ಶಿವಮೊಗ್ಗ

ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಯಲ್ಲಿ ₹ 800 ಕೋಟಿ ಹಗರಣ: ತನಿಖೆಗೆ ಶಾಸಕ ಆರಗ ಜ್ಞಾನೇಂದ್ರ ಆಗ್ರಹ

ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಯಲ್ಲಿ 800 ಕೋಟಿ ರೂ. ಹಗರಣ Araga Jnanendra

ಶಿವಮೊಗ್ಗ: ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಯ ನೆಪದಲ್ಲಿ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 800 ಕೋಟಿ ರೂ. ಗಳ ಬೃಹತ್ ಹಗರಣ ನಡೆದಿದೆ. ಈ ಬಗ್ಗೆ ಇ.ಡಿ. ಅಥವಾ ಸಿಬಿಐ ತನಿಖೆಯಾಗಬೇಕು ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೈತಿಕ ಹೊಣೆಹೊತ್ತು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಒತ್ತಾಯಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಸುದ್ದಿಗೋಷ್ಠಿಯಲ್ಲಿ ಈ ವಿಷಯ ಬಹಿರಂಗಪಡಿಸಿದ ಅವರು, ಇಲಾಖೆಯ ಬಳಿ ಸೆಸ್ ಮೂಲಕ ಸಂಗ್ರಹವಾದ ಸುಮಾರು 7 ಸಾವಿರ ಕೋಟಿ ರೂ. ನಿಧಿಯಿದೆ. ಇದನ್ನು ಗುರಿಯಾಗಿಸಿಕೊಂಡು ‘ಪ್ರಿವೆಂಟಿವ್ ಹೆಲ್ತ್ ಕೇರ್ ಚೆಕ್ ಅಪ್’ ಹೆಸರಿನಲ್ಲಿ ಕಾರ್ಮಿಕರ ಹಣ ಲೂಟಿ ಮಾಡಲಾಗುತ್ತಿದೆ. 81 ವರ್ಕ್ ಆರ್ಡರ್‌ಗಳ ಮೂಲಕ ರಾಜ್ಯದ 27.13 ಲಕ್ಷ ಕಾರ್ಮಿಕರಿಗೆ ತಲಾ 2,950 ರೂ. ನಂತೆ ಒಟ್ಟು 800 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಸುಳ್ಳು ಲೆಕ್ಕ ತೋರಿಸಿ ಜನರಿಗೆ ಮಂಕುಬೂದಿ ಎರಚಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಯಮಗಳ ಪ್ರಕಾರ 10 ಕೋಟಿ ರೂ. ಮೇಲ್ಪಟ್ಟ ಟೆಂಡರ್‌ಗಳಿಗೆ ಸಚಿವ ಸಂಪುಟದ ಅನುಮೋದನೆ ಕಡ್ಡಾಯ. ಆದರೆ, ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಿ, ಕಾರ್ಮಿಕ ಕಾಯ್ದೆ ಸೆಕ್ಷನ್ 4(ಎ) ಅಡಿ ವಿನಾಯಿತಿ ಪಡೆದು ತಮಗೆ ಬೇಕಾದ ಏಜೆನ್ಸಿಗಳಿಗೆ ಟೆಂಡರ್ ಹಂಚಿಕೆ ಮಾಡಲಾಗಿದೆ. ಕಡ್ಡಾಯವಾಗಿ ಇರಬೇಕಾದ ವೈದ್ಯರು, ಲ್ಯಾಬ್ ಸೌಲಭ್ಯ, ಜೈವಿಕ ತ್ಯಾಜ್ಯ ವಿಲೇವಾರಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಹಾಗೂ ಮೂರನೇ ವ್ಯಕ್ತಿಯಿಂದ ಪರಿಶೀಲನೆ ಸೇರಿದಂತೆ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿದರು.

ಹಣದ ವರ್ಗಾವಣೆಯೂ ಅನುಮಾನಾಸ್ಪದವಾಗಿದ್ದು, ಕೆಲವು ಮೊತ್ತ ನಗದಾಗಿ ಹಾಗೂ ಬಿಲ್‌ನ ಚೆಕ್‌ಗಳು ದೆಹಲಿ ಮತ್ತು ಕೇರಳದ ಬ್ಯಾಂಕ್‌ಗಳಿಗೆ ರವಾನೆಯಾಗಿವೆ. ಇದು ಮೇಲ್ನೋಟಕ್ಕೆ ವಾಲ್ಮೀಕಿ ನಿಗಮದ ಹಗರಣದಂತೆಯೇ ಕಾಣುತ್ತಿದೆ. ಕೇವಲ ಶಿವಮೊಗ್ಗ ಜಿಲ್ಲೆ ಹಾಗೂ ತೀರ್ಥಹಳ್ಳಿಯಲ್ಲಿ 1 ಲಕ್ಷ ಜನರಿಗೆ ತಪಾಸಣೆ ನಡೆಸಲಾಗಿದೆ ಎಂದು 30 ಕೋಟಿ ರೂ. ಬಿಲ್ ಮಾಡಲಾಗಿದೆ. ಆದರೆ ವಾಸ್ತವದಲ್ಲಿ ಅಲ್ಲಿ ಯಾವುದೇ ತಪಾಸಣೆ ನಡೆಯದೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹರತಾಳು ಹಾಲಪ್ಪ, ಆರ್.ಕೆ. ಸಿದ್ರಾಮಣ್ಣ ಹಾಗೂ ಹೆದ್ದೂರು ನವೀನ್ ಹಾಜರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!