ರಿಪ್ಪನ್‌ಪೇಟೆ: ಸುಮಾರು 21 ಕೆ.ಜಿ. ಜಿಂಕೆ ಮಾಂಸವನ್ನು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಶುಕ್ರವಾರ ಶಬರೀಶ ನಗರದಲ್ಲಿ ನಡೆದಿದ್ದು ಕಾರ್ಯಾಚರಣೆ ವೇಳೆ ಆರೋಪಿಗಳು ಸ್ಥಳದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ್ ನೇತೃತ್ವದ ತಂಡ ಶಬರೀಶ ನಗರದಲ್ಲಿ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಮಾರುತಿ ಎರ್ಟಿಗಾ ಕಾರಿನಲ್ಲಿ ಸಂಗ್ರಹಿಸಿಟ್ಟಿದ್ದ ಜಿಂಕೆ ಮಾಂಸ ಪತ್ತೆಯಾಗಿದೆ.

ಮಾಂಸವನ್ನು ವಶಪಡಿಸಿಕೊಂಡ ಅಧಿಕಾರಿಗಳು, ಅದನ್ನು ಸಾಗಿಸಲು ಬಳಸಲಾಗಿದೆ ಎನ್ನಲಾದ ಮಾರುತಿ ಎರ್ಟಿಗಾ ಕಾರನ್ನೂ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬರುವೆ ನಿವಾಸಿ ಗುರುರಾಜ್ ಹಾಗೂ ಹೊಸನಗರ ತಾಲೂಕು ಮಾನವ ಹಕ್ಕು ಆಯೋಗದ ಅಧ್ಯಕ್ಷ ಕರಡಿಗ ನಿವಾಸಿ ಗಣೇಶ್ ಕೆ.ಜಿ. ಸೇರಿದಂತೆ ಕೆಲವರು ದಾಳಿ ವೇಳೆ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಘಟನೆ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಕಾಯ್ದೆ 1972ರಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ದಾಳಿ ವೇಳೆ ಗಣೇಶ್ ಬಿ.ಸಿ., ಆಂಜನೇಯ ಪಾಟೀಲ್, ಚಂದ್ರಕಾಂತ್, ಸುರೇಶ್, ಪ್ರಮೋದಿನಿ ಹಾಗೂ ಹೆಚ್.ಬಿ. ದೊಡ್ಡಮನಿ ಪಾಲ್ಗೊಂಡಿದ್ದರು.

