ಹೊಸನಗರ: ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಶರನ್ನವರಾತ್ರಿಯ ನಾಲ್ಕನೇ ದಿನದ ಧಾರ್ಮಿಕ ವಿಧಿವಿಧಾನಗಳು ಅತ್ಯಂತ ಭಕ್ತಿಭಾವದಿಂದ ಜರುಗಿದವು.
ಈ ಸಂದರ್ಭದಲ್ಲಿ ವಿಶೇಷ ಶೋಡಶೋಪಚಾರ ಪೂಜೆಯ ಬಳಿಕ ಆಶೀರ್ವಚನ ನೀಡಿದ ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು, “ಧಾರ್ಮಿಕ ಆಚರಣೆಗಳು ಮನುಷ್ಯನ ಬದುಕನ್ನು ವಿಕಸನಗೊಳಿಸುತ್ತವೆ” ಎಂದು ಅಭಿಪ್ರಾಯಪಟ್ಟರು.
ನವರಾತ್ರಿ ಹಾಗೂ ವಿಜಯದಶಮಿ ಹಬ್ಬಗಳು ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ ಪಡೆದಿವೆ. ಪವಿತ್ರ ಗ್ರಂಥಗಳ ಓದು ಮತ್ತು ಸ್ತೋತ್ರಗಳ ಪಠಣದಿಂದ ಮನಸ್ಸಿನ ಗೊಂದಲ ಹಾಗೂ ಕಷ್ಟಗಳು ನಿವಾರಣೆಯಾಗುತ್ತವೆ. ಸಮಾಜದಲ್ಲಿ ಪರಸ್ಪರ ಪ್ರೀತಿ, ಸಹಕಾರ ಮತ್ತು ಸಾಮರಸ್ಯ ಮೂಡಲು ಸಾಮೂಹಿಕ ಭಜನೆ ಹಾಗೂ ಪೂಜೆಗಳು ಪೂರಕವಾಗಿವೆ ಎಂದು ತಿಳಿಸಿದ ಶ್ರೀಗಳು, ನೆರೆದಿದ್ದ ಭಕ್ತರಿಗೆ ಫಲ-ಮಂತ್ರಾಕ್ಷತೆ ನೀಡಿ ಲೋಕಕಲ್ಯಾಣಕ್ಕಾಗಿ ಹರಸಿದರು. ಕಾರ್ಯಕ್ರಮದಲ್ಲಿ ಕಂಬದಹಳ್ಳಿ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಉಪಸ್ಥಿತರಿದ್ದರು.

ವಿಶೇಷ ಪೂಜಾ ಕೈಂಕರ್ಯಗಳು:
ಉತ್ಸವದ ಅಂಗವಾಗಿ ಕುಮದ್ವತಿ ತೀರ್ಥದಿಂದ ಪವಿತ್ರ ಅಗ್ರೋದಕವನ್ನು ಮಂಗಳವಾದ್ಯಗಳ ಮೆರವಣಿಗೆಯೊಂದಿಗೆ ತಂದು, ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಜಿನಾಗಮ ವಿಧಿಯಂತೆ ಅಭಿಷೇಕ ಮತ್ತು ಪೂಜೆ ನೆರವೇರಿಸಲಾಯಿತು. ವಿಶೇಷವಾಗಿ ಕಿತ್ತಳೆ, ಸೇಬು ಸೇರಿದಂತೆ ವಿವಿಧ ಬಗೆಯ ಹಣ್ಣು ಹಾಗೂ ಪುಷ್ಪಗಳಿಂದ ಮಾಡಿದ ಅಲಂಕಾರ ಭಕ್ತರ ಗಮನ ಸೆಳೆಯಿತು.
ಇದೇ ವೇಳೆ ಕ್ಷೇತ್ರದ ಶ್ರೀ ಆದಿನಾಥ ಸ್ವಾಮಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ ಹಾಗೂ ಕ್ಷೇತ್ರಪಾಲ ಮತ್ತು ನಾಗ ಸನ್ನಿಧಿಗಳಲ್ಲಿ ಭಕ್ತಾದಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಾತ್ರಿ ಸಂಪ್ರದಾಯದಂತೆ ಜಿನನಾಮ ಸ್ತುತಿ ಹಾಗೂ ಅಷ್ಟಾವಿಧಾನ ಸೇವೆಗಳು ನೆರವೇರಿದವು.
ಪೂಜಾ ಸೇವಾಕರ್ತರಾದ ವೇಣೂರಿನ ಪ್ರವೀಣ ಇಂದ್ರ ಅವರ ಕುಟುಂಬವನ್ನು ಶ್ರೀಗಳು ವಿಶೇಷವಾಗಿ ಗೌರವಿಸಿ ಆಶೀರ್ವದಿಸಿದರು.
ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಮಂಡಳಿಯ ಸದಸ್ಯೆಯರು ಹಾಗೂ ಸ್ಥಳೀಯ ಮತ್ತು ಪರವೂರಿನ ನೂರಾರು ಶ್ರಾವಕ-ಶ್ರಾವಿಕೆಯರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

