ಹೊಸನಗರ: ತಾಲ್ಲೂಕಿನ ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಕೊಪ್ಪ ಗ್ರಾಮದಿಂದ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಹೊಸನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಸ್ವಯಂಪ್ರೇರಿತ (ಸುಮೋಟೋ) ಪ್ರಕರಣ ದಾಖಲಿಸಲಾಗಿದ್ದು, 11 ಹಸುಗಳು ಹಾಗೂ 6 ಕರುಗಳನ್ನು ರಕ್ಷಿಸಿ ರಾಮಚಂದ್ರಪುರ ಮಠಕ್ಕೆ ಹಸ್ತಾಂತರಿಸಲಾಗಿದೆ.
ಕಾರ್ಯಾಚರಣೆಯ ವಿವರ:
ಹೊಸನಗರ ತಾಲ್ಲೂಕಿನಲ್ಲಿ, ಅದರಲ್ಲೂ ವಿಶೇಷವಾಗಿ ಗಂಗನಕೊಪ್ಪ ಭಾಗದಿಂದ ರಾತ್ರಿ ವೇಳೆ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ದಟ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಗೋ ರಕ್ಷಕ ಪಡೆಯ ಸದಸ್ಯರು ಪಟ್ಟಣದಾದ್ಯಂತ ಹಗಲು-ರಾತ್ರಿ ನಿಗಾ ವಹಿಸಿದ್ದರು. ಶುಕ್ರವಾರ ರಾತ್ರಿ ಗಂಗನಕೊಪ್ಪದ ರಾಧಾಕೃಷ್ಣ ಉಡುಪ ಅವರ ಮನೆಯಿಂದ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸ್ ಇಲಾಖೆಗೆ ಲಭ್ಯವಾಯಿತು.
ತಕ್ಷಣ ಕಾರ್ಯಪ್ರವೃತ್ತರಾದ ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪ ಗೌಡರ್ ಅವರ ಮಾರ್ಗದರ್ಶನದಲ್ಲಿ, ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಬಾಗೋಜಿ ಹಾಗೂ ಸಿಬ್ಬಂದಿ ಮಾಯಪ್ಪ ಗೋಕಾವಿ ಮತ್ತು ಸಂದೀಪ್ ದಾಳಿ ನಡೆಸಿದರು. ತೋಟಗಾರಿಕಾ ಇಲಾಖೆಯ ಪಕ್ಕದ ರಸ್ತೆಯಲ್ಲಿ ಟಾರ್ಪಲ್ ಮುಚ್ಚಿಕೊಂಡು ಸಾಗುತ್ತಿದ್ದ ಲಾರಿಯನ್ನು (ನಂ. ಕೆಎ 02 ಎಜಿ 2847) ತಡೆದು ಪರಿಶೀಲಿಸಿದಾಗ, ನೀರು, ಮೇವು ಹಾಗೂ ಗಾಳಿಯ ವ್ಯವಸ್ಥೆಯಿಲ್ಲದೆ ಹಿಂಸಾತ್ಮಕವಾಗಿ ಹಗ್ಗದಿಂದ ಕಟ್ಟಿಹಾಕಲಾಗಿದ್ದ 11 ಹಸುಗಳು ಮತ್ತು 6 ಚಿಕ್ಕ ಕರುಗಳು ಪತ್ತೆಯಾಗಿವೆ.
ಪೊಲೀಸರು ಲಾರಿ ಚಾಲಕ ಸುರೇಶ್ ಹಾಗೂ ಆತನ ಜೊತೆಗಿದ್ದ ಗೋವಿಂದರಾಜು ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ, ಜಾನುವಾರುಗಳನ್ನು ನೀಡಿದ ರಾಧಾಕೃಷ್ಣ ಉಡುಪ ಅವರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.
ಅಕ್ರಮ ಜಾಲದ ಶಂಕೆ; ಕಠಿಣ ಕ್ರಮಕ್ಕೆ ಆಗ್ರಹ:
ತಾಲ್ಲೂಕಿನಲ್ಲಿ ವ್ಯವಸ್ಥಿತವಾಗಿ ಅಕ್ರಮ ಗೋವು ಸಾಗಾಣಿಕೆ ಜಾಲ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಹೆಚ್ಚಾಗಿ ಹಿಂದೂಗಳೇ ಭಾಗಿಯಾಗಿದ್ದಾರೆ ಎಂಬ ಅನುಮಾನ ಸ್ಥಳೀಯವಾಗಿ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ತನಿಖೆ ನಡೆಸಬೇಕು. ಗೋಶಾಲೆಗಳ ಹೆಸರಿನಲ್ಲಿ ನಿಜವಾಗಿಯೂ ಗೋವುಗಳನ್ನು ಪೋಷಿಸುವವರು ಯಾರು ಮತ್ತು ಅದರ ಮರೆಯಲ್ಲಿ ಅಕ್ರಮ ಸಾಗಾಟ ನಡೆಸುವವರು ಯಾರು ಎಂಬುದನ್ನು ಪತ್ತೆಹಚ್ಚಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
