ಪಾರ್ಥಿವ ಶರೀರವನ್ನು ವಾಹನದಲ್ಲಿ ಮನೆಗೆ ತೆಗೆದುಕೊಂಡು ಬರಲಾಗಿದೆ. ಆದರೆ ವಾಹನದಿಂದ ಇಳಿಸುವಾಗ, ಆ ಮಹಿಳೆ ಕಣ್ತೆರೆದು ಎಲ್ಲಿರಿಗೂ ಅಚ್ಚರಿ ಮೂಡಿಸಿದ್ದಾರೆ.
ಜೀವ ಇರುವುದು ಖಾತ್ರಿಯಾದ ಬೆನ್ನಲ್ಲೇ ಮಹಿಳೆಗೆ ನೀರನ್ನು ಕುಡಿಸಿ, ಹತ್ತಿರ ನರ್ಸಿಂಗ್ ಹೋಂಗೆ ಕರೆದೊಯ್ಯಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯ ನಂತರ ಮೀನಾಕ್ಷಿ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.