CHIKKAMAGALURU | ಮಳೆಯಿಂದ ಕುಸಿದಿರುವ ಪ್ರತೀ ಮನೆಗಳಿಗೆ 1.20 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಡೀಮ್ಡ್ ಫಾರೆಸ್ಟ್ ಸೇರಿದಂತೆ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿರುವ ಅನಧೀಕೃತ ಮನೆಗಳಿಗೆ 1 ಲಕ್ಷ ರೂ. ಪರಿಹಾರ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಇಂಧನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ (K.J. George) ಹೇಳಿದರು.
ಜಿಲ್ಲೆಯ ಮೂಡಿಗೆರೆ, ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಕಲಸ ತಾಲೂಕು ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಭಾರೀ ಮಳೆಯೊಂದಿಗೆ ತೀವ್ರ ಸ್ವರೂಪದ ಗಾಳಿ ಬೀಸಿದ ಪರಿಣಾಮ ಜಿಲ್ಲಾದ್ಯಂತ ಸುಮಾರು 300ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಮಲೆನಾಡು ಭಾಗದಲ್ಲಿ ಹೆಚ್ಚು ಮನೆಗಳು ಕುಸಿದಿದ್ದು, ಸಂಪೂರ್ಣವಾಗಿ ಕುಸಿದ ಮನೆಗಳಿಗೆ ಈಗಾಗಲೇ 1.20 ಲಕ್ಷ ರೂ.ನಂತೆ ಪರಿಹಾರ ನೀಡಲಾಗಿದೆ. ಭಾಗಶಃ ಕುಸಿದ ಮನೆಗಳಿಗೆ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗಿದೆ. ಕುಸಿದ ಮನೆಗಳ ನಿರ್ಮಾಣಕ್ಕೆ 1.20 ಲಕ್ಷ ಪರಿಹಾರದೊಂದಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ವಸತಿ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.
ಅರಣ್ಯ ಹಾಗೂ ಡೀಮ್ಸ್ ಅರಣ್ಯದಂತಹ ಪ್ರದೇಶದಲ್ಲಿ ಹಕ್ಕುಪತ್ರ, ದಾಖಲೆಗಳಿಲ್ಲದ ಅನಧೀಕೃತ ಮನೆಗಳಿಗೆ ಮಳೆಯಿಂದ ಹಾನಿಯಾಗಿದ್ದರೆ ಅಂತಹ ಮನೆಗಳಿಗೂ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಸಂಪೂರ್ಣ ಹಾನಿಯಾದ ಪ್ರತೀ ಅನಧೀಕೃತ ಮನೆಗೆ 1ಲಕ್ಷ ರೂ. ಪರಿಹಾರ ನೀಡಲು ಸಚಿವ ಸಂಪುಟ ನಿರ್ಣಯಕೈಗೊಂಡಿದ್ದು, ಈ ಸಂಬಂಧ ಹಣಕಾಸು ಇಲಾಖೆಯ ಮುಖ್ಯ ಕಾರ್ಯದರ್ಶಿ ಶೀಘ್ರ ಆದೇಶ ಹೊರಡಿಸಲಿದ್ದು, ಬಳಿಕ ಪರಿಹಾರ ವಿತರಣೆ ಆಗಲಿದೆ ಎಂದರು.
ಮೆಸ್ಕಾಂ ಇಲಾಖೆಗೆ ಭಾರೀ ನಷ್ಟ :
ಮಳೆ, ಗಾಳಿಯಿಂದಾಗಿ ಈ ಬಾರಿ ಮೆಸ್ಕಾಂ ಇಲಾಖೆಗೆ ಭಾರೀ ನಷ್ಟವಾಗಿದೆ. ಈ ಭಾರೀ ತೀವ್ರ ಗಾಳಿಯಿಂದಾಗಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಮಲೆನಾಡಿನಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನೂರಾರು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿದ್ದು, ವಿದ್ಯುತ್ ಸಂಪರ್ಕ ಮರುಸ್ಥಾಪನೆಗಾಗಿ ಮೆಸ್ಕಾಂ ಇಲಾಖೆ ಅಧಿಕಾರಿ, ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.
ಮಲೆನಾಡು ಗುಡ್ಡಗಾಡು ಪ್ರದೇಶ ಆಗಿರುವುದರಿಂದ ವಿದ್ಯುತ್ ಕಂಬಗಳ ಬದಲಾವಣೆ ಕೆಲಸಕ್ಕೆ ಕಾಲಾವಕಾಶಬೇಕು. ಸದ್ಯ ಈ ಕೆಲಸಕ್ಕೆ ಮಲೆನಾಡು ಭಾಗದಲ್ಲಿ ಸಿಬ್ಬಂದಿ ಕೊರತೆ ಇತ್ತು. ಕೇವಲ 500 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಇದನ್ನು ಮನಗಂಡು ಶೀಘ್ರ ವಿದ್ಯುತ್ ಸಂಪರ್ಕ ಮರುಸ್ಥಾಪನೆ ಮಾಡಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸದ್ಯ 900ಕ್ಕೂ ಹೆಚ್ಚು ಮೆಸ್ಕಾಂ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಳೆ, ಗಾಳಿಯಿಂದಾಗಿ ಸಾರ್ವಜನಿಕ ಆಸ್ತಿಗಳಲ್ಲದೇ ಮನೆಗಳು, ಕೃಷಿ, ತೋಟಗಾರಿಕೆ ಬೆಳೆಗಳಿಗೂ ಹಾನಿಯಾಗಿದೆ. ಈ ಹಾನಿ ಸಂಬಂಧ ಸಮೀಕ್ಷೆ ಕೆಲಸ ನಡೆಯುತ್ತಿದ್ದು, ಹಾನಿಯ ವರದಿಯನ್ನು ಶೀಘ್ರ ತಯಾರಿಸಿ ಸರಕಾರಕ್ಕೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಹೆಚ್ಚುವರಿ ಅನುದಾನ ಬಿಡುಗಡೆಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮವಹಿಸಲಾಗುವುದು ಎಂದರು.
ಆಲ್ದೂರು ಹೋಬಳಿ ವ್ಯಾಪ್ತಿಯ ಅರೇನೂರು ಗ್ರಾಮದಲ್ಲಿ ಭೂ ಕುಸಿತ ಸಂಭವಿಸುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಸಂತ್ರಸ್ಥರಿಗೆ ಬೇರೆಡೆ ನಿವೇಶನ, ಮನೆ ಒದಗಿಸಲು ಕ್ರಮವಹಿಸಲಾಗುವುದು ಎಂದು ಇದೇ ವೇಳೆ ಸಚಿವ ಜಾರ್ಜ್ ಭರವಸೆ ನೀಡಿದರು.
ಈ ವೇಳೆ ವಿಪ ಉಪಸಭಾಪತಿ ಪ್ರಾಣೇಶ್, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ, ಡಾ.ವಿಕ್ರಮ್ ಅಮಟೆ, ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Read More
ಮದುವೆಗೆ ಜಾತಿ ಅಡ್ಡಿ, ರಕ್ಷಣೆಗಾಗಿ ಅಂಗಲಾಚುತ್ತಿರುವ ಪ್ರೇಮಿಗಳು
Rain Report | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ & ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟಾಗಿದೆ ಮಳೆ ?