ಹೊಸನಗರ : ಸ್ವಾತಂತ್ರ್ಯವೆಂದರೆ ಕೇವಲ ಬ್ರಿಟಿಷರ ಆಡಳಿತದಿಂದ ಮುಕ್ತಿಯಾಗುವುದಲ್ಲ. ದೇಶದ ಸಂವಿಧಾನ, ಪ್ರಜಾಪ್ರಭುತ್ವ, ಸಮಾನತೆ, ಸಹೋದರತ್ವ ಮತ್ತು ಸಾಮಾಜಿಕ ನ್ಯಾಯವನ್ನು ಕಾಪಾಡುವ ಜವಾಬ್ದಾರಿಯೂ, ನಮ್ಮ ನಮ್ಮ ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯಗಳನ್ನು ಅರಿತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿ
ಸಾಗುತ್ತಿರುತ್ತದೆ. ಇದಕ್ಕೆ ಇಂದಿನ ಭಾರತವೇ ಸಾಕ್ಷಿ. ಇಡೀ ಪ್ರಪಂಚದಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಜೊತೆಗೆ ನಮ್ಮ ದೇಶದಲ್ಲಿ ಎಲ್ಲ ಜಾತಿ, ಧರ್ಮದವರು ಇದ್ದು ಎಲ್ಲರೂ ನಾವೆಲ್ಲರೂ ಭಾರತೀಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ ಎಂದು ಹೊಸನಗರ ತಹಸೀಲ್ದಾರ್ ಭರತ್‌ರಾಜ್ ಹೇಳಿದರು.
ಅವರು ಇಲ್ಲಿನ ನೆಹರು ಮೈದಾನದಲ್ಲಿ 80ನೇ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಹೊಸನಗರ ತಾಲ್ಲೂಕು ತನ್ನ ಹಸಿರು ಪರಿಸರ, ನೈಸರ್ಗಿಕ ಸಂಪತ್ತು, ಕೃಷಿ, ಜಲಸಂಪನ್ಮೂಲ
ಹಾಗೂ ಪರಿಶ್ರಮಿ ಜನರಿಂದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ನಮ್ಮ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅರ್ಹ ಎಂದು ಅವರು ಹೇಳಿದರು.
ಬಹಳ ವರ್ಷಗಳ ಹೋರಾಟ, ತ್ಯಾಗ ಮತ್ತು ನಿರ್ಣಯದ ನಂತರ ಭಾರತವು ಅಂತಿಮವಾಗಿ ಬ್ರಿಟಿಷ್ ವಸಾಹತುಶಾಹಿ ಆಡಳಿತದ ಹಿಡಿತದಿಂದ ಹೊರಬಂದ ದಿನವನ್ನು ಇಂದು ನೆನಪಿಸುತ್ತದೆ. ಮಹಾತ್ಮರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ಯ ಸಿಕ್ಕಿದೆ. ಈ ದಿನದಂದು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದವರಿಗೆ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸಿದಂತಹ ಮಹಾತ್ಮ ಗಾಂಧೀಜಿ, ಭಗತ್ ಸಿಂಗ್, ಸುಭಾಷ್ ಚಂದ್ರ ಭೋಸ್, ಸರೋಜಿನಿ ನಾಯ್ಡು, ತಿಲಕ್ ಡಾ|| ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲ್ ಬಹುದ್ದೂರು ಶಾಸ್ತ್ರಿ, ಡಾ|| ಬಿ.ಆರ್ ಅಂಬೇಡ್ಕರ್ ಆದಿಯಾಗಿ ಎಲ್ಲರಿಗೂ ಸಮರ್ಪಣೆ ಅರ್ಪಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.
ನಾವೆಲ್ಲರೂ ಶ್ರೇಷ್ಠ ಪ್ರಜಾಪ್ರಭುತ್ವದ ಭಾಗಿಯಾಗಿದ್ದೇವೆ ಭಾರತ ದೇಶದ ಪ್ರಜೆಗಳಾದ ನಮಗೆ ನಮ್ಮೆಲ್ಲರಿಗೂ ಹಲವಾರು ಗುರುತುಗಳಿವೆ. ಅಂದರೆ ಜಾತಿ ಧರ್ಮ, ಭಾಷೆ ಹಾಗೂ ನಾವು ವಾಸಿಸುವ ಪ್ರದೇಶಗಳು ಇವುಗಳನ್ನು ನಾವು ನಮ್ಮ ಕುಟುಂಬಗಳು ವೃತ್ತಿಗಳೊಂದಿಗೆ ಗುರುತಿಸಿಕೊಳ್ಳುತೇವೆ. ಆದರೆ ಅದೆಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಗುರುತು ಇದೆ. ಅದೇ ನಾವು ಭಾರತೀಯರು ಎಂಬ ಹೆಗ್ಗಳಿಕೆ ಎಂದರು.

ಎಲ್ಲಿಯವರೆಗೆ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ ಯಾವ ದೇಶದ ಪ್ರಜೆಗಳು ಸ್ವಾತಂತ್ರ್ಯರಾಗಿರುತ್ತಾರೋ ಅಲ್ಲಿವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ, ಒಂದು ಕುಟುಂಬದ ಅಭಿವೃದ್ಧಿ ನಿರಂತರವಾಗಿ ಫಲಾನುಭವಿಗಳಿಗೆ ತಲುಪಿಸುವುದು, ಮೂಲಭೂತ ಸೌಕರ್ಯವನ್ನು ಬಲಪಡಿಸುವುದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡುವುದು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಆಡಳಿತದ ಪ್ರಮುಖ ಉದ್ದೇಶವಾಗಿದೆ.
ವಿದ್ಯಾರ್ಥಿಗಳೇ, ನೀವು ದೇಶದ ಭವಿಷ್ಯ. ಉತ್ತಮ ಶಿಕ್ಷಣದ ಜೊತೆಗೆ ಶಿಸ್ತು, ಪ್ರಾಮಾಣಿಕತೆ, ವೈಜ್ಞಾನಿಕ ಮನೋಭಾವ ಮತ್ತು ದೇಶಪ್ರೇಮವನ್ನು ಬೆಳೆಸಿಕೊಳ್ಳಿ. ಯುವಜನತೆ ತಮ್ಮ ಪ್ರತಿಭೆ ಮತ್ತು ಶಕ್ತಿಯನ್ನು ಸಮಾಜದ ಹಾಗೂ ರಾಷ್ಟ್ರದ ನಿರ್ಮಾಣಕ್ಕೆ ಬಳಸಬೇಕು.
ರೈತರು, ಕಾರ್ಮಿಕರು, ಮಹಿಳೆಯರು, ಯುವಕರು, ಹಿರಿಯರು ಹಾಗೂ ಸಮಾಜದ ಪ್ರತಿಯೊಂದು ವರ್ಗದ ಜನರ ಸಹಭಾಗಿತ್ವದಿಂದ ಮಾತ್ರ ನಮ್ಮ ತಾಲ್ಲೂಕು ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ. ಪರಿಸರ ಸಂರಕ್ಷಣೆ, ಸ್ವಚ್ಛತೆ, ಜಲ ಸಂರಕ್ಷಣೆ ಮತ್ತು ಸರ್ಕಾರಿ ಆಸ್ತಿಯ ರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸೋಣ ಎಂದರು.
ಜಿಟಿ-ಜಿಟಿ ಮಳೆಯಲ್ಲಿಯೂ ಅದ್ದೂರಿಯಾಗಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದ್ದು ಹೊಸನಗರದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಡಾ. ಲೋಕೇಶ್‌ರವರ ಸುಮಾರು 15 ವರ್ಷಗಳ ಕನಸಿನ ಎನ್.ಸಿ.ಸಿ ತಂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.

ಈ ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಸೀಲ್ದಾರ್ ಸುಧೀಂದ್ರ ಕುಮಾರ್, ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಗೌಡಪ್ಪ ಗೌಡರ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ, ಸಬ್ ಇನ್ಸ್‌ಪೆಕ್ಟರ್ ಶಂಕರ ಗೌಡ ಪಾಟೀಲ್, ನಾಡ ಹಬ್ಬಗಳ ಸಮಿತಿಯ ಸದಸ್ಯರಾದ ಎನ್ ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ಶಿಕ್ಷಕರಾದ ಧನಂಜಯ, ಸುಹಾಸ್, ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್, ನಿಕಟಪೂರ್ವ ಅಧ್ಯಕ್ಷ ವಿಜೇಂದ್ರ ಶೇಟ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ರಾಧಿಕ ರತ್ನಾಕರ್ ಶೆಟ್ಟಿ, ತಾಲ್ಲೂಕು ಕಛೇರಿಯ ಸಿಬ್ಬಂದಿಗಳಾದ ಮಂಜುನಾಥ್ ಕಟ್ಟೆ, ಚಿರಾಗ್, ರೇಣುಕಯ್ಯ, ಬಾಲಚಂದ್ರ ಹೊಸನಗರದ ಎಲ್ಲ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ತಾಲ್ಲೂಕಿನಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆ ಇನ್ನಿತರ ಮನರಂಜನೆ ಕಾರ್ಯಕ್ರಮ ಏರ್ಪಡಿಸಲಾಗುತ್ತು.

